ಶಿವಮೊಗ್ಗ ದೇಶ ಸ್ವಾತಂತ್ರ್ಯಾ ನಂತರ ಹಲವು ದಶಕಗಳ ನಂತರವೂ ಒತ್ತಾಯ ಪೂರ್ವಕ ದುಡಿಮೆ, ಲೈಂಗಿಕ ದೌರ್ಜನ್ಯ, ಭಿಕ್ಷಾಟನೆ ಮತ್ತು ಕಾನೂನು ಬಾಹಿರ ಅಂಗಾಂಗಗಳ ಜೋಡಣೆ ರೂಪದಲ್ಲಿ ಇಂದು ಹಲವಾರು ಮಹಿಳೆಯರು ಮತ್ತು ಮಕ್ಕಳು ಅನೈತಿಕ ಸಾಗಾಣಿಕೆಗೆ ಒಳಗಾಗುತ್ತಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂತೋಷ್ಎಂ.ಎಸ್ ಹೇಳಿದರು.
ಅವರು ಬುಧವಾರ ನಗರದ ಡಿ.ಎ.ಆರ್.ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಮಹಿಳೆಯರು ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆಕಾಯ್ದೆ ಕುರಿತು ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಮಾನವ ಸಾಗಾಣಿಕೆಯು ಒಂದು ಘೋರ ಅಪರಾಧವಾಗಿದೆ. ಪ್ರಪಂಚದಲ್ಲೆಡೆ ಅದರ ಪ್ರಭಾವವಿದ್ದು, ಅಸಮಾನತೆ. ತಾರತಮ್ಯತೆ ಮತ್ತು ದುರ್ಬಲತೆಗೆ ಕಾರಣವಾಗಿದೆ.
ಸಾಮಾನ್ಯ ಜನರ ಆಸೆ-ಆಕಾಕ್ಷೆಗಳನ್ನು ಬಳಸಿ ಲಾಭಗಳಿಸುತ್ತಿರುವ ಮಾನವ ಸಾಗಾಣಿಕೆದಾರರು ಅವರ ಮೂಲಭೂತ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿದ್ದಾರೆ.
ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಸರ್ಕಾರವು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಮಾನವ ಸಾಗಾಣಿಕೆದಾರರನ್ನು ಕಾನೂನಿನ ಪರಿಮಿತಿಯೊಳಗೆ ತರುವುದು ಮಾತ್ರವಲ್ಲದೆ ಸಂತ್ರಸ್ಥರಿಗೆ ಸುರಕ್ಷಿತ ಮತ್ತು ಉತ್ತಮ ಪುನರ್ವಸತಿ ಕಲ್ಪಿಸಲು ಬದ್ಧವಾಗಿದೆ ಎಂದರು.
ಕಳೆದ ಒಂದೂವರೆ ವರ್ಷದಲ್ಲಿ ಇಂತಹ ಯಾವುದೇ ಪ್ರಕರಣ ದಾಖಲಾಗಿಲ್ಲದಿರುವುದು ಸಮಾಧಾನದ ಸಂಗತಿಯೇ ಆಗಿದ್ದರೂ ೨೦೦ಕ್ಕೂ ಹೆಚ್ಚಿನ ಫೋಕ್ಸೋ ಮತ್ತು ೫೦ಕ್ಕೂ ಹೆಚ್ಚಿನ ಬಾಲ್ಯವಿವಾಹ ಪ್ರಕರಣಗಳು ದಾಖಲಾಗಿರುವುದು ವಿಷಾದದ ಸಂಗತಿಯಾಗಿದೆ ಎಂದ ಅವರು, ಈ ಎಲ್ಲಾ ಅನಿಷ್ಟಗಳ ನಿಯಂತ್ರಣಕ್ಕಾಗಿ ೧೫ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳಿಗೆ ಹೊಣೆಗಾರಿಕೆ ನೀಡಲಾಗಿದೆ.
ಪ್ರಕರಣವನ್ನು ದಾಖಲಿಸುವಲ್ಲಿ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧವೂ ಕಾನೂನಿನಲ್ಲಿ ಕ್ರಮಕ್ಕೆ ಅವಕಾಶ ಒದಗಿಸಲಾಗಿದೆ ಎಂದರು.



