ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿರುವ ಭ್ರಷ್ಟಾಚಾರ, ಸ್ವಜನ ಪಕ್ಷಪಾತದಿಂದಾಗಿ ಸಾರ್ವಜನಿಕ ಸಂಪನ್ಮೂಲ ಲೂಟಿಯಾಗಿರುವ ಕುರಿತು ಸೂಕ್ತ ಹಾಗೂ ನಿಷ್ಪಕ್ಷಪಾತವಾದ ತನಿಖೆ ನಡೆಸಲು ಕೋರಿ ಇಂದು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಗರ ಜೆಡಿಎಸ್ ಬೃಹತ್ ಪ್ರತಿಭಟನೆ ನಡೆಸಿದೆ.
ಶಿವಮೊಗ್ಗ ಮತ್ತು ಭದ್ರಾವತಿ ನಗರಗಳ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸಬೇಕಾದ ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಆಡಳಿತ ವ್ಯವಸ್ಥೆಯು ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಮತ್ತು ಅಕ್ರಮ ವ್ಯವಹಾರದಲ್ಲಿ ತೊಡಗಿದ್ದು 20.05.2023ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದಾಗಿನಿಂದ ಪ್ರಸಕ್ತ ದಿನಗಳವರೆಗಿನ ಪ್ರಾಧಿಕಾರದ ಕಾಮಗಾರಿಗಳ ಕುರಿತು ನಿಷ್ಪಕ್ಷಪಾತವಾದ ತನಿಖೆ ನಡೆಸಲು ವಿನಂತಿಸುತ್ತೇವೆ ಎಂದು ಜೆಡಿಎಸ್ ಆಗ್ರಹಿಸಿದೆ.

ಶಿವಮೊಗ್ಗ ನಿವೇಶನಾ ಆಕಾಂಕ್ಷಿಗಳ ನಿವೇಶನ ಪಡೆಯುವ ಕನಸು ನನಸು ಮಾಡಲು ಮತ್ತು ಅವಳಿ ನಗರಗಳ ಅಭಿವೃದ್ಧಿಗಾಗಿ ಕೆಲಸ ಮಾಡಬೇಕಾದ ಪ್ರಾಧಿಕಾರವು ಕಳಪೆ ಕಾಮಗಾರಿ, ಸುಳ್ಳು ಬಿಲ್ಲುಗಳು, ಅವೈಜ್ಞಾನಿಕ ಕೆಲಸಗಳು ಇತ್ಯಾದಿ ಕೃತ್ಯಗಳ ಮೂಲಕ ಸಾರ್ವಜನಿಕ ಸಂಪನ್ಮೂಲವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಬಗ್ಗೆ ಈಗಾಗಲೇ ಪ್ರಾಧಿಕಾರದ ಆಯುಕ್ತರಿಗೆ, ಜಿಲ್ಲಾಧಿಕಾರಿಗಳಿಗೆ, ಲೋಕಾಯುಕ್ತರಿಗೆ ಗುತ್ತಿಗೆದಾರರು ದೂರು ಸಲ್ಲಿಸಿರುತ್ತಾರೆ.
ಆದರೆ ಯಾವುದೇ ದೂರುಗಳ ಕುರಿತಾಗಿಯೂ ಸೂಕ್ತ ತನಿಖೆ ನಡೆದಿರುವುದು ಕಂಡು ಬಂದಿರುವುದಿಲ್ಲ.
ಈ ಹಿಂದೆ ಪ್ರಾಧಿಕಾರವೇ ನಿರ್ಮಿಸಿರುವ ವಾಜಪೇಯಿ ಬಡಾವಣೆ ನಿವೇಶನ ಹಂಚಿಕೆ ಸಂದರ್ಭದಲ್ಲಿ ಅಕ್ರಮಗಳು ನಡೆದಿದ್ದು, ಅಂದಿನ ಜಿಲ್ಲಾಧಿಕಾರಿಗಳಿಂದ ತನಿಖೆ ನಡೆದಿತ್ತು. ನಿವೃತ್ತ ನ್ಯಾಯಮೂರ್ತಿ ರವೀಂದ್ರನಾಥ್ ರವರು ನಿವೇಶನ ಹಂಚಿಕೆಯಲ್ಲಿ ನಡೆದ ಭ್ರಷ್ಟಾಚಾರ, ಸ್ವಜನ ಪಕ್ಷಪಾತದ ಕುರಿತು ವರದಿ ನೀಡಿದ್ದು ಲೋಕಾಯುಕ್ತದ ತನಿಖೆಯೂ ನಡೆದಿತ್ತು.
