ಶಿವಮೊಗ್ಗ, “ನಾನೂ ಕ್ರಿಕೆಟ್ ಪ್ಲೇಯರ್. ರಾಜಕೀಯದಲ್ಲಿಯೂ ಒಳ್ಳೆಯ ಬ್ಯಾಟಿಂಗ್ ಮಾಡಬೇಕು. ಗೂಗ್ಲಿ ಹಾಕದೇ ಸಕ್ಸಸ್ ಇಲ್ಲ” ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಶಿವಮೊಗ್ಗದಲ್ಲಿಂದು ಮಾತನಾಡಿದ ಜಾರಕಿಹೊಳಿ, “ಕ್ರಿಕೆಟ್ ಪಂದ್ಯಾವಳಿಗಾಗಿ ಶಿವಮೊಗ್ಗಕ್ಕೆ ಬಂದಿದ್ದೇನೆ. ಇದು ಖಾಸಗಿ ಕಾರ್ಯಕ್ರಮ” ಎಂದರು. ಮುಂದುವರೆದು ಮಾತನಾಡಿ, “ರಾಜಕೀಯದಲ್ಲಿಯೂ ಒಳ್ಳೆಯ ಬ್ಯಾಟಿಂಗ್ ಮಾಡಬೇಕು. ಸ್ವಿಂಗ್, ಗೂಗ್ಲಿ ಹಾಕಬೇಕು. ಒಳ್ಳೆಯ ಬ್ಯಾಂಟಿಂಗ್ ಮಾಡದೆ ಹೋದರೆ ಉಳಿಗಾಲವಿಲ್ಲ” ಎಂದರು. ಇದೇ ವೇಳೆ, “ಈಗ ನಾನು ರಾಜಕೀಯದಲ್ಲಿ ಆಟ ಆಡುವವರಿಗೆ ಸಪೋರ್ಟ್ ಮಾಡ್ತಾ ಇದ್ದೇನೆ” ಎಂದು ಹೇಳಿದರು.
ನಿಮ್ಮ ಗುರಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೋ ಅಥವಾ ಸಿಎಂ ಸ್ಥಾನಕ್ಕೋ ಎಂಬ ಪ್ರಶ್ನೆಗೆ, “ರಾಜಕೀಯದ ದೊಡ್ಡ ಆಟ ಮುಂದಿದೆ” ಎಂದರು.
ಸತೀಶ್ ಜಾರಕಿಹೊಳಿ ಮುಂದಿನ ಸಿಎಂ ಎಂದು ಘೋಷಣೆ ಕೂಗುತ್ತಿದ್ದಂತೆಯೇ ಕಾರ್ಯಕರ್ತರಿಗೆ ಸಚಿವರು, “ನೀವು ಈ ರೀತಿ ಕೂಗಿದರೆ ಯಾವುದೇ ಪ್ರಯೋಜನವಿಲ್ಲ. ಹೀಗೆ ಕೂಗುವುದನ್ನು ಬಿಟ್ಟರೆ ನೀವೂ ಲೀಡರ್ ಆಗುತ್ತೀರಿ” ಎಂದು ಕಿವಿಮಾತು ಹೇಳಿದರು.
ಬಜೆಟ್ ನಂತರ ಸಿಎಂ ಬದಲಾಗುತ್ತಾರೆಯೇ ಎಂಬ ಪ್ರಶ್ನೆಗೆ,? “ಅದೆಲ್ಲಾ ದೆಹಲಿ ಹಾಗೂ ಬೆಂಗಳೂರಿನಲ್ಲಿ ಕೇಳಬೇಕು” ಎಂದು ತಿಳಿಸಿದರು.
ಬಳ್ಳಾರಿಯದ್ದು ಸಣ್ಣ ಘಟನೆ, ತಡೀಬಹುದಿತ್ತು
“ಬಳ್ಳಾರಿಯದ್ದು ಒಂದು ಸಣ್ಣ ಘಟನೆ. ತಡೆಯಬಹುದಿತ್ತು. ಇದರಿಂದಲೇ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ” ಎಂದರು.
“ಇವಿಎಂ ವಿರುದ್ಧ ನಮ್ಮ ಆರೋಪ ಇನ್ನೂ ಜನರ ಅರಿವಿಗೆ ಬಂದಿಲ್ಲ. ಅದು ಅವರಿಗೆ ತಿಳಿಯುತ್ತಿದ್ದಂತೆಯೇ ನಮ್ಮ ಜೊತೆ ಬರಲಿದ್ದಾರೆ. ರಾಮ್ ಜಿ ಯೋಜನೆ ಬಡವರ ವಿರೋಧಿ. ಹಿಂದೆ ದೆಹಲಿಯಿಂದ ಯೋಜನೆಗೆ ಶೇ.100ರಷ್ಟು ಅನುದಾನ ಬರುತ್ತಿತ್ತು. ಈಗ ಶೇ.60 ರಷ್ಟು ಮಾತ್ರ ನೀಡುತ್ತಿದೆ. ಯೋಜನೆಯ ಆಯ್ಕೆಯನ್ನು ತನ್ನ ಕೈಯಲ್ಲೇ ಇಟ್ಟುಕೊಂಡಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.



