ಶಿವಮೊಗ್ಗ | ಬಿಟಿವಿ ಜಿಲ್ಲಾ ವರದಿಗಾರ ಅನಿಲ್ ಇನ್ನಿಲ್ಲ

ಶಿವಮೊಗ್ಗ

ಶಿವಮೊಗ್ಗ, ಎರಡು ಬೈಕ್ ಗಳ ಮುಖಾಮುಖಿ ಡಿಕ್ಕಿ ಸಂಭವಿಸಿ ಬಿಟಿವಿ ಶಿವಮೊಗ್ಗ ಜಿಲ್ಲಾ ವರದಿಗಾರ ಅನಿಲ್ ಕುಮಾರ್ ನಾಯ್ಕ (44) ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ.

ನಗರದ ಶುಭಮಂಗಳ ಪಕ್ಕದ ಆಟೋ ಕಾಂಪ್ಲೆಕ್ಸ್ ರಸ್ತೆಯಲ್ಲಿ ಸಂಭವಿಸಿದ ಬೈಕ್ ಗಳೆರಡರ ನಡುವಿನ ಡಿಕ್ಕಿಯಲ್ಲಿ ಪತ್ರಕರ್ತ ಬಿಟಿವಿ ಅನಿಲ್ ಇಂದು ಮಧ್ಯಾಹ್ನ ನಿಧನರಾಗಿದ್ದಾರೆ.

ಅಪಘಾತ ಭಾನುವಾರ ರಾತ್ರಿ ಸಂಭವಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮ್ಯಾಕ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಮೃತ ಪತ್ರಕರ್ತ ಅನಿಲ್ ತಮ್ಮ ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿದ್ದಾಗ ಮತ್ತೊಂದು ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಚಿಂತಾಜನಕ ಸ್ಥಿತಿ ತಲುಪಿದ್ದರು.

ಅನಿಲ್ ಅವರಿಗೆ ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಇದ್ದಾರೆ. ಈ ಮೊದಲು ಟಿವಿ9 ಚಿಕ್ಕಮಗಳೂರು ಜಿಲ್ಲಾ ಕ್ಯಾಮರಾಮನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಅನಿಲ್ ನಂತರ ಬಿಟಿವಿಗೆ ಶಿವಮೊಗ್ಗ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಅನಿಲ್ ನಿಧನಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಶಿವಮೊಗ್ಗ ಜಿಲ್ಲಾ ಘಟಕ ಹಾಗೂ ಪತ್ರಕರ್ತರ ಬಳಗ ತೀವ್ರ ಸಂತಾಪ‌ ಸೂಚಿಸಿವೆ.

ನಮ್ಮ ಇ-ಕನ್ನಡ ಮಾಧ್ಯಮದ ಮೂಲಕ ಅನಿಲ್ ಅವರ ನಿಧನಕ್ಕೆ ಸಂತಾಪ ಸೂಚಿಸುವುದರೊಂದಿಗೆ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇವೆ.

Author