ಇದೆಲ್ಲದರಿಂದಾಗಿ ಅರ್ಹ ನಿವೇಶನ ದಾರರಿಗೆ ನಿವೇಶನ ಪಡೆದುಕೊಳ್ಳಲು ಇದ್ದ ತೊಂದರೆಯೂ ನಿವಾರಣೆ ಆಗಿತ್ತು. ಈಗ ವಾಜಪೇಯಿ ಬಡಾವಣೆ, ಊರಗಡೂರು ಬಡಾವಣೆ ಸೇರಿದಂತೆ ಪ್ರಾಧಿಕಾರ ನಿರ್ಮಿಸುತ್ತಿರುವ ಬಡಾವಣೆಗಳ ಕಾಮಗಾರಿಯಲ್ಲಿ ಅಕ್ರಮಗಳು ನಡೆದಿದ್ದು ಮುಂದೆ ಅಲ್ಲಿ ನಿವೇಶನ ಪಡೆಯುವ ನಾಗರಿಕರಿಗೆ ತೀವ್ರ ತೊಂದರೆಯಾಗಲಿದೆ.

ಬಡಾವಣೆಗಳ ರಸ್ತೆ ನಿರ್ಮಾಣಕ್ಕೆ ನಿವೇಶನದ ಜಾಗದಿಂದ ಮಣ್ಣು ತೆಗೆದು ಬಳಸುತ್ತಿರುವುದು ಮತ್ತು ಮಣ್ಣು ತೆಗೆದ ನಿವೇಶನದ ಗುಂಡಿಗಳಿಗೆ ನಗರದ ಕಸ ತಂದು ತುಂಬವ ಕೆಲಸ ನಡೆಯುತ್ತಿರುವ ಅಘಾತಕಾರಿ ಅಂಶವು ಕೂಡ ದೂರಿನಲ್ಲಿ ವ್ಯಕ್ತವಾಗಿದೆ.
ವಾಜಪೇಯಿ ಬಡಾವಣೆ ಊರುಗಡೂರು ಬಡಾವಣೆ ಸೇರಿದಂತೆ ಪ್ರಾಧಿಕಾರದಿಂದ ನಿರ್ಮಾಣಗೊ೦ಡಿರುವ ಬಡಾವಣೆಗಳಲ್ಲಿ ಮೂಲಭೂತ ಸೌಕರ್ಯಗಳಾದ ರಸ್ತೆ, ಬಾಕ್ಸ್ ಚರಂಡಿ, ಮೋರಿಗಳು, ಪಾರ್ಕ್ ಗಳ ನಿರ್ಮಾಣದ ಟೆಂಡರ್ ಪ್ರಕ್ರಿಯೆಯಲ್ಲಿ ಭಾರಿ ಮಟ್ಟದ ಮೋಸ ಮತ್ತು ಭ್ರಷ್ಟಾಚಾರ ನಡೆದಿರುತ್ತದೆ.
ಕಾಮಗಾರಿ ನಡೆಸುವ ಸಂದರ್ಭದಲ್ಲೂ ಸಹ ದೊಡ್ಡ ಮಟ್ಟದ ಮೋಸ ನಡೆದಿರುವುದು ಕಂಡು ಬರುತ್ತಿದೆ ಎಂದು ತಿಳಿಸಿದ್ದಾರೆ.
