ಧಾರವಾಡ, ಬ್ಯಾಂಕ್ ದರೋಡೆ ಯತ್ನವೊಂದು ವಿಫಲವಾದ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಶಿರೂರ ಗ್ರಾಮದಲ್ಲಿ ಕಳೆದ ರಾತ್ರಿ ನಡೆದಿದೆ.ಶಿರೂರ ಗ್ರಾಮದಲ್ಲಿರುವ ಎಸ್ಬಿಐ ಬ್ಯಾಂಕ್ ದರೋಡೆಗೆ ಖದೀಮರು ಯತ್ನಿಸಿದ್ದಾರೆ.
ಬ್ಯಾಂಕ್ನಲ್ಲಿ 5 ಕೋಟಿ ಮೌಲ್ಯದ ಬಂಗಾರ ಹಾಗೂ 11 ಲಕ್ಷ ನಗದು ಹಣ ಇತ್ತು. ಖದೀಮರು ಬ್ಯಾಂಕ್ ಹಿಂದಿನ ಗೋಡೆ ಒಡೆಯಲು ಪ್ರಯತ್ನಿಸಿದ್ದಾರೆ. ಆದರೆ ಸ್ವಲ್ಪ ಗೋಡೆ ಒಡೆದ ನಂತರ ಶಬ್ದ ಬಂದ ಕಾರಣ ಸ್ಥಳದಿಂದ ಪರಾರಿಯಾಗಿದ್ದಾರೆ.
ಬೆಳಗ್ಗೆ ಬ್ಯಾಂಕ್ ಸಿಬ್ಬಂದಿ ಕೆಲಸಕ್ಕೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.ನವಲಗುಂದ ಪೊಲೀಸರು, ಶಾನದಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಖದೀಮರ ಬಂಧನಕ್ಕೆ ಶೋಧ ನಡೆಯುತ್ತಿದೆ. ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಬ್ಯಾಂಕ್ ಮ್ಯಾನೇಜರ್ ವಿನೋದ್ ಕುಮಾರ್ ಕಾಂಬ್ಳೆ ಈ ಬಗ್ಗೆ ಮಾಹಿತಿ ನೀಡಿ, “ನಿನ್ನೆ ರಾತ್ರಿ 8 ಗಂಟೆಗೆ ಬ್ಯಾಂಕ್ ಬಾಗಿಲು ಹಾಕಿ ಮನೆಗೆ ಹೋಗಿದ್ದೆವು.
ಬೆಳಗ್ಗೆ ಬಂದು ಎಂದಿನಂತೆ ನಾವು ನಮ್ಮ ಕೆಲಸದಲ್ಲಿ ತೊಡಗಿದ್ದೆವು. ಆಗ ಒಬ್ಬರ ಗ್ರಾಹಕರು ಬಂದು ಬ್ಯಾಂಕ್ ಹಿಂದುಗಡೆಯ ಗೋಡೆಯನ್ನು ಯಾರೋ ಗುದ್ದಲಿಯಿಂದ ಒಡೆದಿದ್ದಾರೆ ನೋಡಿ ಎಂದು ಹೇಳಿದರು. ಹೋಗಿ ನೋಡಿದಾಗ ಕಳ್ಳತನಕ್ಕೆ ಪ್ರಯತ್ನ ಪಟ್ಟಂತೆ ಕಾಣಿಸಿತು. ನವಲಗುಂದ ಪಿಎಸ್ಐ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದೆವು” ಎಂದು ಮಾಹಿತಿ ನೀಡಿದರು.
“ತಕ್ಷಣ ಬಂದು ಪರಿಶೀಲನೆ ಮಾಡಿದರು. ಕಳ್ಳತನಕ್ಕೆ ಪ್ರಯತ್ನ ಮಾಡಿರುವುದು ಎಂದು ಗೊತ್ತಾದಾಗ ಸಿಪಿಐ ಹಾಗೂ ಇನ್ನೊಬ್ಬ ಪೊಲೀಸ್ ಅಧಿಕಾರಿ ಬಂದು, ಎಫ್ಐಆರ್ ದಾಖಲು ಮಾಡಿಕೊಂಡರು.
ನಿನ್ನೆ ಬ್ಯಾಂಕ್ ಅಲ್ಲಿ 11 ಲಕ್ಷ ರೂಪಾಯಿ ನಗದು ಇತ್ತು. ಜೊತೆಗೆ 5 ಕೋಟಿ ರೂ ಮೌಲ್ಯದ ಚಿನ್ನಾಭರಣ ಕೂಡ ಇತ್ತು. ಆದರೆ ಏನೂ ಕಳ್ಳತನ ಆಗಿಲ್ಲ. ಗೋಡೆ ಡ್ಯಾಮೇಜ್ ಮಾಡಿ ಹೋಗಿದ್ದಾರೆ ಅಷ್ಟೆ.
ಸದ್ಯಕ್ಕೆ ಯಾರ ಮೇಲೆಯೂ ಸಂಶಯ ಇಲ್ಲ. ನಾನು ಇಲ್ಲಿಗೆ ಬರುವ ಮೊದಲು ಸೆಕ್ಯೂರಿಟಿ ಗಾರ್ಡ್ ಇದ್ದರಂತೆ. ಆದರೆ ನಾನು 2014ರಲ್ಲಿ ಇಲ್ಲಿಗೆ ಬಂದೆ ಆಗ ಸೆಕ್ಯೂರಿಟಿ ಗಾರ್ಡ್ ಇರಲಿಲ್ಲ. ಬ್ಯಾಂಕ್ಗೆ ಸೆಕ್ಯೂರಿಟಿ ಗಾರ್ಡ್ ಕೊಡುವಂತೆ ಮೇಲಾಧಿಕಾರಿಗಳ ಬಳಿ ಹೇಳಿದ್ದೆವು.
ಇವತ್ತು ರಾತ್ರಿಯಿಂದಲೇ ಸೆಕ್ಯೂರಿಟಿ ಗಾರ್ಡ್ ಕೊಡುತ್ತಿದ್ದಾರೆ” ಎಂದು ಪ್ರಕರಣದ ಕುರಿತು ವಿವರಿಸಿದರು.



