ದಾವಣಗೆರೆ, ಎಲ್ಲಾ ಪೋಷಕರು ತಮ್ಮ ಮಕ್ಕಳ ಭವಿಷ್ಯ ಚೆನ್ನಾಗಿರಲಿ ಎಂದು ಬಯಸುವುದು, ಈ ನಿಟ್ಟಿನಲ್ಲಿ ಅವರನ್ನು ಪ್ರತಿಷ್ಠಿತ ಶಾಲೆಗಳಲ್ಲಿ ಸೇರಿಸಿ ಒಳ್ಳೆಯ ಶಿಕ್ಷಣ ಕೊಡಿಸುವುದು, ಓದಿನತ್ತ ಆಸಕ್ತಿ ಬೆಳೆಸಲು, ಪರೀಕ್ಷೆಗೆ ಸಿದ್ಧತೆ ಕೈಗೊಳ್ಳಲು ಶೈಕ್ಷಣಿಕ ಪುಸ್ತಕಗಳು ಸೇರಿದಂತೆ ಇನ್ನಿತರ ಪರಿಕರಗಳನ್ನು ಕೊಡಿಸುತ್ತಾರೆ.
ಅದರಲ್ಲೂ ತಂದೆಗೆ ಹೆಣ್ಣುಮಕ್ಕಳ ಮೇಲೆ ಅಕ್ಕರೆ, ಕಾಳಜಿ ಹೆಚ್ಚಾಗಿಯೇ ಇರುತ್ತೆ. ಆದ್ರೆ ಜಿಲ್ಲೆಯಲ್ಲಿ ಇದೆಲ್ಲದಕ್ಕೆ ತದ್ವಿರುದ್ಧವಾದ ಘಟನೆಯೊಂದು ನಡೆದಿದೆ. ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಆರುಂಡಿ ಗ್ರಾಮದಲ್ಲಿ ಮಗಳಿಗೆ ಶಾಲೆಗೆ ಹೋಗಬೇಡ ಎಂದು ಆಕೆಯ ಪುಸ್ತಕಗಳನ್ನು ತಂದೆಯೇ ಸುಟ್ಟು ಹಾಕಿದ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.
ಇದರಿಂದ ನೊಂದ ಬಾಲಕಿ ಅಪ್ಪನ ವಿರುದ್ಧ ಪೊಲೀಸರ ಮೊರೆ ಹೋಗಿದ್ದಳು. 112ಕ್ಕೆ ಕರೆ ಮಾಡಿ ಮಗಳು ದೂರು ನೀಡಿದ್ದಳು. 2025-26ನೇ ಸಾಲಿನ ಎಸ್ಎಸ್ಎಲ್ ಸಿ ಪರೀಕ್ಷೆಗಳುಮಾರ್ಚ್ 18 ರಿಂದ ಆರಂಭವಾಗಲಿದ್ದು, ಎಪ್ರಿಲ್ 2ರ ವರೆಗೆ ನಡೆಯಲಿವೆ.
