ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಕಳಪೆ ಗುಣಮಟ್ಟದ ಶೂ : ಉಪ ಲೋಕಾಯುಕ್ತರಿಂದ ಸ್ವಯಂಪ್ರೇರಿತ ಪ್ರಕರಣ ದಾಖಲು

ಕರ್ನಾಟಕ

ಬೆಂಗಳೂರು,ರಾಜ್ಯದ ಸರ್ಕಾರಿ ಶಾಲಾ ಮಕ್ಕಳಿಗೆ ಕಳಪೆ ಗುಣಮಟ್ಟದ ಶೂ ಮತ್ತು ಸಾಕ್ಸ್‌ಗಳನ್ನು ವಿತರಿಸಿರುವುದರ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಶಿಕ್ಷಣ ಇಲಾಖೆ ಈ ಕುರಿತು ಸಮಗ್ರ ತನಿಖೆಗೆ ಆದೇಶಿಸಿದೆ.2026-27ನೇ ಸಾಲಿನ ವಿದ್ಯಾವಿಕಾಸ ಯೋಜನೆಯಡಿ 1ರಿಂದ 10ನೇ ತರಗತಿ ಮಕ್ಕಳಿಗೆ ಕಳಪೆ ಗುಣಮಟ್ಟದ ಶೂ ಹಾಗೂ ಸಾಕ್ಸ್ ಪೂರೈಕೆ ಮಾಡಲಾಗಿದೆ ಎಂಬ ದೂರುಗಳನ್ನು ಗಂಭೀರವಾಗಿ ಪರಿಗಣಿಸಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ರಚಿಸುವ ಜಿಲ್ಲಾವಾರು ಪರಿಶೀಲನಾ ತಂಡಗಳ ಮೂಲಕ ತನಿಖೆ ನಡೆಸುವಂತೆ ಶಾಲಾ ಶಿಕ್ಷಣ ಆಯುಕ್ತರಿಗೆ ಸೂಚಿಸಿದೆ.

ಈ ವಿಚಾರವನ್ನು “ಅತ್ಯಂತ ತುರ್ತು” ಎಂದು ಪರಿಗಣಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿರುವ ಇಲಾಖೆಯು, ಸೆಪ್ಟೆಂಬರ್ 8ರಂದು ಹೊರಡಿಸಿದ ಆದೇಶದಲ್ಲಿ ಪರಿಶೀಲನಾ ತಂಡಗಳಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯನ್ನು ಹೊರತುಪಡಿಸಿ ಸಂಬಂಧಿತ ಪರಿಣತಿ ಹೊಂದಿರುವ ಇತರ ಇಲಾಖೆಗಳ ಅಧಿಕಾರಿಗಳು ಅಥವಾ ಸಿಬ್ಬಂದಿಯನ್ನು ಆಯ್ಕೆ ಮಾಡಬೇಕು ಎಂದು ತಿಳಿಸಿದೆ.

ಪ್ರತಿ ತಂಡದಲ್ಲಿ ಇಬ್ಬರಿಂದ ಮೂವರು ಸದಸ್ಯರು ಇರಬೇಕು. ಅವರಲ್ಲಿ ಒಬ್ಬರನ್ನು ತಂಡದ ಮುಖ್ಯಸ್ಥರನ್ನಾಗಿ ನೇಮಿಸಬೇಕು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ತಂಡಗಳನ್ನು ರಚಿಸಿದ ದಿನದಿಂದ ಏಳು ದಿನಗಳೊಳಗೆ ಪರಿಶೀಲನೆ ಪೂರ್ಣಗೊಳಿಸಬೇಕು. ಬಳಿಕ ಆಯಾ ಜಿಲ್ಲೆಗಳ ವರದಿಗಳನ್ನು ಶಾಲಾ ಶಿಕ್ಷಣ ಆಯುಕ್ತರಿಗೆ ಸಲ್ಲಿಸಬೇಕು. ಆಯುಕ್ತರು ಎಲ್ಲ ಜಿಲ್ಲೆಗಳ ವರದಿಗಳನ್ನು ಕ್ರೋಢೀಕರಿಸಿ, ಪರಿಶೀಲನೆಯ ಪ್ರಮುಖ ಅಂಶಗಳನ್ನು ಒಳಗೊಂಡ ಸಮಗ್ರ ವರದಿಯನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಸಲ್ಲಿಸಬೇಕು ಎಂದೂ ಸೂಚಿಸಿದೆ.

ಇದೇ ವೇಳೆ ಮಾಧ್ಯಮ ವರದಿಗಳನ್ನು ಉಲ್ಲೇಖಿಸಿರುವ ಇಲಾಖೆ, ಒಂದು ಜೋಡಿ ಶೂ ಮತ್ತು ಎರಡು ಜೋಡಿ ಸಾಕ್ಸ್ ಪೂರೈಕೆ ಕುರಿತು ದೂರುಗಳು ಬಂದಿವೆ. ಬಳಸಿದ ತಕ್ಷಣವೇ ಅಥವಾ ಕೆಲವೇ ದಿನಗಳಲ್ಲಿ ಶೂ ಹರಿದುಹೋಗುವುದು, ಅಡಿಭಾಗ ಕಳಚಿಕೊಳ್ಳುವುದು, ಅತಿದೊಡ್ಡ ಗಾತ್ರದ ಅಥವಾ ಸರಿಯಾಗಿ ಹೊಂದಿಕೆಯಾಗದ ಶೂ ಪೂರೈಕೆ ಹಾಗೂ ಸಾಕ್ಸ್‌ಗಳಲ್ಲೂ ಇದೇ ರೀತಿಯ ದೋಷಗಳು ಕಂಡುಬಂದಿರುವ ಬಗ್ಗೆ ದೂರುಗಳು ಬಂದಿವೆ.

ಪೂರೈಕೆದಾರರ ಜಿಎಸ್‌ಟಿ ನೋಂದಣಿ ಹಾಗೂ ಬಿಲ್‌ಗಳ ಬಗ್ಗೆಯೂ ವರದಿಗಳಲ್ಲಿ ಪ್ರಶ್ನೆಗಳನ್ನು ಎತ್ತಲಾಗಿದೆ.ದೂರುಗಳ ಹಿನ್ನೆಲೆಯಲ್ಲಿ ಶೂ ಮತ್ತು ಸಾಕ್ಸ್‌ಗಳನ್ನು ಅಧಿಕೃತ ಸಂಸ್ಥೆಗಳು ಪ್ರಮಾಣೀಕರಿಸಿದ್ದವೆಯೇ ಹಾಗೂ ಪೂರೈಕೆಯಾಗಿರುವ ಉತ್ಪನ್ನಗಳು ನಿಜವಾಗಿಯೂ ಪ್ರಮಾಣೀಕರಿಸಲ್ಪಟ್ಟ ಉತ್ಪನ್ನಗಳೇ ಎಂಬ ಬಗ್ಗೆ ಅನುಮಾನಗಳು ಮೂಡಿರುವುದರಿಂದ ಸ್ವತಂತ್ರ ಪರಿಶೀಲನೆ ನಡೆಸುವಂತೆ ಇಲಾಖೆ ಸೂಚಿಸಿದೆ.

Author