ಉಡುಪಿ | ಚಲಿಸುತ್ತಿದ್ದ ಶಾಲಾ ಬಸ್‌ನ ಚಾಲಕನಿಗೆ ಹಠಾತ್ ಹೃದಯಾಘಾತ

ಉಡುಪಿ

ಉಡುಪಿ,ಮಣಿಪಾಲ,ಚಲಿಸುತ್ತಿದ್ದ ಶಾಲಾ ಬಸ್‌ನ ಚಾಲಕನಿಗೆ ಹಠಾತ್ ಹೃದಯಾಘಾತ ಉಂಟಾಗಿ ಬಸ್ ರಸ್ತೆ ಮಧ್ಯೆಯ ಡಿವೈಡರ್‌ಗೆ ಢಿಕ್ಕಿ ಹೊಡೆದ ಘಟನೆ ಮಣಿಪಾಲದಲ್ಲಿ ನಡೆದಿದೆ.ಮಣಿಪಾಲದ ಮಾಧವ ಕೃಪಾ ಶಾಲೆಗೆ ಸೇರಿದ ಬಸ್, ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ವೇಳೆ ಚಾಲಕ ಸುರೇಶ್ ಸಣ್ಣಕ್ಕಿಬೆಟ್ಟು(54) ಎಂಬವರಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದೆ ಎನ್ನಲಾಗಿದೆ.

ಬಸ್ ಚಾಲನೆಯಲ್ಲಿರುವಾಗಲೇ ತೀವ್ರವಾಗಿ ಅಸ್ವಸ್ಥಗೊಂಡ ಅವರು, ಪರಿಸ್ಥಿತಿಯನ್ನು ಅರಿತು ಕೂಡಲೇ ವಾಹನವನ್ನು ರಸ್ತೆ ಬದಿಗೆ ತರುವ ಪ್ರಯತ್ನ ನಡೆಸಿದರು. ಆದರೆ ಬಸ್ ನಿಯಂತ್ರಣ ತಪ್ಪಿ ರಸ್ತೆ ಮಧ್ಯೆಯ ಡಿವೈಡರ್‌ಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದ್ದು, ಅದೃಷ್ಟವಶಾತ್ ಬಸ್‌ನಲ್ಲಿದ್ದ ವಿದ್ಯಾರ್ಥಿಗಳಿಗೆ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.

ಸಂಭವಿಸಬಹುದಾಗಿದ್ದ ಭಾರಿ ಅನಾಹುತ ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದೆ. ತಕ್ಷಣ ಸ್ಥಳೀಯರು ಹಾಗೂ ಶಾಲಾ ಸಿಬ್ಬಂದಿ ಚಾಲಕನ ನೆರವಿಗೆ ಧಾವಿಸಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

Author