ಶಿವಮೊಗ್ಗ, ಏಪ್ರಿಲ್ 1, 2026ರಿಂದ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯಿಂದ ಒಂದು ಮಹತ್ವದ ಬದಲಾವಣೆ ಜಾರಿಗೆ ಬಂದಿದೆ. ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಮ್ (ITMS) ತಂತ್ರಜ್ಞಾನದ ಮೂಲಕ ಸಂಚಾರ ನಿಯಮ ಉಲ್ಲಂಘನೆ ಮಾಡುವ ವಾಹನ ಸವಾರರಿಗೆ ನೇರವಾಗಿ ಕ್ಯಾಮೆರಾ ಮುಖೇಣ ಇ-ಚಲನ್ ದಂಡ ವಿಧಿಸಲು ಪೊಲೀಸರು ಸಿದ್ಧರಾಗಿದ್ದಾರೆ.
ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ GPS ಆಧಾರಿತ ಕ್ಯಾಮೆರಾಗಳ ಮೂಲಕ ವಾಹನಗಳ ಫೋಟೋ ಸೆರೆಹಿಡಿದು ITMS ಸಾಫ್ಟ್ವೇರ್ಗೆ ಅಪ್ಲೋಡ್ ಮಾಡಿ ತಕ್ಷಣದಲ್ಲಿ ದಂಡ ವಿಧಿಸುವ ವ್ಯವಸ್ಥೆ ಜಾರಿಯಾಗಿದೆ. ಪೊಲೀಸ್ ಅಧಿಕಾರಿಗಳ ಪ್ರಕಾರ ಇದು ರಸ್ತೆ ಅಪಘಾತಗಳನ್ನು ಕಡಿಮೆ ಮಾಡಿ ವಾಹನ ಸಂಚಾರ ಸುರಕ್ಷತೆ ಹೆಚ್ಚಿಸುವ ಉದ್ದೇಶದ್ದು.
ಆದರೆ ನಗರದ ವಾಸ್ತವಿಕತೆಯನ್ನು ನೋಡಿದರೆ ಈ ‘ಕ್ಯಾಮೆರಾ ದಂಡ’ ಯೋಜನೆ ಸಮಸ್ಯೆಯ ಮೂಲಕ್ಕೆ ಔಷಧಿಯಾಗುತ್ತದೆಯೇ ಅಥವಾ ಕೇವಲ ಲಕ್ಷಣಗಳನ್ನು ಮರೆಮಾಚುವ ತಾತ್ಕಾಲಿಕ ಮುಖೇಶವೇ ಎಂಬ ಪ್ರಶ್ನೆ ಎದ್ದಿದೆ.
ನಗರದ ಟ್ರಾಫಿಕ್ ವ್ಯವಸ್ಥೆಯಲ್ಲಿ ಅರಾಜಕತೆಯ ಸತ್ಯ.
ಶಿವಮೊಗ್ಗ ನಗರವು ಶಾಂತಿ, ಶಿಕ್ಷಣ ಮತ್ತು ಸಂಸ್ಕೃತಿಯ ತಾಣವಾಗಿ ಹೆಸರಾದರೂ ಇತ್ತೀಚಿನ ವರ್ಷಗಳಲ್ಲಿ ಸಂಚಾರ ಸಮಸ್ಯೆಗಳ ಆಗರವಾಗಿ ಮಾರ್ಪಟ್ಟಿದೆ. ಬಹುತೇಕ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಮಿತಿ ಮೀರಿದೆ. ಅಶೋಕ ವೃತ್ತ, ಗೋಪಿ ವೃತ್ತ, ಸರ್ಕಿಟ್ ಹೌಸ್, ಪೊಲೀಸ್ ಚೌಕಿ ಸೇರಿದಂತೆ ಪ್ರಮುಖ ಸಂಧಿಗಳಲ್ಲಿ ಸಿಗ್ನಲ್ ಲೈಟ್ಗಳು ಕೇವಲ 10-15 ಸೆಕೆಂಡ್ಗಳಷ್ಟು ಹಸಿರು ಬೆಳಕು ನೀಡುತ್ತವೆ. ಸೆಕೆಂಡ್ ಕೌಂಟ್ಡೌನ್ ವ್ಯವಸ್ಥೆಯೇ ಇಲ್ಲದ ಕಾರಣ ಸವಾರರು ಗೊಂದಲಕ್ಕೊಳಗಾಗುತ್ತಾರೆ.
