ಬೆಂಗಳೂರು, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳಲ್ಲಿ ಶಕ್ತಿ ಸ್ಮಾರ್ಟ್ ಕಾರ್ಡ್ ಅನುಷ್ಠಾನಗೊಳಿಸಲು ಸಚಿವ ಸಂಪುಟ ಸಭೆ ಗುರುವಾರ ಒಪ್ಪಿಗೆ ನೀಡಿದೆ.
ಆಧಾರ್ ಕಾರ್ಡ್ ಬೇಕಿಲ್ಲ:
ಶಕ್ತಿ ಯೋಜನೆಯಡಿ ಪ್ರಯಾಣಿಸುವ ಮಹಿಳಾ ಪ್ರಯಾಣಿಕರಿಗೆ ಶಕ್ತಿ ಸ್ಮಾರ್ಟ್ ಕಾರ್ಡ್ ವಿತರಿಸಲು ತೀರ್ಮಾನಿಸಲಾಗಿದೆ. ಶಕ್ತಿ ಸ್ಮಾರ್ಟ್ ಕಾರ್ಡ್ ಉಚಿತವಾಗಿ ವಿತರಿಸಲಾಗುವುದು. ಈ ಕಾರ್ಡ್ ಇದ್ದರೆ ಆಧಾರ್ ಕಾರ್ಡ್ ಬೇಕಿಲ್ಲ. ಶಕ್ತಿ ಯೋಜನೆಯಡಿ ಪ್ರಯಾಣಿಸಲು ಇರುವ ಷರತ್ತೇ ಸ್ಮಾರ್ಟ್ ಕಾರ್ಡ್ ಪಡೆಯಲು ಅನ್ವಯ ಎಂದು ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಸ್ಪಷ್ಟಪಡಿಸಿದರು.
ಉಚಿತ ಮತ್ತು ಶುಲ್ಕ ಪಾವತಿಸುವ ಪ್ರಯಾಣಿಕರಿಗಾಗಿ ಏಕೀಕೃತ, ಸಂಪರ್ಕರಹಿತ ಮತ್ತು ಪರಸ್ಪರ ಕಾರ್ಯ ನಿರ್ವಹಿಸಬಹುದಾದ ಶುಲ್ಕ ಸಂಗ್ರಹಣ ವ್ಯವಸ್ಥೆಯನ್ನು ಸುಗಮಗೊಳಿಸಲು ರಾಜ್ಯ ಸಾರಿಗೆ ಸಂಸ್ಥೆಗಳಾದ ಕ.ರಾ.ರ.ಸಾ. ನಿಗಮ, ಬೆಂ.ಮ.ಸಾ. ಸಂಸ್ಥೆ, ವಾ.ಕ.ಸಾ. ಸಂಸ್ಥೆ ಮತ್ತು ಕ.ಕ.ರ.ಸಾ. ನಿಗಮಗಳಲ್ಲಿ ಶಕ್ತಿ ಸ್ಮಾರ್ಟ್ ಕಾರ್ಡ್ ಮತ್ತು ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್ (ಎನ್.ಸಿ.ಎಂ.ಸಿ) ಅನುಷ್ಟಾನಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಿದೆ.
ಇದಕ್ಕಾಗಿ ವಿಶೇಷ ಉದ್ದೇಶದ ವಾಹನ (ಎಸ್.ಪಿ.ವಿ) ರಚನೆಗೆ ಅನುಮೋದಿಸಲಾಗಿದೆ.ಶಕ್ತಿ ಸ್ಮಾರ್ಟ್ ಕಾರ್ಡ್ ವ್ಯವಸ್ಥೆಯ ಮೌಲ್ಯಮಾಪನ, ಜಾರಿಗೊಳಿಸುವಿಕೆ ಹಾಗೂ ಕಾರ್ಯಗತಗೊಳಿಸುವಿಕೆಗೆ ಸಂಬಂಧಿಸಿದಂತೆ, ಸಂಪೂರ್ಣ ಪರಿಹಾರ ಸ್ಥಿರಗೊಳ್ಳುವವರೆಗೆ ಕನಿಷ್ಠ 5 ವರ್ಷಗಳ ಅವಧಿಗೆ ವ್ಯವಹಾರ ಸಲಹೆಗಾರರನ್ನು ನೇಮಕ ಮಾಡುವುದಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಉಚಿತ ಪ್ರಯಾಣವನ್ನು ಪಡೆಯುವವರು ಸೇರಿದಂತೆ ಎಲ್ಲಾ ಅರ್ಹ ವರ್ಗದ ಪ್ರಯಾಣಿಕರಿಗೆ ಶಕ್ತಿ ಸ್ಮಾರ್ಟ್ ಕಾರ್ಡ್ಗಳ ಖರೀದಿಯ ಬಗ್ಗೆ ಅನುಮೋದನೆಯ ಜೊತೆಗೆ ಕಾರ್ಡ್ ಉತ್ಪಾದನೆ, ವೈಯಕ್ತೀಕರಣ ಮತ್ತು ವಿತರಣಾ ವೆಚ್ಚಗಳನ್ನು ಮರುಪಡೆಯಲು ಕಾರ್ಡ್ ವೆಚ್ಚವನ್ನು ಪ್ರಯಾಣಿಕರಿಂದ ಸಂಗ್ರಹಿಸುವ ಅಧಿಕಾರ ನೀಡಲು ಮತ್ತು ಉಚಿತವಾಗಿ ಕಾರ್ಡ್ ಒದಗಿಸಲು ಸಚಿವ ಸಂಪುಟ ನಿರ್ಧರಿಸಿದೆ.



