ದಾವಣಗೆರೆ ದಕ್ಷಿಣ ; ಕಾಂಗ್ರೆಸ್‌ನಲ್ಲಿ ಟಿಕೆಟ್‌ಗಾಗಿ ಫೈಟ್ ; ಸರತಿ ಸಾಲಿನಲ್ಲಿ ಮುಸಲ್ಮಾನ್ ಆಕಾಂಕ್ಷಿಗಳು

ದಾವಣಗೆರೆ

ಬೆಂಗಳೂರು, ಶಾಮನೂರು ಶಿವಶಂಕರಪ್ಪ ನಿಧನದಿಂದ ತೆರವಾದ ದಾವಣಗೆರೆ ದಕ್ಷಿಣ ವಿಧಾನಸಭೆ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆಗೂ ಮುನ್ನವೇ ಆಕಾಂಕ್ಷಿಗಳ ದಂಡು ಕೈ ನಾಯಕರಿಗೆ ತಲೆ ನೋವು ಉಂಟು ಮಾಡಿದೆ.

ಟಿಕೆಟ್ ಗಾಗಿ ಭಾರೀ ಫೈಟ್ ನಡೆಯುತ್ತಿದ್ದು, ಕ್ಷೇತ್ರವನ್ನು ತಮ್ಮಲ್ಲೇ ಉಳಿಸಿಕೊಳ್ಳಲು ಶಾಮನೂರು ಕುಟುಂಬ ಪ್ರಯತ್ನ ನಡೆಸುತ್ತಿದ್ದರೆ, ಇತ್ತ ಮುಸ್ಲಿಂ ಸಮುದಾಯದ ಬಾಹುಲ್ಯ ಹೊಂದಿರುವ ಕ್ಷೇತ್ರದಲ್ಲಿ ನಮಗೆ ಟಿಕೆಟ್ ಕೊಡಬೇಕು ಎಂದು ಕಾಂಗ್ರೆಸ್ ಮುಸ್ಲಿಂ ನಾಯಕರು ಪಟ್ಟು ಹಿಡಿದಿದ್ದಾರೆ. ಹಾಗಾಗಿ ಟಿಕೆಟ್ ಯಾರಿಗೆ ಎಂಬುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.ದಾವಣಗೆರೆ ದಕ್ಷಿಣದಲ್ಲಿ ಶಾಮನೂರು ಶಿವಶಂಕರಪ್ಪ ಸತತವಾಗಿ ಗೆಲ್ಲುತ್ತಾ ಬಂದಿದ್ದಾರೆ.

ಈ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯದ ಪ್ರಭಾವ ಇದ್ದರೂ ಶಾಮನೂರು ಕುಟುಂಬಕ್ಕೆ ಸಂಪೂರ್ಣ ಹಿಡಿತ ಇತ್ತು.

ಆದರೆ ‘ನನ್ನ ನಂತರದಲ್ಲಿ ಮುಸ್ಲಿಮರಿಗೆ ಟಿಕೆಟ್ ಸಿಗಲು ಅವಕಾಶ ಇದೆ’ ಎಂದು ಈ ಹಿಂದೆ ಶಾಮನೂರು ಶಿವಶಂಕರಪ್ಪ ಅವರು ಬದುಕಿದ್ದಾಗ ಹೇಳಿಕೆ ನೀಡಿದ್ದರು ಎಂಬುವುದು ಮುಸ್ಲಿಂ ಟಿಕೆಟ್ ಆಕಾಂಕ್ಷಿಗಳ ವಾದವಾಗಿದೆ. ಹಾಗಾಗಿ ಟಿಕೆಟ್ ನೀಡುವಾಗ ಇದನ್ನು ಪರಿಗಣಿಸಬೇಕು ಎಂಬುವುದು ಬೇಡಿಕೆಯಾಗಿದೆ.

ಚರ್ಚೆಗೆ ಎಡೆಮಾಡಿಕೊಡುತ್ತಿರು ಅಂಕಿ- ಅಂಶಗಳುದಾವಣಗೆರೆ ದಕ್ಷಿಣ (ಕ್ಷೇತ್ರ ನಂ. 107) ವಿಧಾನಸಭಾ ಕ್ಷೇತ್ರದ ಮತದಾರರ ಅಂಕಿಅಂಶಗಳು ಮತ್ತು ಜನಸಂಖ್ಯಾ ವಿವರಗಳನ್ನು ಗಮನಿಸಿದರೆ, 2025ರ ಆರಂಭದ ಮಾಹಿತಿಯಮತೆ , ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಒಟ್ಟು ಮತದಾರರ ಸಂಖ್ಯೆ ಸುಮಾರು 221,034 ರಷ್ಟಿದೆ. ಈ ಪೈಕಿ ಪುರುಷ ಮತದಾರರು 110,120 ಹಾಗೂ ಮಹಿಳಾ ಮತದಾರರ ಸಂಖ್ಯೆ 110,880 ಇದೆ. ತೃತೀಯ ಲಿಂಗಿಗಳು 34 ಮಂದಿ ಮತದಾರರು ಇದ್ದಾರೆ.

ದಾವಣಗೆರೆ ದಕ್ಷಿಣ ಕ್ಷೇತ್ರವು ಗಣನೀಯ ಪ್ರಮಾಣದ ಅಲ್ಪಸಂಖ್ಯಾತ ಸಮುದಾಯದ ಜನಸಂಖ್ಯೆಯನ್ನು ಹೊಂದಿದೆ. ಅದರಲ್ಲೂ ವಿಶೇಷವಾಗಿ ಮುಸ್ಲಿಂ ಸಮುದಾಯವು ಇಲ್ಲಿ ಚುನಾವಣಾ ಫಲಿತಾಂಶ ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದೇ ಹೇಳಲಾಗುತ್ತಿದೆ.