ಜೀಬ್ರಾ ಕ್ರಾಸಿಂಗ್ಗಳು ಮಸುಕಾಗಿವೆ ಅಥವಾ ಇಲ್ಲವೇ ಇಲ್ಲ. ಇದರಿಂದಾಗಿ ಪಾದಚಾರಿಗಳು, ವಿದ್ಯಾರ್ಥಿಗಳು ಮತ್ತು ವೃದ್ಧರು ರಸ್ತೆಯ ಮಧ್ಯದಲ್ಲಿ ಅಪಾಯಕ್ಕೆ ಒಳಗಾಗುತ್ತಿದ್ದಾರೆ.
ಫುಟ್ಪಾತ್ಗಳು ಪೂರ್ಣವಾಗಿ ಒತ್ತುವರಿಯಾಗಿವೆ. ಕಾಟಾಚಾರಕ್ಕೆ ಕೆಲವೊಂದು ಕಡೆ ತೆರವು ಮಾಡಿದ್ದೇವೆ ಅಂತ ತಿಳಿಸಿ ನಂತರ ದಂಡ ವಿಧಿಸಿ ಅಲ್ಲಿಯೇ ಮತ್ತೆ ವ್ಯಾಪಾರ ಮಾಡಲು ಅನುವು ಮಾಡಿಕೊಟ್ಟಿದ್ದಾರೆ ಅಧಿಕಾರಿಗಳು.
ಅಕ್ರಮ ಪಾರ್ಕಿಂಗ್
ಬೀದಿ ವ್ಯಾಪಾರಿಗಳು ಮತ್ತು ಅನಧಿಕೃತ ನಿರ್ಮಾಣಗಳು ಫುಟ್ಪಾತ್ಗಳನ್ನು ಕಬಳಿಸಿವೆ. ಇದರ ಪರಿಣಾಮವಾಗಿ ಪಾದಚಾರಿಗಳು ರಸ್ತೆಯಲ್ಲಿ ನಡೆಯುವಂತಾಗಿದೆ. ಇದು ಟ್ರಾಫಿಕ್ ಜಾಮ್ಗೆ ಇನ್ನಷ್ಟು ಇಂಧನ ಸುರಿಸುತ್ತಿದೆ.
ಆಸ್ಪತ್ರೆಗಳ ಪಾರ್ಕಿಂಗ್ ಸಮಸ್ಯೆ:
ರಸ್ತೆಯೇ ಪಾರ್ಕಿಂಗ್ ಲಾಟ್!ನಗರದ ತಿಲಕ್ ನಗರ, ಕುವೆಂಪು ರಸ್ತೆ,ಆರ್. ಎಂ. ಆರ್. ರಸ್ತೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ಖಾಸಗಿ ಆಸ್ಪತ್ರೆಗಳ ಸಂಖ್ಯೆ ಹೆಚ್ಚಾಗಿದೆ. ಸರ್ಜಿ ಆಸ್ಪತ್ರೆ, ಮ್ಯಾಕ್ಸ್ ಆಸ್ಪತ್ರೆ, ನಂಜಪ್ಪ ಆಸ್ಪತ್ರೆ,ಸನ್ ಸ್ಪೆಷಲಿಟಿ ಆಸ್ಪತ್ರೆ ಸೇರಿದಂತೆ ಆಸ್ಪತ್ರೆಗಳು ಸರಿಯಾದ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಿಲ್ಲ.

ರೋಗಿಗಳು, ಬಂಧುಗಳ ವಾಹನ , ಆಂಬುಲೆನ್ಸ್ಗಳು ರಸ್ತೆಯ ಎರಡು ಬದಿಯಲ್ಲೂ ವಾಹನ ನಿಲ್ಲಿಸುತ್ತವೆ. ಇದರಿಂದ ರಸ್ತೆಯ ಅಗಲ ಕುಗ್ಗಿ ಸಂಚಾರ ಸ್ಥಗಿತಗೊಳ್ಳುತ್ತಿದೆ. ಮಹಾನಗರ ಪಾಲಿಕೆಯಿಂದ ಆಸ್ಪತ್ರೆಗಳಿಗೆ ನೋಟೀಸ್ ನೀಡುವುದು, ಪಾರ್ಕಿಂಗ್ ಕಟ್ಟಡಗಳನ್ನು ಕಡ್ಡಾಯಗೊಳಿಸುವುದು ಅಥವಾ ದಂಡ ವಿಧಿಸುವುದು ಯಾವುದೂ ನಡೆಯುತ್ತಿಲ್ಲ.
