ಶಿವಮೊಗ್ಗ, ಮನ್ರೇಗಾ ಬದಲಾಗಿ ವಿಬಿ ಜಿ ರಾಮ್ ಜಿ ಜಾರಿಗೆ ತಂದಿರುವ ಕೇಂದ್ರ ಸರ್ಕಾರದ ನಡೆಯನ್ನು ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ ಖಂಡಿಸಿದರು. ಬಡವರು ದುಡಿದು ಸಂತೋಷವಾಗಿದ್ರೆ ಬಿಜೆಪಿಯವರಿಗೆ ಹೊಟ್ಟೆ ಉರಿ ಎಂದು ಭಾರತೀಯ ಜನತಾ ಪಕ್ಷದವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮನ್ರೇಗಾ ವಿಷಯವಾಗಿ ವಿಶೇಷ ಅಧಿವೇಶನ ಕರೆಯಲಾಗಿದೆ. ರಾಜ್ಯಪಾಲರ ಭಾಷಣದ ಮೇಲೆ ಇತರೆ ವಿಷಯಗಳು ಚರ್ಚೆಗೆ ಬರಲಿವೆ. ಇದನ್ನು ಮೊನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ ಎಂದರು.
ಬಿಜೆಪಿ ವಿರುದ್ಧ ಸಚಿವ ಮಧು ಬಂಗಾರಪ್ಪ ಟೀಕೆ
ಇದು ಒಂದು ದುರಂತ, ಹೆಚ್ಚು ಕಮ್ಮಿ ಆದ್ರೆ ಜನರಿಗೆ ಕೆಲಸ ಸಿಗೋದೆ ಕಡಿಮೆ ಅಗುತ್ತದೆ. ಹೀಗಾಗಿ ನಾವು ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸಬೇಕಾಗುತ್ತದೆ. ಬೇರೆ ಬೇರೆ ರಾಜ್ಯದಲ್ಲೂ ಸಹ ಇದನ್ನು ವಿರೋಧ ಮಾಡಲಾಗುತ್ತಿದೆ. ಈ ಬಗ್ಗೆ ಚರ್ಚೆ ಮಾಡುವುದು ತುಂಬ ಒಳ್ಳೇಯದು ಎಂದು ಸಚಿವರು ಹೇಳಿದರು.
ಕಳೆದ ಎರಡೂವರೆ ವರ್ಷದಿಂದ ಬಿಜೆಪಿಯವರು ವಿರೋಧ ಮಾಡುತ್ತಲೇ ಇದ್ದಾರೆ. ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣದ ಮೇಲೆ, ಅಭಿವೃದ್ಧಿ ಕುರಿತು ಚರ್ಚೆ ಮಾಡದೆ ಬೇರೆ ಏನ್ ಮಾಡುತ್ತಾರೆಂದು ವಿರೋಧ ಪಕ್ಷದವರನ್ನು ಪ್ರಶ್ನಿಸಿದರು. ಗ್ಯಾರಂಟಿಗಳನ್ನು ನಾವು ನೀಡಿದ್ವಿ, ಇದನ್ನು ವಿರೋಧಿಸಿದವರೇ ಈಗ ದೇಶಾದ್ಯಂತ ಜಾರಿ ಮಾಡುತ್ತಿದ್ದಾರೆ. ಬಿಜೆಪಿಯವರು ಭಾಷಣ ಮಾಡಿ ಬುರುಡೆ ಬಿಟ್ಟರು ಅನ್ನೋದನ್ನು ಬಿಟ್ಟರೆ, ಕೆಲಸ ನೀಡಲಿಲ್ಲ.
