ಎರ್ಲಾಂಗೆನ್, ಜರ್ಮನಿ: ಬಸವ ಸಮಿತಿ ಯುರೋಪ್ ವತಿಯಿಂದ “ಜಗಜ್ಯೋತಿ ಬಸವಣ್ಣನವರ ಪರಂಪರೆಯ ಆಚರಣೆ” (Celebrating the Legacy of Jagajyothi Basavanna) ಎಂಬ ಆಶಯದೊಂದಿಗೆ ‘ಬಸವ ಜಯಂತಿ 2026’ ಮಹಾಸಮಾವೇಶವನ್ನು ಮೇ 16, 2026ರ ಶನಿವಾರ ಬೆಳಿಗ್ಗೆ 9:00 ಗಂಟೆಯಿಂದ ಜರ್ಮನಿಯ ಎರ್ಲಾಂಗೆನ್ ನಗರದಲ್ಲಿ ಅದ್ಧೂರಿಯಾಗಿ ಆಯೋಜಿಸಲಾಗಿದೆ.
ಈ ಸಮಾವೇಶದಲ್ಲಿ ಯುರೋಪಿನ ವಿವಿಧ ದೇಶಗಳಿಂದ ನೂರಾರು ಬಸವಾಭಿಮಾನಿಗಳು, ಭಕ್ತರು ಹಾಗೂ ಕನ್ನಡಿಗರು ಭಾಗವಹಿಸುವ ನಿರೀಕ್ಷೆಯಿದೆ.ವಿದೇಶದ ನೆಲದಲ್ಲಿ ಬಸವಣ್ಣನವರ ತತ್ವ, ಸಮಾನತೆ, ಕಾಯಕ ಹಾಗೂ ದಾಸೋಹದ ಸಂದೇಶವನ್ನು ಮತ್ತಷ್ಟು ಬಲವಾಗಿ ಪಸರಿಸುವ ಸದುದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಗಣ್ಯರ ಉಪಸ್ಥಿತಿ:
ಈ ಮಹಾಸಮಾವೇಶದಲ್ಲಿ ಜರ್ಮನಿಯ ಭಾರತೀಯ ರಾಯಭಾರಿಯಾಗಿರುವ ಶ್ರೀ ಅಜಿತ್ ವಿನಾಯಕ್ ಗುಪ್ತೆ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮದ ಶೋಭೆ ಹೆಚ್ಚಿಸಲಿದ್ದಾರೆ.ಕಾರ್ಯಕ್ರಮದ ಅತ್ಯಂತ ವಿಶೇಷ ಆಕರ್ಷಣೆಯಾಗಿ ಚಿಕ್ಕಮಗಳೂರಿನ ಬಸವತತ್ವ ಪೀಠ ಹಾಗೂ ಶಿವಮೊಗ್ಗದ ಬಸವ ಕೇಂದ್ರದ ಶ್ರೀ ಮ.ನಿ.ಪ್ರ. ಡಾ. ಬಸವ ಮರುಳಸಿದ್ದ ಸ್ವಾಮೀಜಿಗಳು ದಿವ್ಯ ಉಪಸ್ಥಿತಿ ವಹಿಸಿ ಆಶೀರ್ವಚನ ನೀಡಲಿದ್ದಾರೆ.