ಹಿಂದಿನ ಮಹಾನಗರ ಪಾಲಿಕೆ ಕಮಿಷನರ್ ಚಾರುಲತಾ ಅವರು ಕೆಲವು ಕ್ರಮಗಳನ್ನು ತೆಗೆದುಕೊಂಡಿದ್ದರೂ, ಅವರ ವರ್ಗಾವಣೆಯ ನಂತರ ಸ್ಥಿತಿ ಹದಗೆಟ್ಟಿದೆ ಎಂಬ ಆರೋಪಗಳಿವೆ.ಪ್ರಸ್ತುತ ಮಹಾನಗರ ಪಾಲಿಕೆ ಆಯುಕ್ತರು ನಮ್ಮ ಮಾಧ್ಯಮಕ್ಕೆ ಮಾತನಾಡಿ Conservency ಬಳಕೆ ಉಚಿತವಾಗಿ ಪಾರ್ಕ್ ಮಾಡಲು ಸಹಕಾರ ಮಾಡಿದ್ದೇವೆ ಅನ್ನುತ್ತಾರೆ, ಟ್ರಾಫಿಕ್ ದಟ್ಟನೆ ನಿಯಂತ್ರಣ ಬಗ್ಗೆ ಮಾಹಿತಿ ಪತ್ರಕರ್ತರಿಗೆ ತಪ್ಪು ವ್ಯಕ್ತಿಗೆ ಸರಿಯಾದ ಪ್ರಶ್ನೆ ಎನ್ನುತ್ತಾರೆ ಹಾಗೂ ಪೊಲೀಸ್ ಇಲಾಖೆಯ ಸಹಯೋಗದಲ್ಲಿ ನಿಯಂತ್ರಣ ತರುತ್ತೇವೆ ಸಮಸ್ಯೆ ಬಗೆಹರಿಸಿಕೊಡುತ್ತೇವೆ ಅನ್ನುತ್ತಾರೆ ಹೊರತು ಯಾವ ರೀತಿ ಸಮಸ್ಯೆ ಬಗೆಹರಿಸಿಕೊಡುತ್ತೇವೆ ಎಂಬ ಉತ್ತರವಿಲ್ಲಾದಾಗಿದೆ.
ಹಿಂದಿನ ಆದೇಶಗಳು ಕಾಗದದ ಮೇಲೆಯೇ: ಭಾರಿ ವಾಹನಗಳ ನಿಷೇಧ ಉಲ್ಲಂಘನೆ
ಹಿಂದಿನ ಜಿಲ್ಲಾಧಿಕಾರಿಗಳಾದ ಗುರುದತ್ ಹೆಗಡೆ ಅವರು ಬೆಳಿಗ್ಗೆ 7 ರಿಂದ ರಾತ್ರಿ 9 ಗಂಟೆಯವರೆಗೆ ನಗರದೊಳಗೆ ಭಾರಿ ವಾಹನಗಳ ನಿಷೇಧ ಆದೇಶ ಹೊರಡಿಸಿದ್ದರು. ಆದರೆ ಇದು ಕಾಗದದ ಮೇಲೆಯೇ ಉಳಿದಿದೆ.

ಹೋಳೆಹೊನ್ನೂರು-ಚಿತ್ರದುರ್ಗ ಫ್ಲೈಓವರ್ನಂತಹ ಸಂಪರ್ಕ ರಸ್ತೆಗಳಲ್ಲಿ ಭಾರಿ ವಾಹನಗಳ ಸಂಚಾರವು ಟ್ರಾಫಿಕ್ ಜಾಮ್ಗೆ ಕಾರಣವಾಗುತ್ತಿದೆ. ಹೊಳೆ ಸ್ಟಾಪ್ ನಲ್ಲಿ ವಿಪರೀತ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ ಇದಕ್ಕೆ ಪರಿಹಾರ ಸಿಗದಂತೆ ಆಗಿದೆ.
ಅಕ್ರಮ ಕಟೌಟ್ಗಳು, ಬ್ಯಾನರ್ಗಳು, ಹೋರ್ಡಿಂಗ್ಗಳು ಚಾಲಕರ ದೃಷ್ಟಿಗೆ ಅಡ್ಡಿಯಾಗುತ್ತಿವೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಕೋಟಿಗಟ್ಟಲೆ ಹಣ ಖರ್ಚಾಗಿದ್ದರೂ ‘ಸ್ಮಾರ್ಟ್’ ಟ್ರಾಫಿಕ್ ವ್ಯವಸ್ಥೆಯ ಸುಳಿವೇ ಇಲ್ಲ.ದಂಡ ವಿಧಿಸುವುದು ಸರಿ,
ಆದರೆ ಮೂಲ ಸಮಸ್ಯೆಗಳನ್ನು ಬಗೆಹರಿಸದೆಯೇ?ಪೊಲೀಸ್ ಇಲಾಖೆಯ ಈ ಕ್ರಮವು ಅಪಘಾತ ನಿಯಂತ್ರಣಕ್ಕೆ ಸಹಕಾರಿಯಾಗಬಹುದು. ಟೆಕ್ನಾಲಜಿ ಬಳಸಿ ನಿಯಮಬದ್ಧತೆ ಹೆಚ್ಚಿಸುವುದು ಸಕಾಲಿಕ.
