ಹುಬ್ಬಳ್ಳಿ,ರೈತ ಬೆಳೆದ ಬೆಳೆಗಳಿಗೆ ಯಾವಾಗ ಬಂಗಾರದ ಬೆಲೆ ಬರುತ್ತೆ ಎಂಬುದು ಯಕ್ಷ ಪ್ರಶ್ನೆ. ಕಳೆದ ವರ್ಷ ಮೆಣಸಿನಕಾಯಿ ಬೆಲೆ ಕುಸಿತಗೊಂಡು ರೈತರು ಕಂಗಾಲಾಗಿದ್ದರು. ಆದರೆ ಪ್ರಸಕ್ತ ವರ್ಷ ಕಡಿಮೆ ಪ್ರಮಾಣದಲ್ಲಿ ಮೆಣಸಿಕಾಯಿ ಬೆಳೆದಿದ್ದು, ಇದೀಗ ಮೆಣಸಿನಕಾಯಿಗೆ ಬಂಪರ್ ಬೆಲೆ ಬಂದಿದ್ದು, ಬೆಳೆ ರಕ್ಷಣೆಯೇ ರೈತರಿಗೆ ಸವಾಲಾಗಿದೆ.
ಟೊಮೆಟೊ, ಈರುಳ್ಳಿ ಬೆಲೆ ಗಗನಕ್ಕೇರಿದಾಗ ಖದೀಮರು ಕತ್ತಲಾಗುವುದಕ್ಕಾಗಿಯೇ ಕಾದು ಬೆಳೆಯನ್ನು ಕದ್ದು ಪರಾರಿಯಾಗುತ್ತಿದ್ದರು. ಹೀಗಾಗಿ ರೈತರು ತಮ್ಮ ಜಮೀನಿಗೆ ಸಿಸಿ ಕ್ಯಾಮರಾ ಅಳವಡಿಸುತ್ತಿದ್ದರು. ಆದರೆ ಈಗ ಮೆಣಿಸಿನಕಾಯಿ ಬೆಳೆಗೆ ಕಳ್ಳರ ಕಾಟ ಹೆಚ್ಚಾಗಿದ್ದು ಬೆಳೆಯನ್ನು ಕಾಪಾಡಿಕೊಳ್ಳುವುದೇ ರೈತರಿಗೆ ದೊಡ್ಡ ಸಮಸ್ಯೆಯಾಗಿದೆ. ಹೀಗಾಗಿ ಜಮೀನಿಗೆ ಸಿಸಿ ಕ್ಯಾಮರಾಗಳನ್ನು ಅಳವಡಿಸುತ್ತಿದ್ದಾರೆ.
ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಚಿಕ್ಕನರ್ತಿ ಗ್ರಾಮದ ರೈತ ಅಣ್ಣಪ್ಪ ಮಾಯಣ್ಣವರ ತಾವು ಬೆಳೆದ ಮೆಣಸಿನಕಾಯಿ ಬೆಳೆಯನ್ನು ಕಳ್ಳರಿಂದ ಕಾಪಾಡಿಕೊಳ್ಳಲು ಜಮೀನಿಗೆ ಸಿಸಿ ಕ್ಯಾಮರಾ ಅಳವಡಿಸಿದ್ದಾರೆ.
ಮೆಣಿಸಿನಕಾಯಿ ಬೆಳೆಗೆ ಕಳ್ಳರ ಕಾಟ ಹೆಚ್ಚಾದ ಹಿನ್ನೆಲೆಯಲ್ಲಿ ಅವರು ಬೆಳೆಗೆ ಸಿಸಿ ಕ್ಯಾಮರಾದ ಹದ್ದಿನ ಕಣ್ಣಿಟ್ಟಿದ್ದು, ಸೋಲಾರ್ ಮೂಲಕ ಜಮೀನಿನಲ್ಲಿ ಸಿಸಿ ಕ್ಯಾಮರಾ ಅಳವಡಿಸಿದ್ದಾರೆ.ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಮೆಣಸಿನಕಾಯಿಗೆ 70-80 ಸಾವಿರ ರೂ. ಇದೆ. ಹೀಗಾಗಿ ಮೆಣಸಿನಕಾಯಿ ಕಳ್ಳತನ ಮಾಡುವವರು ಜಾಸ್ತಿಯಾಗಿದ್ದಾರೆ. ನಾಲ್ಕು ಎಕರೆಯಲ್ಲಿ ಮೆಣಸಿನಕಾಯಿ ಬೆಳೆದಿದ್ದಾರೆ.
ಹೀಗಾಗಿ ಮೆಣಸಿನಕಾಯಿ ಕಳ್ಳತನ ಮಾಡಬಾರದು ಎನ್ನುವ ಉದ್ದೇಶಕ್ಕೆ ಸಿಸಿ ಕ್ಯಾಮರಾ ಅಳವಡಿಸಿದ್ದಾರೆ.ಮತ್ತೊಂದೆಡೆ, ಕುಂದಗೋಳ ತಾಲೂಕಿನ ಗುಡಿಗೇರಿ ಗ್ರಾಮದ ಶಂಕ್ರಯ್ಯ ಗದಗಿನಮಠ ಎಂಬುರು ಕೂಡ ತಮ್ಮ 2 ಎಕರೆ ಜಮೀನಿನಲ್ಲಿ ಸೋಲಾರ್ ಸಿಸಿ ಕ್ಯಾಮರಾ ಅಳವಡಿಸಿ ಕಾವಲು, ರಕ್ಷಣೆ ಎರಡನ್ನೂ ಮನೆಯಲ್ಲಿ ಕುಳಿತು ನಿರ್ವಹಣೆ ಮಾಡುತ್ತಿದ್ದಾರೆ.
ಮೆಣಸಿನಕಾಯಿ ಕ್ವಿಂಟಾಲ್ಗೆ 70 ಸಾವಿರಕ್ಕೂ ಹೆಚ್ಚಿನ ಬೆಲೆಗೆ ಬೇಡಿಕೆ ಕೇಳಿ ಬಂದ ಹಿನ್ನೆಲೆಯಲ್ಲಿ ಜಮೀನಿನಲ್ಲಿ ಬೆಳೆಗಳು ರಕ್ಷಣೆ ರೈತರಿಗೆ ಸವಾಲಾಗಿದೆ.
ಹೊಲಗಳಲ್ಲಿ ಒಣಗಿ ಕೊಯ್ಲಿಗೆ ಬಂದಿರುವ ಹಾಗೂ ಒಣಗಿಸಲು ಹಾಕಿರುವ ಮೆಣಸಿನಕಾಯಿಗೆ ಕಳ್ಳರ ಕಾಟ ಹೆಚ್ಚಾಗಿದ್ದು, ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಮೆಣಸಿನಕಾಯಿಯ ಬೆಲೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ರಾತ್ರಿ ಕಳ್ಳತನ ಬಗ್ಗೆ ವರದಿಯಾಗಿದೆ.



