ನವದೆಹಲಿ | ಕೇಂದ್ರ ಸಂಪುಟ ಪುನರಚನೆ ಆಗುವ ಸಾಧ್ಯತೆ : ರಾಜ್ಯದಿಂದ ತೇಜಸ್ವಿ ಸೂರ್ಯ ಬಿ. ವೈ ರಾಘವೇಂದ ಹೆಸರು

ನವ ದೆಹಲಿ

ನವದೆಹಲಿ, ಬಿಜೆಪಿಯ ರಾಷ್ಟ್ರೀಯ ಸಂಘಟನೆಯಲ್ಲಿ ದೊಡ್ಡ ಮಟ್ಟದ ಬದಲಾವಣೆ ಮಾಡಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟದಲ್ಲೂ ಪುನಾರಚನೆ ನಡೆಯಬಹುದೆಂಬ ಚರ್ಚೆ ದೆಹಲಿಯ ರಾಜಕೀಯ ವಲಯದಲ್ಲಿ ನಡೆಯುತ್ತಿದೆ. ಇದು ಕೇವಲ ಖಾಲಿ ಸ್ಥಾನಗಳನ್ನು ಭರ್ತಿ ಮಾಡುವ ಸಾಮಾನ್ಯ ಸಂಪುಟ ವಿಸ್ತರಣೆಯಾಗದೆ, ಮುಂದಿನ ವಿಧಾನಸಭಾ ಚುನಾವಣೆಗಳು ಹಾಗೂ 2029ರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರದ ತಂಡವನ್ನೇ ಮರುಹೊಂದಿಸುವ ಪ್ರಯತ್ನವಾಗಬಹುದು ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಸದ್ಯ ಪ್ರಸಾರಗೊಂಡಿರುವ ನ್ಯಾಷನಲ್ ನ್ಯೂಸ್​ಗಳನ್ನೆ ಉಲ್ಲೇಖಿಸಿ ಹೇಳುವುದಾದರೆ, ಪ್ರಸ್ತುತ ಕೇಂದ್ರ ಸಚಿವ ಸಂಪುಟದಲ್ಲಿ 69 ಸದಸ್ಯರಿದ್ದಾರೆ. ಸಂವಿಧಾನದ Article 75(1A) ಪ್ರಕಾರ ಕೇಂದ್ರ ಸಚಿವರ ಗರಿಷ್ಠ ಸಂಖ್ಯೆ 81 ಆಗಿರುವುದರಿಂದ, ಈಗಿನ ಸಂಖ್ಯೆಯನ್ನು ಹಾಗೆಯೇ ಪರಿಗಣಿಸಿದರೆ ಇನ್ನೂ 12 ಮಂದಿಯನ್ನು ಸೇರಿಸಿಕೊಳ್ಳಲು ಅವಕಾಶವಿದೆ.ಆದರೆ ಸದ್ಯ ಚರ್ಚಿತ ವಿಷಯದಲ್ಲಿ ಲೆಕ್ಕ ಕೇವಲ ಈ 12 ಸ್ಥಾನಗಳಿಗೆ ಸೀಮಿತವಾಗಿ ಸಂಪುಟ ವಿಸ್ತರಣೆಯಾಗುವುದಿಲ್ಲ. ಬದಲಾಗಿ ಸಂಪುಟ ಪುನರಚನೆ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಪಕ್ಷ ಸಂಘಟನೆಯಲ್ಲಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ನೇತೃತ್ವದಲ್ಲಿ 65 ಸದಸ್ಯರ ಹೊಸ ತಂಡ ಪ್ರಕಟವಾಗಿದ್ದು, ಅದರಲ್ಲಿ ದೊಡ್ಡ ಪ್ರಮಾಣದಲ್ಲಿ ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ.