ಆದರೆ ಪ್ರಶ್ನೆ ಇಲ್ಲಿದೆ: ಮೂಲ ಸಮಸ್ಯೆಗಳನ್ನು ಬಗೆಹರಿಸದೆ ಕೇವಲ ದಂಡ ವಿಧಿಸುವುದು ಎಷ್ಟು ಸರಿ? ಸವಾರರು ನಿಯಮ ಉಲ್ಲಂಘಿಸುವುದಕ್ಕೆ ಕಾರಣಗಳು ಬಹುಪಾಲು ವ್ಯವಸ್ಥೆಯಲ್ಲಿವೆ.
ಸಿಗ್ನಲ್ಗಳಲ್ಲಿ ಕೌಂಟ್ಡೌನ್ ಇಲ್ಲದಿದ್ದರೆ, ಫುಟ್ಪಾತ್ ಒತ್ತುವರಿಯಿಂದ ರಸ್ತೆಯಲ್ಲಿ ನಿಲುಗಡೆಯಾಗುತ್ತಿದ್ದರೆ, ಆಸ್ಪತ್ರೆಗಳಲ್ಲಿ ಪಾರ್ಕಿಂಗ್ ಇಲ್ಲದಿದ್ದರೆ ಸವಾರರು ತಪ್ಪು ಮಾಡದೆ ಇರುವುದು ಹೇಗೆ?
ಪೊಲೀಸರು ದಂಡ ವಸೂಲಿಯಲ್ಲಿ ತೊಡಗಿದ್ದರೆ, ಮಹಾನಗರ ಪಾಲಿಕೆ ಸಮಸ್ಯೆಗಳನ್ನು ಬಗೆಹರಿಸದೆ ನೋಡುತ್ತಿದ್ದರೆ, ಜಿಲ್ಲಾಧಿಕಾರಿ ಕಚೇರಿ ಆದೇಶಗಳನ್ನು ಅನುಷ್ಠಾನಗೊಳಿಸದಿದ್ದರೆ ಈ ದಂಡ ಯೋಜನೆ ಸಾಮಾನ್ಯ ನಾಗರಿಕರ ಮೇಲೆ ಹೆಚ್ಚಿನ ಹೊರೆಯಾಗುತ್ತದೆಯೇ ಹೊರತು ಸಮಸ್ಯೆ ಬಗೆಹರಿಯುವುದಿಲ್ಲ.

ಹಿಂದೆಯೂ ITMS ಮೂಲಕ ದಂಡ ವಸೂಲಿಯಾಗಿದೆ, ಆದರೆ ಟ್ರಾಫಿಕ್ ಜಾಮ್ ಕಡಿಮೆಯಾಗಿಲ್ಲ ಎಂಬುದು ಸತ್ಯ.
ಇನ್ನು ವೃತ್ತ ನಿರೀಕ್ಷಕರಾದ (Circle Inspector) ದೇವರಾಜ್ ಅವರು ಶತಾಯಗತಾಯ ನಗರದಲ್ಲಿ ಟ್ರಾಫಿಕ್ ಸಮಸ್ಯೆ ಬಗೆಹರಿಸಿಕೊಡಲು ಪ್ರಯತ್ನಿಸುತ್ತಿದ್ದಾರೆ. ಆದರೆ ಪರಿಸ್ಥಿತಿಯ ಪ್ರಕಾರ ವಾಸ್ತವದಲ್ಲಿ ತಿಳಿಸಬೇಕು ಎಂದರೆ ದೇವರಾಜ್ ಒಬ್ಬರೇ ನಗರದಲ್ಲಿ ಏನು ಬದಲಾವಣೆ ಮಾಡಲು ಸಾಧ್ಯವಿದೆ ಇಲಾಖೆಯ ಸಹಕಾರ ಅತ್ಯಗತ್ಯವಾಗಿದೆ.
ದೇವರಾಜ್ ಇದ್ದಾಗ ಮಾತ್ರ ಸಿಬ್ಬಂದಿಗಳು ಕಟ್ಟು ನಿಟ್ಟಾಗಿ ಕರ್ತವ್ಯ ನಿರ್ವಹಿಸುತ್ತಿರುವುದು ಬೇಸರದ ಸಂಗತಿಯಾಗಿದೆ.
