ಶಿವಮೊಗ್ಗ | ನೆಹರು ಕ್ರೀಡಾಂಗಣದಲ್ಲಿ ಬೆರಿಲ್ ಆಕ್ಸ್‌ಫರ್ಡ್ ಒಲಂಪಿಕ್ಸ್

ಶಿವಮೊಗ್ಗ

ಶಿವಮೊಗ್ಗ ನಗರದ ನೆಹರು ಕ್ರೀಡಾಂಗಣದಲ್ಲಿ ಶಿವಮೊಗ್ಗದ ಆಕ್ಸ್ಫರ್ಡ್ ಆಂಗ್ಲ ಶಾಲೆ ಮತ್ತು ಹೊಳಲೂರಿನ ಆಕ್ಸ್ಫರ್ಡ್ ಸರಸ್ವತಿ ಮಂದಿರದ ವಿದ್ಯಾರ್ಥಿಗಳಿಗೆ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು.

ಈ ಕ್ರೀಡಾಕೂಟವನ್ನು ಬಲೂನ್ ಮತ್ತು ಪಾರಿವಾಳವನ್ನು ಹಾರಿ ಬಿಡುವುದರ ಮೂಲಕ ವಿದ್ಯುಕ್ತವಾಗಿ ಆಕ್ಸ್ಫರ್ಡ್ ಆಡಳಿತ ಮಂಡಳಿ ಚಾಲನೆ ನೀಡಿತು.

ವೇದಿಕೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಏಕಲವ್ಯ ಪ್ರಶಸ್ತಿ ಪುರಸ್ಕೃತ ನೇತ್ರಾವತಿಯವರು ಮಾತನಾಡಿ ವಿದ್ಯಾರ್ಥಿಗಳು ಯಾವಾಗಲೂ ಪುಟ್ಟ ಕನಸನ್ನು ಕಾಣಬಾರದು ದೊಡ್ಡ ಕನಸನ್ನೇ ಕಾಣಬೇಕು ಅದನ್ನು ನನಸಾಗಿಸಿಕೊಳ್ಳುವಂತೆ ಸಾಗಬೇಕು ಎಂದು ರಾಷ್ಟ್ರಪತಿಯಾಗಿದ್ದ ಅಬ್ದುಲ್ ಕಲಾಂ ರವರ ಹೇಳಿಕೆಯನ್ನು ಪ್ರಸ್ತಾಪಿಸಿದರು.

ಹೇಗೆ ಪುಟ್ಟ ಇರುವೆಯೊಂದು ತಾನು ಸಾಗುವ ದಾರಿಯಲ್ಲಿ ಎಷ್ಟೇ ಕಠಿಣ ಸವಾಲು ಬಂದರೂ ಪರಿಶ್ರಮದಿಂದ ಮುಂದೆ ಸಾಗುತ್ತದೆ ಎಂಬುದನ್ನು ವಿವರಿಸುತ್ತಾ ವಿದ್ಯಾರ್ಥಿಗಳು ಕೂಡ ಜೀವನದಲ್ಲಿ ಬರುವ ಎಲ್ಲಾ ಹಂತಗಳ ಕಠಿಣ ಸವಾಲುಗಳನ್ನು ಎದುರಿಸಿ ಮುನ್ನಡೆದಾಗ ಮಾತ್ರ ತಮ್ಮ ಗುರಿಯನ್ನು ತಲುಪಲು ಸಾಧ್ಯ ಎಂದು ಹೇಳಿದರು.

ಕ್ರೀಡೆಯಲ್ಲಿ ತಮ್ಮ ಸಾಧನೆಯ ಕುರಿತ ಘಟನೆಯನ್ನು ಮೆಲುಕು ಹಾಕಿದ ನೇತ್ರಾವತಿ ತಾವು ಕ್ರೀಡೆಯ ಆರಂಭಿಕ ದಿನಗಳಲ್ಲಿ ತರಬೇತಿ ಪಡೆಯುತ್ತಿದ್ದಾಗ ತನ್ನ ತರಬೇತುದಾರರ ಬಳಿ ಭಾರತವನ್ನು ಪ್ರತಿನಿಧಿಸಿದ್ದ ಬ್ಲೇಜರ್ ಕೋಟ್ ಇರುವುದನ್ನು ನೋಡಿ ತಾನು ಅದನ್ನು ಒಮ್ಮೆ ಹಾಕಿಕೊಳ್ಳಬೇಕೆಂದು ಆಸೆ ಪಟ್ಟಿದ್ದರು. ಇದಕ್ಕೆ ತರಬೇತುದಾರರು ಅದು ನಾನು ಸಂಪಾದಿಸಿದ ಬ್ಲೇಜರ್ ಕೋಟ್ ನೀನು ಅದನ್ನು ಹಾಕಬೇಕಾದರೆ ನೀನೆ ಸಂಪಾದಿಸು ಎಂದು ಹೇಳಿದ್ದರು. ಇದನ್ನು ಸವಾಲಾಗಿ ಸ್ವೀಕರಿಸಿದ್ದಲ್ಲದೆ ಛಲ ಬಿಡದೆ ಕಠಿಣ ಪರಿಶ್ರಮ ಹಾಕಿ ಕ್ರೀಡೆಯಲ್ಲಿ ರಾಜ್ಯ, ರಾಷ್ಟ್ರ ಮಟ್ಟದ ಪಂದ್ಯಗಳಲ್ಲಿ ಪ್ರತಿನಿಧಿಸಿ ಬಂಗಾರದ ಪದಕಗಳನ್ನು ಗೆಲ್ಲುತ್ತಾ ಸಾಗಿ ಸೌತ್ ಆಫ್ರಿಕಾದಲ್ಲಿ ಅಂತರಾಷ್ಟ್ರೀಯ ಪಂದ್ಯಾವಳಿಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು .

