ಮಾಲೂರು ಮರು ಮತ ಎಣಿಕೆ ; ಕಾಂಗ್ರೆಸ್‌ನ ನಂಜೇಗೌಡ ಗೆಲುವು ಎತ್ತಿಹಿಡಿದ ಸುಪ್ರೀಂ ಕೋರ್ಟ್

ರಾಜಕೀಯ

ರಾಜ್ಯ ವಿಧಾನಸಭೆಯ 2023ರ ಚುನಾವಣೆಯಲ್ಲಿ ಕೋಲಾರ ಜಿಲ್ಲೆ ಮಾಲೂರು ಕ್ಷೇತ್ರದಿಂದ ಕಾಂಗ್ರೆಸ್‌ನ ಕೆ.ವೈ ನಂಜೇಗೌಡ ಗೆಲುವು ಸಾಧಿಸಿರುವುದನ್ನು ಸುಪ್ರೀಂ ಕೋರ್ಟ್ ಗುರುವಾರ (ಫೆ.5) ಎತ್ತಿ ಹಿಡಿದಿದೆ.

ಮತಗಳ ಮರುಎಣಿಕೆಯ ನಂತರವೂ, ನಂಜೇಗೌಡರು ತಮ್ಮ ಎದುರಾಳಿ ಬಿಜೆಪಿಯ ಕೆ.ಎಸ್. ಮಂಜುನಾಥ್ ಗೌಡ ಅವರಿಗಿಂತ 250ಕ್ಕೂ ಹೆಚ್ಚು ಮತಗಳನ್ನು ಪಡೆದಿರುವುದನ್ನು ಪರಿಗಣಿಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರ ಪೀಠವು ನಂಜೇಗೌಡ ಅವರ ಆಯ್ಕೆಯನ್ನು ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್‌ನ ಸೆಪ್ಟೆಂಬರ್ 2025 ರ ತೀರ್ಪನ್ನು ರದ್ದುಗೊಳಿಸಿದೆ ಎಂದು ಲೈವ್‌ ಲಾ ವರದಿ ಮಾಡಿದೆ.

2023ರ ವಿಧಾನಸಭಾ ಚುನಾವಣೆಯಲ್ಲಿ, ನಂಜೇಗೌಡರು ಬಿಜೆಪಿ ಅಭ್ಯರ್ಥಿ ಕೆ.ಎಸ್. ಮಂಜುನಾಥ ಗೌಡ ಅವರ ವಿರುದ್ಧ 248 ಮತಗಳ ಅಂತರದಿಂದ ಗೆದ್ದಿದ್ದರು.

ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿದ್ದ ಬಿಜೆಪಿ ಅಭ್ಯರ್ಥಿ ಮಂಜುನಾಥ ಗೌಡ ಮತಗಳ ಮರುಎಣಿಕೆ ಕೋರಿ ಹೈಕೋರ್ಟ್‌ನಲ್ಲಿ ಚುನಾವಣಾ ತಕರಾರರು ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ನಂಜೇಗೌಡ ಅವರ ಆಯ್ಕೆಯನ್ನು ರದ್ದುಗೊಳಿಸಿತ್ತು. ಮತಗಳ ಮರುಎಣಿಕೆ ನಡೆಸಿ ಹೊಸದಾಗಿ ಫಲಿತಾಂಶ ಘೋಷಿಸಲು ಆದೇಶಿಸಿತ್ತು.

ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ನಂಜೇಗೌಡ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಮೇಲ್ಮನವಿಯನ್ನು ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಮುಚ್ಚಿದ ಲಕೋಟೆಯಲ್ಲಿ ಮರು ಮತ ಎಣಿಕೆಯ ನಂತರ ಫಲಿತಾಂಶವನ್ನು ಸಲ್ಲಿಸುವಂತೆ ಚುನಾವಣಾಧಿಕಾರಿಗೆ ಸೂಚಿಸಿತ್ತು.

ಗುರುವಾರ ಸುಪ್ರೀಂ ಕೋರ್ಟ್ ಕಕ್ಷಿದಾರರ ಸಮ್ಮುಖದಲ್ಲಿ ಮುಚ್ಚಿದ ಲಕೋಟೆಯನ್ನು ತೆರೆಯಿತು. ಮರು ಮತ ಎಣಿಕೆಯ ನಂತರವೂ ನಂಜೇಗೌಡ ಅವರೇ ಗೆಲುವು ಸಾಧಿಸಿರುವುದನ್ನು ಪರಿಗಣಿಸಿತು.

ನಂಜೇಗೌಡರು 50,957 ಮತಗಳನ್ನು ಮತ್ತು ಮಂಜುನಾಥ ಗೌಡ 50,707 ಮತಗಳನ್ನು ಪಡೆದಿದ್ದಾರೆ ಎಂದು ಕೋರ್ಟ್ ತಿಳಿಸಿದೆ.

“ಇದರರ್ಥ, ಹೈಕೋರ್ಟ್ ನೀಡಿದ ಮರುಎಣಿಕೆಯ ಆದೇಶವನ್ನು ಪಾಲಿಸಿದ ನಂತರವೂ ಮಾಲೂರು ಕ್ಷೇತ್ರದ ಅಭ್ಯರ್ಥಿಯ ಆಯ್ಕೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಹೈಕೋರ್ಟ್‌ನ ಹಿಂದಿನ ತೀರ್ಪನ್ನು ಬದಿಗಿಟ್ಟು, ಮೇಲ್ಮನವಿದಾರರ (ಅಭ್ಯರ್ಥಿಯ) ಚುನಾವಣಾ ಆಯ್ಕೆಯನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ ಮತ್ತು ಅವರ ಆಯ್ಕೆಯು ಕಾನೂನುಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದೆ,” ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.

ವಿಡಿಯೋ ರೆಕಾರ್ಡಿಂಗ್‌ಗಳನ್ನು ಒದಗಿಸದಿದ್ದಕ್ಕಾಗಿ ಜಿಲ್ಲಾ ಚುನಾವಣಾ ಅಧಿಕಾರಿಗೆ ಭಾರತೀಯ ಚುನಾವಣಾ ಆಯೋಗ ನೀಡಿದ್ದ ನಿರ್ದೇಶನವನ್ನು ಹೈಕೋರ್ಟ್ ರದ್ದುಗೊಳಿಸಿದೆ.

ಎಣಿಕೆ ಪ್ರಕ್ರಿಯೆಯ ವಿಡಿಯೋ ರೆಕಾರ್ಡಿಂಗ್ ಕಡ್ಡಾಯವೇ ಅಥವಾ ಇಲ್ಲವೇ ಎಂಬುವುದರ ಕುರಿತು ಯಾವುದೇ ಅಭಿಪ್ರಾಯ ವ್ಯಕ್ತಪಡಿಸುತ್ತಿಲ್ಲ ಎಂದು ಹೇಳಿದೆ.

ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿದಾರ (ನಂಜೇಗೌಡ) ಪರವಾಗಿ ಹಿರಿಯ ವಕೀಲ ಡಾ. ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದ್ದರು.

Author