ನಿಜವಾಗಿ ಕೆಲಸ ನೀಡಿದವರು ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್. ಎರಡು ಕೋಟಿ ಜನರಿಗೆ ಉದ್ಯೋಗ ನೀಡುವುದಾಗಿ ಹೇಳಿದ್ದ ಬಿಜೆಪಿಯವರು ಇರುವ ಕೆಲಸವನ್ನು ಕಸಿದುಕೊಳ್ಳುತ್ತಿದ್ದಾರೆ. ನನ್ನ ಪ್ರಕಾರ ಇವರು 20 ಕೋಟಿ ಜನರ ಉದ್ಯೋಗವನ್ನು ಒಂದೇ ಟೈಮ್ಗೆ ತೆಗೆದುಬಿಡ್ತಾರೆ ಇವರು ಎಂದು ಮಧು ಬಂಗಾರಪ್ಪ ಆತಂಕ ವ್ಯಕ್ತಪಡಿಸಿದರು.ಉದ್ಯೋಗ ಖಾತ್ರಿ ತೆಗೆದರೆ ಜನರಿಗೆ ಸಾಕಷ್ಟು ಸಮಸ್ಯೆ ಉಂಟಾಗುತ್ತದೆ. ನಾನು ದುಡಿದ್ರೆ ಹಣ ಬರುತ್ತದೆ ಎಂಬ ಧೈರ್ಯ ಇರುತ್ತದೆ.
ಸಂಸದ ರಾಘವೇಂದ್ರ ಅವರು ಮಾತನಾಡಿದ್ದನ್ನು ನೋಡ್ದೆ, ಇಲ್ಲಿ ಜನರನ್ನು ದಾರಿ ತಪ್ಪಿಸಲಾಗುತ್ತಿದೆ. ರಾಘವೇಂದ್ರ ಅವರೇ ನಾವು ಯಾರನ್ನೂ ದಾರಿ ತಪ್ಪಿಸಲು ಬಿಡೋದಿಲ್ಲ. ಹಿಂದೆ ಕಾನೂನನ್ನು ಸುಮ್ಮನೆ ಮಾಡಿಲ್ಲ. ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರು ಸಾಲ ಮನ್ನಾ ಮಾಡಬೇಕಂತ ಇದ್ದರು. ಬಡವರು ದುಡಿತಾರೆ ಸಂತೋಷವಾಗಿರುತ್ತಾರೆಂದ್ರೆ ನಿಮಗೆ ಹೊಟ್ಟೆ ಉರಿ. ಗಾಂಧೀಜಿಯನ್ನು ದಿನ ಹತ್ಯೆ ಮಾಡುತ್ತಿರುವವರು ಅಂದ್ರೆ ಬಿಜೆಪಿಯವರು ಎಂದು ಅವರು ಟೀಕಿಸಿದರು.
ವಿದ್ಯಾರ್ಥಿಗಳಿಗೆ ಗ್ರೂಪ್ ಸ್ಟಡಿ
ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಓದಲು ಅವಕಾಶ ಮಾಡಿಕೊಡಲಾಗಿದೆ. ಕಾರಣ ಅಂದ್ರೆ, ವಿದ್ಯಾರ್ಥಿಗಳಿಗೆ ಉಪನ್ಯಾಸಕರು ಸಿಕ್ತಾರೆ. ಅವರ ಸಮಸ್ಯೆಯನ್ನು ಅಲ್ಲೇ ಪರಿಹರಿಸಿಕೊಳ್ಳಬಹುದೆಂದು ಕಾಲೇಜಿನಲ್ಲಿ ಗ್ರೂಪ್ ಸ್ಟಡಿ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಈ ಬಗ್ಗೆ ಅಧಿಕಾರಿಗಳು ಚರ್ಚೆ ಮಾಡಿದ್ದರು. ಈಗ ಅದನ್ನು ಜಾರಿ ಮಾಡಲಾಗಿದೆ. ಈಗ ಕಲಿಕೆಯ ಅವಧಿ ಮುಕ್ತಾಯವಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿ ಗ್ರೂಪ್ ಸ್ಟಡಿ ಮಾಡಲು ಸೂಚಿಸಲಾಗಿದೆ. ಇಲ್ಲಿ ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆ ಬಿಡಿಸಲು ಸಹಾಯಕವಾಗುತ್ತದೆ ಎಂದು ಶಿಕ್ಷಣ ಸಚಿವರು ಹೇಳಿದರು.