ಒಂದು ಅಂದಾಜಿನ ಪ್ರಕಾರ, ಮುಸಲ್ಮಾನ್ ಒಟ್ಟು ಮತದಾರರ ಪೈಕಿ ಸುಮಾರು 35% ರಿಂದ 40% ಮತದಾರರು ಈ ಭಾಗದಲ್ಲಿ ಇದ್ದಾರೆ. ಮುಸ್ಲಿಮರನ್ನು ಹೊರತಾಗಿ ಜೈನರು ಮತ್ತು ಕ್ರಿಶ್ಚಿಯನ್ನರು ಸಣ್ಣ ಪ್ರಮಾಣದಲ್ಲಿದ್ದಾರೆ.

ಯಾವ ಜಾತಿಯ ಮತದಾರರು ಪ್ರಮಾಣ ಎಷ್ಟು? ( ಅಂದಾಜು ಲೆಕ್ಕಾಚಾರ)

ದಾವಣಗೆರೆ ಜಿಲ್ಲೆಯಲ್ಲಿ ಲಿಂಗಾಯತ ಸಮುದಾಯ ಪ್ರಬಲ ರಾಜಕೀಯ ಶಕ್ತಿಯಾಗಿದೆ. ಆದರೆ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರ ನಂತರದ ಸ್ಥಾನದಲ್ಲಿ ಲಿಂಗಾಯತ ಸಮುದಾಯ ಇದೆ. ಪರಿಶಿಷ್ಟ ಜಾತಿ ಒಟ್ಟು ಜನಸಂಖ್ಯೆಯ ಸುಮಾರು 14.25% ಹಾಗೂ ಪರಿಶಿಷ್ಟ ಪಂಗಡ ಒಟ್ಟು ಜನಸಂಖ್ಯೆಯ ಸುಮಾರು 6.58% ರಷ್ಟಿದೆ.ಕುರುಬರು ಮತ್ತು ಇತರ ಹಿಂದುಳಿದ ವರ್ಗಗಳ ಮತಗಳು ಸಹ ಇಲ್ಲಿ ನಿರ್ಣಾಯಕವಾಗಿದೆ.

ಈ ಸಮುದಾಯದ ಮತಗಳು ಫಲಿತಾಂಶದ ಮೇಲೆ ಪ್ರಭಾವ ಬೀರುತ್ತವೆ. ಅಲ್ಪಸಂಖ್ಯಾತರು ಮತ್ತು ಎಸ್ ಸಿ, ಎಸ್ ಟಿ ಮತದಾರರ ಸಂಖ್ಯೆ ಹೆಚ್ಚಿರುವುದರಿಂದ ಈ ಕ್ಷೇತ್ರವು ಸಾಂಪ್ರದಾಯಿಕವಾಗಿ ಕಾಂಗ್ರೆಸ್ ಭದ್ರಕೋಟೆಯಾಗಿದೆ.

ಯಾರೆಲ್ಲಾ ಆಕಾಂಕ್ಷಿಗಳು?

ಶಾಮನೂರು ಶಿವಶಂಕರಪ್ಪ ನಿಧನದಿಂದ ತೆರವಾದ ಸ್ಥಾನ ಆ ಕುಟುಂಬಕ್ಕೆ ಸಿಗಬೇಕು ಎಂಬುವುದು ಒಂದು ವಾದವಾಗಿದೆ. ಈ ಹಿನ್ನೆಲೆಯಲ್ಲಿ ಸಮರ್ಥ್ ಮಲ್ಲಿಕಾರ್ಜುನ ಅವರಿಗೆ ಟಿಕೆಟ್ ನೀಡಬೇಕು ಎಂಬುವುದು ಬೇಡಿಕೆ ಆಗಿದೆ. ಈಗಾಗಲೇ ಸಮರ್ಥ್ ಅವರು ರಾಜಕೀಯವಾಗಿ ಸಕ್ರಿಯವಾಗಿದ್ದಾರೆ. ಈ ಮೂಲಕ ಪರೋಕ್ಷವಾಗಿ ನಾನು ಟಿಕೆಟ್ ಆಕಾಂಕ್ಷಿ ಎಂಬುವುದರ ಸುಳಿವು ನೀಡಿದ್ದಾರೆ.

ಸರದಿ ಸಾಲಿನಲ್ಲಿ ಮುಸ್ಲಿಂ ಆಕಾಂಕ್ಷಿಗಳು

ದಾವಣಗೆರೆ ದಕ್ಷಿಣಕ್ಕೆ ಸಾಕಷ್ಟು ಮಂದಿ ಮುಸ್ಲಿಂ ಆಕಾಂಕ್ಷಿಗಳು ಇದ್ದಾರೆ. ವಿಧಾನಪರಿಷತ್ ಸದಸ್ಯರಾದ ಅಬ್ದುಲ್ ಜಬ್ಬಾರ್, ಸೈಯದ್ ಖಾಲಿದ್ ಆಹ್ಮದ್,ಎಎಂಅರ್ ಹುಸೇನ್ ಸೇರಿದಂತೆ ಹಲವರು ಟಿಕೆಟ್ ಗಾಗಿ ಲಾಬಿ ನಡೆಸುತ್ತಿದ್ದಾರೆ. ಆದರೆ ಅಂತಿಮ ತೀರ್ಮಾನ ಕೈಗೊಳ್ಳುವುದು ಹೈಕಮಾಂಡ್ ಆಗಿದೆ.

Author