ಶಿವಮೊಗ್ಗ | ದ್ವೇಷ, ಭಾಷಣ ಮಸೂದೆ ವಿರೋಧಿಸಿ ಡಿ. 26 ಕ್ಕೆ ಬಿಜೆಪಿ ಪ್ರತಿಭಟನೆ

ಶಿವಮೊಗ್ಗ

ಶಿವಮೊಗ್ಗ,ಕರ್ನಾಟಕ ದ್ವೇಷ, ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ 2025 ಕರಾಳ ವಿಧೇಯಕವನ್ನು ಬಿಜೆಪಿ ವಿರೋಧಿಸುತ್ತದೆ. ಇದರ ವಿರುದ್ಧ ಹೋರಾಟವನ್ನು ಕೂಡ ಆರಂಭಿಸಲಿದೆ. ಶಿವಮೊಗ್ಗದಲ್ಲಿ ಡಿ.26ರಂದು ಶಿವಪ್ಪನಾಯಕ ಪ್ರತಿಮೆ ಬಳಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಎಸ್ ಎನ್ ಚನ್ನಬಸಪ್ಪ ಹೇಳಿದರ.

ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಇರುತ್ತದೆ. ಆದರೆ ಇದು ಅದಕ್ಕೆ ಕಡಿವಾಣ ಹಾಕಲಾಗಿದೆ. ಪ್ರತಿಪಕ್ಷಗಳನ್ನು ಕಟ್ಟಿಹಾಕುವ ಕುತಂತ್ರವಿದೆ. ಜನವಿರೋಧಿ ಧೋರಣೆಯಿಂದ ಕೂಡಿದೆ. ದ್ವೇಷಕ್ಕೆ ಹೆಚ್ಚು ಶಕ್ತಿಯನ್ನು ಕೊಟ್ಟಂತಾಗುತ್ತದೆ. ಸುಪ್ರೀಂಕೋರ್ಟ್ ತೀರ್ಪುಗಳಗೂ ಇದು ವಿರುದ್ಧವಾಗಿದೆ ಎಂದು ಆರೋಪಿಸಿದರು.

ಪ್ರತಿಪಕ್ಷವನ್ನು ಕಟ್ಟಿಹಾಕುವ ಪೂರ್ವ ಗ್ರಹಪೀಡಿತವಾದ ಕರ್ನಾಟಕ ದ್ವೇಷ, ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ೨೦೨೫ಕ್ಕೆ ಯಾವ ಕಾರಣಕ್ಕೂ ರಾಜ್ಯಪಾಲರು ಅಂಕಿತ ಹಾಕಬಾರದು ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಆಗ್ರಹಿಸಿದರು.

ಈ ವಿಧೇಯಕವನ್ನು ರಾಜ್ಯ ಸರ್ಕಾರ ಅಂಗೀಕಾರ ಮಾಡುವ ಮೂಲಕ ರಾಜ್ಯದಲ್ಲಿ ಮತ್ತೊಮ್ಮೆ ತುರ್ತು ಪರಿಸ್ಥಿತಿಯನ್ನು ಹೇರಿದೆ. ಈ ಹಿಂದೆ ಮಾಜಿ ಪ್ರಧಾನಿ ಇಂದಿರಾಗಾಂಧಿಯವರು ಇಂತಹ ತುರ್ತು ಪರಿಸ್ಥಿತಿಯನ್ನು ಹೇರಿದ್ದರು. ಈಗ ಸಿದ್ಧರಾಮಯ್ಯ ಅವರು ಮತ್ತೇ ಅದೇ ಕೆಲಸವನ್ನು ಮಾಡುತ್ತಿದ್ದಾರೆ. ಇದು ಸಂವಿಧಾನ ವಿರೋಧಿ ಕೂಡ ಆಗಿದೆ. ಸಂವಿಧಾನದ ಆರ್ಟಿಕಲ್ 19 ’ಎ’ಗೆ ವಿರುದ್ಧವಾಗಿದೆ. ಎಂದರು.

ನಮಗೆ ದ್ವೇಷ ಇರುವುದು ದೇಶದ್ರೋಹಿಗಳ ವಿರುದ್ಧ ಮಾತ್ರ. ದೇಶದ್ರೋಹಿಗಳ ಬಗ್ಗೆ ನಾವು ಮಾತನಾಡಿದರೆ ನಿಮಗೆ ಅಸೂಯೆ ಏಕೆ ? ನಾವೇನು ಮಾಡಬೇಕು ನಾವು ಸತ್ಯವನ್ನೇ ಹೇಳುತ್ತೇವೆ. ಸತ್ಯವನ್ನು ಹೇಳುವುದೇ ತಪ್ಪು ಎಂದಾದರೆ ಹೇಗೆ ? ಇದನ್ನು ಗಂಭೀರವಾಗಿ ಆಲೋಚಿಸಬೇಕಾಗಿದೆ. ಕಾಂಗ್ರೆಸ್‌ನ ಮಾನಸಿಕತೆ ಸಂವಿಧಾನ ವಿರೋಧಿಯ ಆಗಿದೆ. ಕಾಂಗ್ರೆಸ್ ಎಷ್ಟು ಕುತಂತ್ರಿ ಎಂದರೆ ಈ ಮಸೂದೆಯು ಮೂರುವರ್ಷ ಚಾಲ್ತಿಯಲ್ಲಿದ್ದರೆ ಮುಂದೆ ಯಾರೇ ಅಧಿಕಾರಕ್ಕೆ ಬಂದರೂ ಕೂಡ ಇದನ್ನು ಬದಲಾಯಿಸಲು ಸಾಧ್ಯವಾಗುವುದಿಲ್ಲ. ಅಂತಹ ನಿಯಮ ಇದರಲ್ಲಿದೆ. ಕಾಂಗ್ರೆಸ್ ಸರ್ಕಾರಕ್ಕೆ ಗೊತ್ತು ಇನ್ನು ಮೂರುವರ್ಷ ಆದ ನಂತರ ನಮ್ಮ ಸರ್ಕಾರ ಅಧಿಕಾರದಲ್ಲಿ ಇರುವುದಿಲ್ಲ. ಆಗ ಬಿಜೆಪಿ ಪಕ್ಷ ಆಡಳಿತ ನಡೆಸಿದರೂ ಕೂಡ ಈ ಮಸೂದೆಗೆ ಏನು ತೊಂದರೆಯಾಗಬಾರದು ಎಂಬ ಉದ್ದೇಶ ಅವರಿಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಪ್ರಮುಖರಾದ ಎನ್.ಜೆ. ನಾಗರಾಜ್, ಮಂಜುನಾಥ್ ನವುಲೆ, ದೀನದಯಾಳ್, ಎಂ.ಬಿ. ಹರಿಕೃಷ್ಣ, ಮುರಳಿ, ಶ್ರೀನಾಗ್, ಮೋಹನ್ ರೆಡ್ಡಿ, ಮಂಜು ಉಪಸ್ಥಿತರಿದ್ದರು.

Author