ಮಂಗಳೂರು | ಬ್ಯಾಂಕ್ ಮ್ಯಾನೇಜರ್ ಸಮಯಪ್ರಜ್ಞೆಯಿಂದ ಡಿಜಿಟಲ್ ಅರೆಸ್ಟ್​​ನಿಂದ 84 ಲಕ್ಷ ರೂ. ವಂಚನೆಗೆ ಬ್ರೇಕ್

ದಕ್ಷಿಣ ಕನ್ನಡ

ಮಂಗಳೂರು, ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಅರೆಸ್ಟ್ ಎಂದು ಖದೀಮರು ಅಮಾಯಕರನ್ನು ವಂಚಿಸಿ ಕೋಟಿಗಟ್ಟಲೆ ಹಣ ವಂಚಿಸುತ್ತಿರುವುದು ಬೆಳಕಿಗೆ ಬರುತ್ತಲೇ ಇದೆ.

ಈ ನಡುವೆ ಮಂಗಳೂರಿನಲ್ಲಿ ಬ್ಯಾಂಕ್ ಮ್ಯಾನೇಜರ್ ಸಮಯ ಪ್ರಜ್ಞೆಯಿಂದ ವಂಚಕರು ಹಿರಿಯ ದಂಪತಿಗಳನ್ನು ಡಿಜಿಟಲ್ ಅರೆಸ್ಟ್​ ಮಾಡಿ ಹಣ ದೋಚುವುದನ್ನು ತಪ್ಪಿಸಲಾಗಿದೆ.

ಮುಲ್ಕಿಯ ದಾಮಸಕಟ್ಟೆ ನಿವಾಸಿಗಳಾದ ಬೆನೆಡಿಕ್ಟ್ ಫರ್ನಾಂಡಿಸ್ (84 ) ಹಾಗೂ ಲಿಲ್ಲಿ ಸಿಸಿಲಿಯಾ ಫೆರ್ನಾಂಡಿಸ್ (71 ) ರವರಿಗೆ ಡಿಸೆಂಬರ್ 1 ರಂದು ಯಾರೋ ಅಪರಿಚಿತರು ಉತ್ತರ ಪ್ರದೇಶದ ಸಿ.ಐ.ಡಿ ಪೊಲೀಸ್ ಎಂಬ ಸೊಗಿನಲ್ಲಿ ಮೊಬೈಲ್ ಫೋನ್ ವಾಟ್ಸ್​ಆ್ಯಪ್​ ಮೂಲಕ ಸಂಪರ್ಕಿಸಿದ್ದರು.

ಅವರುಗಳು 6 ಕೋಟಿ ಮೋಸ ಮಾಡಿರುವುದಾಗಿ ಅವರ ವಿರುದ್ದ ವಂಚನೆ ಪ್ರಕರಣ ದಾಖಲಾಗಿರುವುದಾಗಿ ನಂಬಿಸಿ, ಸೈಬರ್ ಕಳ್ಳರು ಡಿಜಿಟಲ್ ಅರೆಸ್ಟ್​​ಗೆ ಒಳಪಡಿಸಿದ್ದರು.

ತಮ್ಮ ಖಾತೆಯಲ್ಲಿರುವ ಹಣವನ್ನು ತನಿಖೆಗಾಗಿ ವರ್ಗಾಹಿಸಬೇಕೆಂದು ಸೂಚಿಸಿದ ಮೇರೆಗೆ ಇವರು ಕಿನ್ನಿಗೋಳಿಯ ಕೆನರಾ ಬ್ಯಾಂಕಿನಲ್ಲಿದ್ದ ಅವರ ಖಾತೆಯಿಂದ ಸುಮಾರು 84 ಲಕ್ಷ ರೂಪಾಯಿ ಹಣವನ್ನು ಸೈಬರ್ ಕಳ್ಳರು ಸೂಚಿಸಿದ ಬ್ಯಾಂಕ್ ಖಾತೆಗೆ ರವಾನಿಸಲು ಬ್ಯಾಂಕಿಗೆ ವೃದ್ದರು ಹೋಗಿದ್ದರು.

