ಶೃಂಗೇರಿ | ಅಂಚೆ ಮತಗಳ ಮರು ಎಣಿಕೆಯಲ್ಲಿ ಬಿಜೆಪಿಯ ಡಿ.ಎನ್. ಜೀವರಾಜ್​ಗೆ ಜಯ

ಚಿಕ್ಕಮಗಳೂರು

ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಅವರು ಜಯ ಸಾಧಿಸಿದ್ದಾರೆ.ಎರಡು ದಿನಗಳ ಹಿಂದೆ ನಡೆದ ಅಂಚೆ ಮತಗಳ ಮರು ಎಣಿಕೆ ಪ್ರಕ್ರಿಯೆಯಲ್ಲಿ ಜೀವರಾಜ್ ಅವರು 52 ಮತಗಳ ಅಂತರದಿಂದ ಮುನ್ನಡೆ ಕಾಯ್ದುಕೊಂಡಿದ್ದರು.

ಉಚ್ಚ ನ್ಯಾಯಾಲಯದ ಆದೇಶದಂತೆ 123 – ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತ ಪತ್ರಗಳ ಮರು ಎಣಿಕೆ ಕಾರ್ಯವನ್ನು ಮುಕ್ತಾಯಗೊಳಿಸಿದ್ದು, ಚುನಾವಣಾಧಿಕಾರಿ ಫಲಿತಾಂಶವನ್ನು ಘೋಷಣೆ ಮಾಡಿದ್ದಾರೆ.

ಈ ಹಿನ್ನೆಲೆಯಲ್ಲಿ ಡಿ.ಎನ್. ಜೀವರಾಜ್ ಅವರು ಶೃಂಗೇರಿಯ ಶಾರದಾ ಮಠಕ್ಕೆ ಭೇಟಿ ನೀಡಿ ಶಾರದಾಂಬೆಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ಮರು ಎಣಿಕೆಯಲ್ಲಿ ಗೆಲುವಿನ ಜಯಭೇರಿ ಬಾರಿಸಿದ ಬೆನ್ನಲ್ಲೇ ದೇವಸ್ಥಾನದ ಸಮೀಪವೇ ಬಿಜೆಪಿ ಕಾರ್ಯಕರ್ತರು ಜೀವರಾಜ್ ಅವರಿಗೆ ಅಭಿನಂದನೆ ಸಲ್ಲಿಸಿ ಸಂಭ್ರಮಿಸಿದರು.

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರ ಅಂಚೆ ಮತದಾನದ ಮರು ಎಣಿಕೆ ಕುರಿತಂತೆ ಮೊನ್ನೆ, ಮತ ಎಣಿಕೆ ಕಾರ್ಯವನ್ನು ನಗರದ ಐಡಿಎಸ್​​ಜಿ ಕಾಲೇಜಿನಲ್ಲಿ ಮಾಡಲಾಯಿತು.

ಈ ವೇಳೆ ಫಲಿತಾಂಶವನ್ನು ಮುಚ್ಚಿದ ಲಕೋಟೆಯಲ್ಲಿ ಹೈಕೋರ್ಟ್​ಗೆ ಚುನಾವಣಾ ಅಧಿಕಾರಿ ಗೌರವ ಕುಮಾರ್ ಶೆಟ್ಟಿ ಸಲ್ಲಿಕೆ ಮಾಡಿದ್ದರು.ಈಗ ಉಚ್ಚ ನ್ಯಾಯಾಲಯದ ಆದೇಶದಂತೆ 123 – ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತ ಪತ್ರಗಳ ಮರು ಎಣಿಕೆ ಕಾರ್ಯವನ್ನು ಮುಕ್ತಾಯಗೊಳಿಸಿದ್ದು, ಚುನಾವಣಾಧಿಕಾರಿ ಫಲಿತಾಂಶವನ್ನು ಘೋಷಣೆ ಮಾಡಿದ್ದಾರೆ.

ಚುನಾವಣಾ ಅಧಿಕಾರಿ ಗೌರವ್ ಕುಮಾರ್ ಶೆಟ್ಟಿ ಅವರು ನೂತನ ಶಾಸಕರಾಗಿ ಆಯ್ಕೆಯಾದ ಶೃಂಗೇರಿಯ ಡಿ.ಎನ್. ಜೀವರಾಜ್ ಅವರಿಗೆ ಪ್ರಮಾಣ ಪತ್ರವನ್ನು ವಿತರಣೆ ಮಾಡಿದರು.

ಈ ಕುರಿತು ನೂತನ ಶಾಸಕ ಡಿ.ಎನ್. ಜೀವರಾಜ್ ಪ್ರತಿಕ್ರಿಯಿಸಿ, 2023 ಮೇ 13 ರಂದು ಚುನಾವಣಾ ಕೌಂಟಿಂಗ್ ನಡೆದಿದ್ದು, ಕೌಂಟಿಂಗ್​​ನಲ್ಲಿ ಅಸಿಂಧು ಮತಗಳನ್ನು ಈವರೆಗೆ ಶಾಸಕರಾಗಿದ್ದ ಟಿ.ಡಿ. ರಾಜೇಗೌಡರಿಗೆ ಹಾಕಿದ್ದಾರೆ ಎಂದು ನಾನು ನನ್ನ ಚುನಾವಣಾ ಏಜೆಂಟರ ಮೂಲಕ ಆರ್​ಒಗೆ ಆ ದಿನವೇ ದೂರು ಸಲ್ಲಿಕೆ ಮಾಡಿದ್ದೆ.

ಆ ದಿನ ಎರಡು ದೂರುಗಳನ್ನು ದಾಖಲು ಮಾಡಿದ್ದೆ. ನನ್ನ ದೂರು ಇದ್ದ ಹಾಗೆಯೇ ಅವರಿಗೆ ಪ್ರಮಾಣ ಪತ್ರವನ್ನು ನೀಡಿದ್ದರು. ಎರಡು ದಿನಗಳ ನಂತರ ಅಂಚೆ ಮೂಲಕ ಉತ್ತರವನ್ನು ನನಗೆ ಕಳಿಸಿಕೊಟ್ಟಿದ್ದರು.

ನಾನು ಆ ದಿನವೇ ಗೆದ್ದಿದ್ದೆ, ಆದರೆ ನನಗೆ ಮೋಸ ಮಾಡಿ ಇವರು ಗೆಲುವನ್ನು ಪಡೆದುಕೊಂಡಿದ್ದರು. ಈಗ ನ್ಯಾಯ ಸಿಕ್ಕಿದೆ ಹಾಗೂ ತುಂಬಾ ಸಂತೋಷವಾಗಿದೆ ಎಂದು ಹೇಳಿದರು.

Author