ಶಿವಮೊಗ್ಗ, ಇಎಸ್‌ಐ ಒಪಿಡಿ ಸೇವೆಯನ್ನು ನಿಲ್ಲಿಸಿರುವುದರಿಂದ ಇಎಸ್ ಐ ಕಾರ್ಮಿಕರಿಗೆ ತೀವ್ರ ತೊಂದರೆಯಾಗಿದ್ದು, ಕೂಡಲೇ ಪುನರಾರಂಭ ಮಾಡಬೇಕು ಎಂದು ಜಿಲ್ಲಾ ಇಎಸ್ ಐ ವಿಮಾದಾರರ ಹಾಗೂ ಉತರೆ ಕಾರ್ಮಿಕರ ಸಂಘ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿನೀಡಿದ ಸಂಘದ ಜಿಲ್ಲಾಧ್ಯಕ್ಷ ರಾಜಾಸಾಬ್ ನಂದಿಹಳ್ಳಿ, ಕಾರ್ಮಿಕರಿಗೆ ಯಾವುದೇ ಅಡಚಣೆ ಇಲ್ಲದೆ ಔಷಧಿ ಹಾಗೂ ಚಿಕಿತ್ಸೆಯನ್ನು ಒದಗಿಸಬೇಕು. ಒಪಿಡಿ ಸೇವೆ ಸ್ಥಗಿತಗೊಳ್ಳಲು ಕಾರಣವಾದ ಸಮಸ್ಯೆಯನ್ನು ಪಾರದರ್ಶಕವಾಗಿ ಸಾರ್ವಜನಿಕರಿಗೆ ತಿಳಿಸಬೇಕು ಎಂದು ಆಗ್ರಹಿಸಿದರು.
ಚಿಕಿತ್ಸಾಲಯಗಳಲ್ಲಿ ಲ್ಯಾಬ್ ವ್ಯವಸ್ಥೆಯಾಗಬೇಕು.ಒಪಿಡಿ ಅಥವಾ ಇತರೆ ಚಿಕಿತ್ಸೆ ನಿಲ್ಲುವಂತಹ ಸಮಸ್ಯೆಗಳು ಮರುಕಳಿಸದಂತೆ ಶಾಶ್ವತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು. ಇತ್ತೀಚಿಗೆ ಇಎಸ್‌ಐ ಒ.ಪಿ.ಡಿ ಸೇವೆ ಸ್ಥಗಿತಗೊಂಡಿರುವುದರಿಂದ ಸಾವಿರಾರು ಕಾರ್ಮಿಕರು ಹಾಗೂ ಅವರ ಕುಟುಂಬದವರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ದಿನ ನಿತ್ಯ ಔಷಧಿಯನ್ನು ಪಡೆಯಬೇಕಾದ ರೋಗಿಗಳು ಚಿಕಿತ್ಸೆ ಇಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಇನ್ನು ಅನೇಕರು ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಹೆಚ್ಚಿನ ಹಣ ಖರ್ಚು ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಇದು ಕಾರ್ಮಿಕರ ಮೇಲಿನ ಬಹು ದೊಡ್ಡ ಅನ್ಯಾಯವಾಗಿದೆ ಎಂದರು.
ಈ ವಿಷಯವಾಗಿ ಹಲವು ಬಾರಿ ಸಂಬಂದ ಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂಇದುವರೆಗೂ ಸಮರ್ಪಕ ಪರಿಹಾರ ದೊರೆತಿಲ್ಲ ಎಂದರು.