ಈ ಸಮಯ ಕಿನ್ನಿಗೋಳಿಯ ಕೆನರಾ ಬ್ಯಾಂಕಿನ ಮ್ಯಾನೇಜರ್ ರಾಯಸ್ಟನ್ ಅವರು ದೊಡ್ಡ ಮೊತ್ತದ ಹಣವನ್ನು ಏಕೆ ವರ್ಗಾವಣೆ ಮಾಡುತ್ತಿದ್ದೀರಿ ಎಂದು ಕೇಳಿದ್ದಕ್ಕೆ ವೃದ್ದದಂಪತಿಗಳು ಸರಿಯಾದ ಉತ್ತರ ನೀಡಿರಲಿಲ್ಲ.

ಇದರಿಂದ ಸಂಶಯಗೊಂಡು, ಸೈಬರ್ ವಂಚಕರು ಒದಗಿಸಿದಂತಹ ಖಾತೆಗೆ ಹಣವನ್ನು ವರ್ಗಾವಣೆ ಮಾಡದೇ, ಬ್ಯಾಂಕ್ ಮ್ಯಾನೇಜರ್​ ಕಿನ್ನಿಗೋಳಿ ಪರಿಸರದ ಪೊಲೀಸ್ ಬೀಟ್ ಸಿಬ್ಬಂದಿಯಾದ ಯಶವಂತ ಕುಮಾರ ಹಾಗೂ ಠಾಣಾ ಗುಪ್ತವಾರ್ತೆ ಸಿಬ್ಬಂದಿ ಕಿಶೋರ್​ ಅವರಿಗೆ ದೂರವಾಣಿ ಕರೆ ಮಾಡಿ ಈ ಬಗ್ಗೆ ತಿಳಿಸಿದ್ದರು.

ಕೂಡಲೇ ಕಾರ್ಯಪ್ರವೃತ್ತರಾದ ಮುಲ್ಕಿ ಪೊಲೀಸರು ವೃದ್ದ ದಂಪತಿಗಳ ಮನೆಗೆ ತೆರಳಿ ಅವರ ಮೊಬೈಲ್​ ಪರಿಶೀಲಿಸಿದ್ದು, ಈ ಸಮಯ ಅವರು ಡಿಜಿಟಲ್ ಅರೆಸ್ಟ್​​​ಗೆ ಒಳಗಾಗಿರುವುದು ಕಂಡುಬಂದಿದೆ. ಕೂಡಲೇ ಪೊಲೀಸ್ ಸಿಬ್ಬಂದಿಗಳು ಬ್ಯಾಂಕ್ ಮ್ಯಾನೇಜರ್ ಅವರಿಗೆ ಕರೆ ಮಾಡಿ ವಿಚಾರ ತಿಳಿಸಿ ವರ್ಗಾವಣೆ ಮಾಡದಂತೆ ಸೂಚಿಸಿ, ವೃದ್ದ ದಂಪತಿಗಳಿಗೆ ತಿಳಿವಳಿಕೆ ನೀಡಿ, ವೃದ್ದ ದಂಪತಿಗಳ ಹಣವನ್ನು ಉಳಿಸಿದ್ದಾರೆ. ಇದರ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಯವರು ವಿಚಾರಣೆ ನಡೆಸುತ್ತಿದ್ದಾರೆ.

ಈ ಕುರಿತಂತೆ ಮಾಹಿತಿ ನೀಡಿದ ಮಂಗಳೂರು ನಗರ ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ಅವರು, ಹಿರಿಯ ದಂಪತಿಗಳನ್ನು ಬಹುದಿನಗಳ ಕಾಲ ಡಿಜಿಟಲ್ ಅರೆಸ್ಟ್​​​​ಗೆ ಒಳಪಡಿಸಿ ಅವರ ಎಫ್ ಡಿ ಖಾತೆಯಲ್ಲಿದ್ದ ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಲು ವಂಚಕರು ಸೂಚಿಸಿದ್ದರು.

ಆದರೆ ಬ್ಯಾಂಕ್ ಮ್ಯಾನೆಜರ್ ಬೀಟ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಕೂಡಲೇ ಮನೆಗೆ ತೆರಳಿ ಅವವರಿಗೆ ತಿಳಿ ಹೇಳಿ ವಂಚನೆಯನ್ನು ತಪ್ಪಿಲಾಯಿತು ಎಂದು ತಿಳಿಸಿದ್ದಾರೆ.

Author