ಆಗ ತನಗೆ ಇಂಡಿಯಾ ಎಂದು ಬರೆದಿದ್ದ ಬ್ಲೇಜರ್ ಕೋಟ್ ಧರಿಸುವ ಅವಕಾಶ ಸಿಕ್ಕಿತ್ತು. ಇದನ್ನು ಧರಿಸಿ ಮಧ್ಯರಾತ್ರಿಯ ವೇಳೆಗೆ ತಮ್ಮ ತರಬೇತುದಾರರಿಗೆ ಕರೆ ಮಾಡಿ ನೋಡಿ ನಾನು ಕೂಡ ಇಂಡಿಯಾ ಹೆಸರಿನ ಬ್ಲೇಜರ್ ಕೋಟ್ ಸಂಪಾದಿಸಿದ್ದೇನೆ ಎಂದು ಹೇಳಿದ್ದರು.ಆಗ ತರಬೇತುದಾರರು ಶಹಬ್ಬಾಸ್ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದನ್ನು ವೇದಿಕೆಯಲ್ಲಿ ಮೆಲುಕು ಹಾಕುತ್ತಾ ಅದೇ ಅಂತರಾಷ್ಟ್ರೀಯ ಸ್ಪರ್ಧೆಯಲ್ಲಿ ಕೇವಲ ಪಾಲ್ಗೊಂಡಿದ್ದು ಮಾತ್ರವಲ್ಲದೆ ತಾವು ಪದಕ ಗೆದ್ದು ವೈಯಕ್ತಿಕ ಸಾಧನೆಯ ಜೊತೆಗೆ ದೇಶಕ್ಕೆ ಕೀರ್ತಿ ತಂದಿದ್ದು ತಮ್ಮ ಜೀವನದಲ್ಲಿ ಅತ್ಯಂತ ಸಂತಸದ ಕ್ಷಣ ಎಂದರು. ವೇದಿಕೆಯ ಕಾರ್ಯಕ್ರಮದಲ್ಲಿ ಆಕ್ಸ್ಫರ್ಡ್ ಆಡಳಿತ ಮಂಡಳಿಯ ಟ್ರಸ್ಟ್ ನ ಅಧ್ಯಕ್ಷ ಶ್ರೀನಿವಾಸ್ ಡಿ ಆರ್, ಕಾರ್ಯದರ್ಶಿ ಲೋಕೇಶ್ ಡಿ ಆರ್ , ಖಜಾಂಚಿ ಶ್ರೀನಿವಾಸ್ ವಿ ಎನ್, ಟ್ರಸ್ಟಿಗಳಾದ ಜಯಮ್ಮ , ಗಿರಿಯಪ್ಪ, ಆಕ್ಸ್‌ಫರ್ಡ್ ಇಂಗ್ಲಿಷ್ ಶಾಲೆಯ ಪ್ರಾಂಶುಪಾಲರಾದ ಅಮೃತ, ಆಕ್ಸ್‌ಫರ್ಡ್ ಸರಸ್ವತಿ ಮಂದಿರದ ಮುಖ್ಯೋಪಾಧ್ಯಾಯಿನಿ ಪಲ್ಲವಿ ರಾಜೇಶ್ ಸೇರಿದಂತೆ ಬೋಧಕ ಸಿಬ್ಬಂದಿಗಳು ಕ್ರೀಡಾಕೂಟದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ವಿದ್ಯಾರ್ಥಿಗಳು ವಾಲಿಬಾಲ್, ಕಬ್ಬಡಿ, ತ್ರೋಬಾಲ್, ಶಾಟ್ ಪುಟ್ , ಲಾಂಗ್ ಜಂಪ್, 100 ಮೀಟರ್, 200 ಮೀಟರ್ 800 ಮೀಟರ್ ರಿಲೇ ಮೊದಲಾದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿದ್ಯಾರ್ಥಿಗಳು ಬಹುಮಾನ ತಮ್ಮದಾಗಿಸಿಕೊಂಡರು

Author