ಈ ನಡುವೆ ನ್ಯಾಮತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಆರುಂಡಿಯಲ್ಲಿ ಮದ್ಯ ವ್ಯಸನಿಯಾಗಿರುವ ತಂದೆ ಮಗಳ ಪುಸ್ತಕಗಳಿಗೆ ಬೆಂಕಿ ಹಚ್ಚಿ, ಅಮಾನವೀಯತೆ ಪ್ರದರ್ಶಿಸಿದ್ದಾನೆ. ಆತನ ಈ ವರ್ತನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಆರುಂಡಿ ಗ್ರಾಮದ ನಿವಾಸಿ ತಂದೆ (ಹೆಸರು ಬೇಡ) ಮದ್ಯಪಾನದ ವ್ಯಸನಕ್ಕೆ ಜೋತುಬಿದ್ದು ದಿನನಿತ್ಯ ಮನೆಯಲ್ಲಿ ಗಲಾಟೆ ಮಾಡುತ್ತಾನೆ. ಅಲ್ಲದೆ ಪುತ್ರಿ (ಅಪ್ರಾಪ್ತ ಬಾಲಕಿ)ಗೂ ಶಾಲೆಗೆ ಹೋಗಬೇಡ ಎಂದು ಕಿರಿಕ್ ಮಾಡಿದ್ದಾನೆ.ಇದನ್ನು ಸಹಿಸಿಕೊಳ್ಳದ ಶಾಲಾ ಬಾಲಕಿ, ತನ್ನ ತಂದೆ ಕುಡಿದು ಬಂದು ಗಲಾಟೆ ಮಾಡುವುದಲ್ಲದೆ, ತನ್ನನ್ನು ಶಾಲೆಗೂ ಕಳುಹಿಸುತ್ತಿಲ್ಲ ಎಂದು ಪೊಲೀಸರಿಗೆ ಕರೆ ಮಾಡಿ ದೂರಿದ್ದಾಳೆ.
10ನೇ ತರಗತಿ ಓದುತ್ತಿರುವ ಅಪ್ರಾಪ್ತ ವಯಸ್ಸಿನ ಮಗಳಿಗೆ ಶಾಲೆಗೆ ಹೋಗಬೇಡ ಎಂದು ಆಗ್ರಹಿಸಿದ್ದಲ್ಲದೆ, ಆಕೆಯ ಪುಸ್ತಕಗಳನ್ನು ಸುಟ್ಟು ಹಾಕಿ ಗಲಾಟೆ ಮಾಡಿದ್ದಾನೆ. ಬಾಲಕಿಯ ಕರೆಯ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮದ್ಯ ವ್ಯಸನಿಯಾದ ಆಕೆಯ ತಂದೆಗೆ ಕ್ಲಾಸ್ ತೆಗೆದುಕೊಂಡರು.
112 ಅಧಿಕಾರಿಗಳಾದ ಹೇಮರಾಜ್ ಮತ್ತು ರವಿಕುಮಾರ್ ಅವರು ಬಾಲಕಿಯ ಮನೆಗೆ ಭೇಟಿ ನೀಡಿ, ಆಕೆಯ ತಂದೆಗೆ ಬುದ್ಧಿವಾದ ಹೇಳಿದರು.ಬಾಲಕಿಗೆ ಆತ್ಮಸ್ಥೈರ್ಯ ತುಂಬಿದ ಪೊಲೀಸರು: ನ್ಯಾಮತಿ ಪೊಲೀಸ್ ಠಾಣೆಯ ಪಿಐ ರವಿ ಅವರ ನೇತೃತ್ವದಲ್ಲಿ ತಕ್ಷಣ ವಿದ್ಯಾರ್ಥಿನಿಯ ವ್ಯಾಸಂಗಕ್ಕೆ ಅಗತ್ಯ ಪುಸ್ತಕ, ನೋಟ್ ಬುಕ್ಗಳನ್ನು ಕೊಡಿಸಿ ಪೊಲೀಸರು ಆತ್ಮಸ್ಥೈರ್ಯ ತುಂಬಿದರು.
ನಂತರ ಸಂಬಂಧಪಟ್ಟ ಶಾಲಾ ಶಿಕ್ಷಕರಿಗೆ ಮಾಹಿತಿ ನೀಡಿದ ಪಿಐ ರವಿ ಅವರು ಬಾಲಕಿಯ ವಿದ್ಯಾಭ್ಯಾಸಕ್ಕೆ ಯಾವುದೇ ತೊಂದರೆ ಆಗದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.ನ್ಯಾಮತಿ ಪೊಲೀಸ್ ಮತ್ತು 112 ಪೊಲೀಸ್ ಸಿಬ್ಬಂದಿಯ ಈ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಸೇರಿದಂತೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.