ತಮ್ಮ ಉಪನ್ಯಾಸದಲ್ಲಿ ಬಸವಣ್ಣನವರ ವಚನ ತತ್ವ, ಸಾಮಾಜಿಕ ಸಮಾನತೆ, ಮಾನವೀಯ ಮೌಲ್ಯಗಳು ಹಾಗೂ ಶಾಂತಿಯ ಸಂದೇಶವನ್ನು ಭಕ್ತರಿಗೆ ಉಣಬಡಿಸಲಿದ್ದಾರೆ. ಅಲ್ಲದೆ, ಎರ್ಲಾಂಗೆನ್ ನಗರದ ಉಪ ಮೇಯರ್ ಶ್ರೀಮತಿ ಇವಾ ಲಿನ್ಹಾರ್ಟ್ (Frau Eva Linhart) ಅವರು ವಿಶೇಷ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.ಇದೇ ಸಂದರ್ಭದಲ್ಲಿ ಗೌರವ ಅತಿಥಿಗಳಾಗಿ ಇಂಡಾಲಜಿಸ್ಟ್ ಹಾಗೂ ದಕ್ಷಿಣ ಏಷ್ಯಾ ಅಧ್ಯಯನಗಳ ಖ್ಯಾತ ಪ್ರಾಧ್ಯಾಪಕರಾದ ಪ್ರೊ. ಡಾ. ರಾಬರ್ಟ್ ಜೆ. ಝೈಡೆನ್‌ಬೋಸ್, ಯುರೋಪ್ ವಿಶ್ವ ಹಿಂದೂ ಪರಿಷತ್ (VHP) ಪ್ರತಿನಿಧಿ ಶ್ರೀ ರಾಹುಲ್ ನಾರಾಯಣ್ ಜಿ ಹಾಗೂ ಐಸಿರಿ ಫೌಂಡೇಶನ್ ಮತ್ತು ಐಸಿರಿ ಟುಡೇ ಅಧ್ಯಕ್ಷರಾದ ಶ್ರೀ ರೋಹನ್ ಭಾರ್ಗವಪುರಿ ಅವರು ಉಪಸ್ಥಿತರಿರಲಿದ್ದಾರೆ.
ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಹಬ್ಬ:ಕಾರ್ಯಕ್ರಮದಲ್ಲಿ ಬಸವ ವಚನ ಪಠಣ, ಭಕ್ತಿಗೀತೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಮಕ್ಕಳಿಂದ ವಿಶೇಷ ಪ್ರದರ್ಶನಗಳು ಹಾಗೂ ಬಸವ ತತ್ವ ಪರಿಚಯ ಕಾರ್ಯಕ್ರಮಗಳು ನಡೆಯಲಿವೆ. ಯುರೋಪಿನ ವಿವಿಧ ಭಾಗಗಳಿಂದ ಆಗಮಿಸುವ ಕನ್ನಡಿಗರು ಹಾಗೂ ಬಸವ ಅಭಿಮಾನಿಗಳಿಗೆ ಇದು ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಹಬ್ಬವಾಗಲಿದೆ.
ಎರ್ಲಾಂಗೆನ್‌ನ “Gemeindezentrum Frauenaurach” ಸಭಾಂಗಣದಲ್ಲಿ ನಡೆಯಲಿರುವ ಈ ಮಹಾಸಮಾವೇಶವನ್ನು ಎಲ್ಲರ ಸಹಕಾರದೊಂದಿಗೆ ಈ ಬಾರಿ ಇನ್ನಷ್ಟು ಭವ್ಯವಾಗಿ ಆಯೋಜಿಸಲಾಗುತ್ತಿದೆ.ಬಸವಣ್ಣನವರ ಸಂದೇಶವು ವಿಶ್ವಮಾನವತೆಗೆ ದಾರಿದೀಪವಾಗಿದೆ.
ವಿದೇಶದ ನೆಲದಲ್ಲಿಯೂ ಕನ್ನಡ ಸಂಸ್ಕೃತಿ, ಶರಣ ತತ್ವ ಹಾಗೂ ಬಸವ ಚಿಂತನೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಮ್ಮ ಈ ಕೈಂಕರ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು, ಕನ್ನಡಿಗರು ಹಾಗೂ ಬಸವಾಭಿಮಾನಿಗಳು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ‘ಬಸವ ಸಮಿತಿ ಯುರೋಪ್’ ಕಾರ್ಯಕಾರಿ ಸಮಿತಿಯು ವಿನಂತಿಸುತ್ತದೆ ಎಂದು ಶಶಿಕಾಂತ ಗ ಗುಡ್ಡದಮಠಸದಸ್ಯರು, ಬಸವ ಸಮಿತಿ ಯುರೋಪ್ ರವರು ತಿಳಿಸಿದ್ದಾರೆ.