ಈ ಎಲ್ಲಾ ಅವ್ಯವಹಾರಗಳ ವಿರುದ್ಧ ಗುತ್ತಿಗೆದಾರರುಗಳಾದ ಶ್ರೀ ಗುರುಸಾಯಿ ಹಾಗೂ ಶ್ರೀ ಬಸವರಾಜ್ ರವರು ಪ್ರಾಧಿಕಾರದ 13 ಕಾಮಗಾರಿಗಳನ್ನು ಗುರುತಿಸಿ ಮಾನ್ಯ ಲೋಕಾಯುಕ್ತರಲ್ಲಿ ದೂರು ಸಲ್ಲಿಸಿರುತ್ತಾರೆ.
ಗುತ್ತಿಗೆದಾರರು ಲೋಕಾಯುಕ್ತರಿಗೆ ಸಲ್ಲಿಸಿರುವ ದೂರಿನಲ್ಲಿ ಗುರುತರವಾದ ಆರೋಪಗಳಿದ್ದು, ಜೊತೆಗೆ ಸಲ್ಲಿಸಿರುವ ಸಾಕ್ಷಾಧರಗಳಿಂದ ಆರೋಪ ಮೇಲ್ನೋಟಕ್ಕೆ ಸಾಬೀತಾಗುವಂತಿದೆ.

ಈ ಮೇಲ್ಕಂಡ ಎಲ್ಲಾ ಅಂಶಗಳ ಹಿನ್ನೆಲೆಯನ್ನು ಗಮನಿಸಿದಾಗ ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ದಿನಾಂಕ 20 – 5 – 2023 ರಿಂದ ಇವರೆವಿಗೂ ಕೈಗೊಳ್ಳಲಾಗಿರುವ ಸುಮಾರು 91ಕ್ಕೂ ಹೆಚ್ಚು ಕಾಮಗಾರಿಗಳಲ್ಲಿಯು ಸಹ ವ್ಯಾಪಾಕ ಮೋಸ ಅವ್ಯವಹಾರ, ಭ್ರಷ್ಟಚಾರ ಸ್ವಜನ ಪಕ್ಷಪಾತ ನಡೆದಿರುವ ಕುರಿತು ಸಾರ್ವಜನಿಕ ವಲಯದಲ್ಲಿ ತೀರ್ವ ಅನುಮಾನ ಮೂಡಿರುತ್ತದೆ.
ಅದರಿಂದ ಜಿಲ್ಲಾಧಿಕಾರಿಗಳಾದ ತಾವು ಈ ಮೇಲ್ಕಂಡ 13 ಕಾಮಗಾರಿಗಳನ್ನು ಒಳಗೊಂಡಂತೆ ಪ್ರಾಧಿಕಾರದ ವತಿಯಿಂದ ದಿನಾಂಕ 20-5-2023 ರಿಂದ ಇಲ್ಲಿಯ ವರೆಗೂ ನಡೆಸಲಾಗಿರುವ ಕಾಮಗಾರಿಗಳನ್ನು ನಿಷ್ಪಕ್ಷಪಾತವಾದ ಸಂಪೂರ್ಣ ತನಿಖೆ ನಡೆಸಿ ತಪ್ಪಿತಸ್ತರಿಗೆ ಸೂಕ್ತ ಶಿಕ್ಷೆಯನ್ನು ಕೊಡಿಸಿ, ದುರುಪಯೋಗವಾದ ಹಣವನ್ನು ತಪ್ಪಿತಸ್ತರಿಂದ ಪ್ರಾಧಿಕಾರಕ್ಕೆ ಮರು ಪಾವತಿಮಾಡಿಸುವ ಸಂಬಂಧ ಕ್ರಮ ಕೈಗೊಳ್ಳಬೇಕೆಂದು ಜೆಡಿಎಸ್ ಪಕ್ಷ ಸಾರ್ವಜನಿಕ ಹಿತದೃಷ್ಟಿಯಿಂದ ವಿನಯಪೂರ್ವಕವಾಗಿ ತಮ್ಮಲ್ಲಿ ಆಗ್ರಹಿಸುತ್ತೇವೆ ಎಂದಿದ್ದಾರೆ.