ಮಹಿಳೆಯರು, ಯುವಕರು, ಸಾಮಾಜಿಕ ಹಾಗೂ ಪ್ರಾದೇಶಿಕ ಪ್ರಾತಿನಿಧ್ಯಕ್ಕೆ ಒತ್ತು ನೀಡಿರುವ ಈ ಸಂಘಟನಾ ಬದಲಾವಣೆಯ ಬಳಿಕ ಇದೇ ಸೂತ್ರ ಸರ್ಕಾರದ ಮಟ್ಟದಲ್ಲೂ ಅನುಸರಿಸಲಿದೆ ಎಂಬುದು ಕೇಳಿ ಬರುತ್ತಿದೆ.ರಾಷ್ಟ್ರೀಯ ಮಾಧ್ಯಮಗಳ ವರದಿಗಳ ಪ್ರಕಾರ, ಸಂಭವನೀಯ ಮೋದಿ ಸಂಪುಟ ಪುನಾರಚನೆಯ ಮೂಲ ಸೂತ್ರ ಎನ್‌ಡಿಎ ಮೈತ್ರಿಕೂಟ ಮತ್ತು ಮುಂದಿನ ಚುನಾವಣೆ ಆಗಿರಬಹುದು. ಉತ್ತರ ಪ್ರದೇಶ, ಗುಜರಾತ್, ಪಂಜಾಬ್, ಹಿಮಾಚಲ ಪ್ರದೇಶ, ಕರ್ನಾಟಕ, ಮಹಾರಾಷ್ಟ್ರ ಮತ್ತು ರಾಜಸ್ಥಾನದಂತಹ ರಾಜ್ಯಗಳ ರಾಜಕೀಯ ಲೆಕ್ಕಾಚಾರವೂ ಹೊಸ ಸಚಿವರ ಆಯ್ಕೆಯಲ್ಲಿ ಪರಿಣಾಮ ಬೀರುವ ಸಾಧ್ಯತೆ ಇದೆಯಂತೆ, ಇನ್ನೂ ಪ್ರಸ್ತುತ ಹಲವು ಹಿರಿಯ ಸಚಿವರು ಒಂದಕ್ಕಿಂತ ಹೆಚ್ಚು ಖಾತೆಗಳನ್ನು ಹೊಂದಿದ್ದಾರೆ.

ಅಮಿತ್ ಶಾ, ಜೆ.ಪಿ. ನಡ್ಡಾ, ಶಿವರಾಜ್ ಸಿಂಗ್ ಚೌಹಾಣ್, ಮನೋಹರ್ ಲಾಲ್, ಎಚ್.ಡಿ. ಕುಮಾರಸ್ವಾಮಿ, ಅಶ್ವಿನಿ ವೈಷ್ಣವ್, ಜ್ಯೋತಿರಾದಿತ್ಯ ಸಿಂಧಿಯಾ, ಕಿರಣ್ ರಿಜಿಜು ಮತ್ತು ಮನ್ಸುಖ್ ಮಾಂಡವಿಯಾ ಸೇರಿದಂತೆ ಅನೇಕ ಸಚಿವರು ಹೆಚ್ಚುವರಿ ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದಾರೆ. ಹೊಸಬರು ಬಂದರೆ ಈ ಖಾತೆಗಳಲ್ಲಿ ಕೆಲವು ಮರುಹಂಚಿಕೆಯಾಗುವ ಸಾಧ್ಯತೆ ಇದೆ.ಕರ್ನಾಟಕದ ಮಟ್ಟಿಗೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಹಾಗೂ ಶಿವಮೊಗ್ಗ ಸಂಸದ ಬಿ. ವೈ ರಾಘವೇಂದ್ರರವರ ಅವರ ಹೆಸರು ಸಂಭವನೀಯ ಹೊಸ ಮುಖಗಳ ಚರ್ಚೆಯಲ್ಲಿ ಕಾಣಿಸಿಕೊಂಡಿದೆ. ತೇಜಸ್ವಿ ಸೂರ್ಯ ಅವರನ್ನು ಭಾರತೀಯ ಜನತಾ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಸ್ಥಾನದಿಂದ ಬದಲಿಸಿ, ಗುಜರಾತ್‌ನ ಸಂಸದ ಹೇಮಾಂಗ್ ಜೋಶಿ ಅವರಿಗೆ ಆ ಹೊಣೆ ನೀಡಲಾಗಿದೆ.

