ಶಿವಮೊಗ್ಗ, ಶಿಕಾರಿಪುರದ ಹರಗುವಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹಶಿಕ್ಷಕಿಯಾಗಿರುವ ಎ ಆರ್ ಆಶಾರಾಣಿ ಅವರಿಗೆ ಈ ಸಾಲಿನ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ರಾಜ್ಯ ಮಟ್ಟದ ಪ್ರಶಸ್ತಿ ಘೋಷಿಸಲಾಗಿದೆ.
ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಮತ್ತು ರೋಟರಿಯವರಿಂದ ಬೆಸ್ಟ್ಟೀಚರ್ ಅವಾರ್ಡ್ ಪಡೆದಿರುವ ಇವರು, ಸುಮಾರು 18 ವರ್ಷ ಸೇವಾ ಅನುಭವವನ್ನು ಹೊಂದಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಮಾತ್ರವಲ್ಲದೆ ಕ್ರೀಡೆ, ಸಾಹಿತ್ಯ, ಕಲೆ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಸ್ಥಳೀಯ ಪತ್ರಿಕೆಗಳಲ್ಲಿ ಹಲವಾರು ಪ್ರಬಂಧಗಳು, ಲೇಖನಗಳು ಮತ್ತು ಕವನಗಳನ್ನು ಪ್ರಕಟಿಸಿದ್ದಾರೆ. ಮಕ್ಕಳಿಗಾಗಿ ದಸರ ಕಾರ್ಯಕ್ರಮಗಳು, ಓದುವ ಅಭಿಯಾನದ ಶೈಕ್ಷಣಿಕ ಚಟುವಟಿಕೆಗಳು, ಮಲೆನಾಡ ಮಲ್ಲಿಗೆ ಸಾಹಿತ್ಯ ಕ್ಯಾಲೆಂಡರ್ ಖ್ಯಾತಿಯ ಮೂಲ ರೂವಾರಿಯಾಗಿದ್ದಾರೆ.
ಆರೇಳು ವರ್ಷಗಳಿಂದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಇವರು 2025 ನೇ ಸಾಲಿನಲ್ಲಿ ರಾಷ್ಟ್ರಮಟ್ಟದ ಕ್ರೀಡಾಪಟುವಾಗಿ ಆಯ್ಕೆಯಾಗಿದ್ದಾರೆ.
ಇವರ ಸಾಧನೆಗಳನ್ನು ಗುರುತಿಸಿ 2017ರಲ್ಲಿ ನೇಷನ್ ಬಿಲ್ಡರ್ ಅವಾರ್ಡ್, 2024ರಲ್ಲಿಶಿಕ್ಷಣ ಇಲಾಖೆಯು ವಿಶೇಷ ಶಿಕ್ಷಕ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಇವರ ಶೈಕ್ಷಣಿಕ, ಕ್ರೀಡಾ, ಸಾಹಿತ್ಯ, ಕಲೆ ಮತ್ತು ಸಮಾಜ ಸೇವೆಯನ್ನು ಪರಿಗಣಿಸಿ ದಲಿತ ವಿದ್ಯಾರ್ಥಿ ಪರಿಷತ್ ಕೊಡಮಾಡುವ ಈ ಸಾಲಿನ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಪ್ರಶಸ್ತಿಗೆ ಆಯ್ಕೆ ಮಾಡಿದೆಪ್ರಶಸ್ತಿ ಪ್ರದಾನ ಸಮಾರಂಭವು ವಿಜಯಪುರದ ರಂಗಮಂದಿರದಲ್ಲಿ ನಡೆಯಲಿದೆ.



