ಸಾಗರ | ಮಾ. 2 ರಂದು ; ಸಿಗಂದೂರು ಸೇತುವೆಯ ಮೇಲೆ ರೈತರಿಂದ ಬೃಹತ್ ರಸ್ತೆ ತಡೆ ಚಳವಳಿ : ತೀ. ನ. ಶ್ರೀನಿವಾಸ್ ಎಚ್ಚರಿಕೆ

ಶಿವಮೊಗ್ಗ

ಸಾಗರ, ಮಲೆನಾಡಿನ ರೈತರ ದಶಕಗಳ ಭೂ ಸಮಸ್ಯೆಗಳನ್ನು ಬಗೆಹರಿಸಲು ರಾಜ್ಯ ಸರ್ಕಾರ ಫೆಬ್ರವರಿ ಅಂತ್ಯದೊಳಗೆ ಕ್ರಮ ಕೈಗೊಳ್ಳದಿದ್ದರೆ,

ಮಾರ್ಚ್ 2ರಂದು ನೂತನ ಸಿಗಂದೂರು ಸೇತುವೆಯ ಮೇಲೆ ಬೃಹತ್ ರಸ್ತೆ ತಡೆ ಚಳವಳಿ ನಡೆಸುವುದಾಗಿ ಮಲೆನಾಡು ರೈತ ಹೋರಾಟ ಸಮಿತಿಯ ಜಿಲ್ಲಾ ಸಂಚಾಲಕ ತೀ.ನ. ಶ್ರೀನಿವಾಸ್ ಎಚ್ಚರಿಕೆ ನೀಡಿದ್ದಾರೆ.

ಸಾಗರ ಪಟ್ಟಣದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದು ಸಾವಿರ ದಿನಗಳು ಕಳೆದರೂ ಮಲೆನಾಡಿನ ರೈತರಿಗೆ ನೀಡಿದ ಭರವಸೆಗಳನ್ನು ಈಡೇರಿಸಿಲ್ಲ.

ಚುನಾವಣೆಗೂ ಮುನ್ನ ಮಧು ಬಂಗಾರಪ್ಪ ಅವರು ಪಾದಯಾತ್ರೆ ನಡೆಸಿದ್ದರು ಮತ್ತು ಅಂದು ವಿರೋಧ ಪಕ್ಷದಲ್ಲಿದ್ದ ಸಿದ್ದರಾಮಯ್ಯನವರು ಗ್ವಾಲಿಯಲ್ಲಿ ನಡೆದ ಸಮಾವೇಶದಲ್ಲಿ ಮುಳುಗಡೆ ಸಂತ್ರಸ್ತರ ಸಮಸ್ಯೆಗಳನ್ನು ತಕ್ಷಣವೇ ಪರಿಹರಿಸುವುದಾಗಿ ಮಾತು ಕೊಟ್ಟಿದ್ದರು. ಆದರೆ ಇಂದು ಆ ಭರವಸೆಗಳು ಕೇವಲ ಘೋಷಣೆಯಾಗಿ ಉಳಿದಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶರಾವತಿ ಮುಳುಗಡೆ ಸಂತ್ರಸ್ತರಿಗೆ ಹಕ್ಕುಪತ್ರ ನೀಡುವ ವಿಚಾರದಲ್ಲಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಿ ಸುಮ್ಮನಾಗಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಯದರ್ಶಿಗಳು ಜಂಟಿಯಾಗಿ ಕುಳಿತು ಸಮಸ್ಯೆ ಬಗೆಹರಿಸುವಂತೆ ಸೂಚಿಸಿ 14 ತಿಂಗಳು ಕಳೆದರೂ ಯಾವುದೇ ಪ್ರಗತಿ ಕಂಡುಬಂದಿಲ್ಲ. ಇತ್ತ ವಿದ್ಯುತ್ ಮತ್ತು ನೀರಾವರಿ ಯೋಜನೆಗಳಿಗೆ ಭೂಮಿ ಬಿಟ್ಟುಕೊಟ್ಟ ರೈತರ ಮೇಲೆಯೇ ಸರ್ಕಾರ ಕೇಸುಗಳನ್ನು ದಾಖಲಿಸುತ್ತಿರುವುದು ಮಲೆನಾಡಿನ ರೈತರ ಬಗ್ಗೆ ಸರ್ಕಾರದ ದ್ವಂದ್ವ ಧೋರಣೆಯನ್ನು ಎತ್ತಿ ತೋರಿಸುತ್ತಿದೆ ಎಂದು ಅವರು ಆರೋಪಿಸಿದರು.

ಹಾವೇರಿಯಲ್ಲಿ ನಡೆದ ಸರ್ಕಾರದ ಸಾವಿರ ದಿನಗಳ ಸಂಭ್ರಮದ ಸಮಾವೇಶದಲ್ಲಿ ಉತ್ತರ ಕರ್ನಾಟಕದ ರೈತರಿಗೆ ಹಕ್ಕುಪತ್ರ ವಿತರಿಸಿದ ಮುಖ್ಯಮಂತ್ರಿಗಳು, ಮಲೆನಾಡಿನ ರೈತರ ಹಕ್ಕುಪತ್ರಗಳನ್ನು ಕಸಿಯುತ್ತಿದ್ದಾರೆ.

ನಮ್ಮ ತಾಳ್ಮೆ ಮೀರಿದ್ದು, ರೈತರ ಹಿತರಕ್ಷಣೆಗಾಗಿ ಕಾನೂನು ಭಂಗ ಚಳವಳಿ ನಡೆಸಲು ನಾವು ಸಿದ್ಧರಿದ್ದೇವೆ.

ಮಾ. 2ರಂದು ಸಿಗಂದೂರು ಸೇತುವೆಯ ಮೇಲೆ ನಡೆಯುವ ಹೋರಾಟವು ಸರ್ಕಾರದ ಕಣ್ಣು ತೆರೆಸಲಿದೆ ಎಂದು ಅವರು ಗುಡುಗಿದರು.

Author