ಬಿಜೆಪಿಯ ಸಂಘಟನಾ ಮರುಹೊಂದಾಣಿಕೆಯಲ್ಲಿ ತೇಜಸ್ವಿ ಸೂರ್ಯ ಅವರನ್ನು ಹಳೆಯ ಹೊಣೆಯಿಂದ ಬಿಡುಗಡೆ ಮಾಡಿರುವುದು ಅವರ ಮುಂದಿನ ರಾಜಕೀಯ ಪಾತ್ರದ ಕುರಿತು ಕುತೂಹಲ ಮೂಡಿಸಿದೆಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರ ಹೆಸರೂ ಸಹ ಈ ಸಂಧರ್ಭದಲ್ಲಿ ಪ್ರಸ್ತಾಪವಾಗುತ್ತಿದೆ. ಆದರೆ ಅವರನ್ನು ಸಂಪುಟ ಸೇರ್ಪಡೆಗೆ ಖಚಿತ ಅಥವಾ ಮುಂಚೂಣಿಯ ಅಭ್ಯರ್ಥಿ ಎಂದು ಹೇಳುವ ಹಂತದ ಬೆಳವಣಿಗೆ ಇದುವರೆಗೂ ನಡೆದಿಲ್ಲ. ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಮುಂದಿನ ಸ್ಥಾನಮಾನ, ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಅವಕಾಶ ನೀಡುವ ಸಾಧ್ಯತೆ ಮತ್ತು ತೇಜಸ್ವಿ ಸೂರ್ಯ ಅವರಿಗೆ ಹೊಸ ಪಾತ್ರ ನೀಡುವ ವಿಚಾರಗಳನ್ನು ಪಕ್ಷದೊಳಗಿನ ರಾಜಕೀಯ ಚರ್ಚೆಗಳ ಭಾಗವಾಗಿ ಉಲ್ಲೇಖಿಸಲಾಗಿದೆ.

ಬಿ.ವೈ. ರಾಘವೇಂದ್ರ ನಾಲ್ಕನೇ ಅವಧಿಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು, ಸೀನಿಯಾರಿಟಿಯಲ್ಲಿ ಮೇಲುಗೈ ಅವರದ್ದೇ ಆಗಿದೆ. ಹೀಗಾಗಿ ಆಯ್ಕೆಯ ಮಾನದಂಡಗಳಲ್ಲಿ ಅವರ ಕೈ ಮೇಲಾಗುವ ಸಾಧ್ಯತೆ ಇದೆ ಎಂದು ರಾಷ್ಟ್ರೀಯ ಮಾಧ್ಯಮಗಳು ಅಂದಾಜಿಸಿದೆ.ಪ್ರಸ್ತುತ ಮೋದಿ ಸರ್ಕಾರದಲ್ಲಿ ರಾಜ್ಯದಿಂದ ನಿರ್ಮಲಾ ಸೀತಾರಾಮನ್, ಪ್ರಹ್ಲಾದ್ ಜೋಶಿ, ವಿ. ಸೋಮಣ್ಣ ಮತ್ತು ಶೋಭಾ ಕರಂದ್ಲಾಜೆ ಬಿಜೆಪಿ ಪರವಾಗಿ ಸಚಿವರಾಗಿದ್ದಾರೆ. ಎನ್‌ಡಿಎ ಮೈತ್ರಿ ಪಕ್ಷ ಜೆಡಿಎಸ್‌ನ ಎಚ್.ಡಿ. ಕುಮಾರಸ್ವಾಮಿ ಕೂಡ ಕೇಂದ್ರ ಸಂಪುಟದಲ್ಲಿದ್ದಾರೆ. ಈ ಪಟ್ಟಿಗೆ ಹೊಸಬರು ಸೇರುತ್ತಾರಾ? ಅವರು ಯಾರಾಗಿರುತ್ತಾರೆ ಎಂಬುದು ತೀವ್ರ ಕತೂಹಲ ಮೂಡಿಸಿದೆ.

Author