ಒಬ್ಬ ಪ್ರಾಮಾಣಿಕ ದಕ್ಷ ಅಧಿಕಾರಿಯಾಗಿ ಏನೆಲ್ಲಾ ಮಾಡಲು ಸಾಧ್ಯವಿದ್ದೇಯೋ ಅದೆಲ್ಲ ದೇವರಾಜ್ ಅವರು ಪ್ರಯತ್ನ ಮಾಡಿದ್ದಾರೆ, ಅದರಂತೆ ಗಾಂಧಿ ಬಜಾರ್ ನಲ್ಲಿ ಒಂದು ಹಂತಕ್ಕೆ ವ್ಯವಸ್ಥೆ ಸರಿ ಮಾಡಿದ್ದಾರೆ, ಹಾಗೂ ಎಲ್ಲೆಲ್ಲಿ Hums ಹಾಕಿದರೆ ಅಪಘಾತ ನಿಯಂತ್ರಣ ಆಗತ್ತೆ ಅಲ್ಲೆಲ್ಲ Hums ಅಳವಡಿಸಿದ್ದಾರೆ.

ಉಷಾ ನರ್ಸಿಂಗ್ ಹೋಂ ಬಳಿ ಸಿಗ್ನಲ್ ಲೈಟ್ ಅಳವಡಿಸಿದ್ದಾರೆ. ಹಲವಾರು ಸಮಸ್ಯೆಗಳ ಬಗ್ಗೆ ಸಾಕಷ್ಟು ಪ್ರಯತ್ನಮೀರಿ ಕರ್ತವ್ಯ ಮಾಡಿದ್ದಾರೆ ಆದರೆ ಇದರೊಟ್ಟಿಗೆ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಹ ಬೆಂಬಲಿಸಿ ನಿಂತರೆ ಮಾತ್ರ ಸಮಸ್ಯೆ ಬಗೆಹರಿಸಿಕೊಡಲು ಸಾಧ್ಯವಿದೆ ಎಂಬುದು ಜನಜನಿತವಾಗಿ ಕೇಳಿಬರುತ್ತಿರುವ ಮಾತಾಗಿದೆ.
ಇನ್ನು ಕ್ಯಾಮೆರಾ ಮೂಲಕ ದಂಡ ವಿಧಿಸುವ ಕೆಲಸಕ್ಕೆ ಮುಂದಾಗಿರುವ ಪೊಲೀಸ್ ಇಲಾಖೆಯ ಬಗ್ಗೆ ವಾಹನ ಸವಾರರು, ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.ಸರಿಯಾಗಿ ವ್ಯವಸ್ಥೆ ನೀಡದೆ ದಂಡ ವಿಧಿಸುವ ಪ್ರಕ್ರಿಯೆ ವಿರುದ್ಧ ವ್ಯಾಪಾಕ ಆಕ್ರೋಶ ವ್ಯಕ್ತವಾಗುತ್ತಿದೆ. ಜನ ಸ್ನೇಹಿ ಪೊಲೀಸ್ ಎಂದರೆ ಇದೇನಾ ಎಂಬ ಪ್ರಶ್ನೆ ಪ್ರಜ್ಞಾವಂತರಲ್ಲಿ ಕೇಳಿ ಬರುತ್ತಿದೆ?

ಸಮಸ್ಯೆ ಬಗೆಹರಿಸಿಕೊಡಲು ಏನು ಮಾಡಬೇಕು?
ಸಮಗ್ರ ಕ್ರಮಗಳ ಅಗತ್ಯ ಈ ಸಮಸ್ಯೆಗೆ ಒಂದು ಸಮಗ್ರ ಪರಿಹಾರ ಅಗತ್ಯ.ಸಿಗ್ನಲ್ ಲೈಟ್ಗಳನ್ನು ಆಧುನೀಕರಿಸಿ, ಸೆಕೆಂಡ್ ಕೌಂಟ್ಡೌನ್ ಮತ್ತು ಎಐ ಕ್ಯಾಮೆರಾಗಳನ್ನು ಜಾರಿಗೆ ತನ್ನಿ.

ಆಸ್ಪತ್ರೆಗಳಿಗೆ ಕಡ್ಡಾಯ ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ತಂದು ಮಹಾನಗರ ಪಾಲಿಕೆಯಿಂದ ನೋಟೀಸ್ ನೀಡಿ.ಫುಟ್ಪಾತ್ ಒತ್ತುವರಿ ತೆರವುಗೊಳಿಸಿ, ಜೀಬ್ರಾ ಕ್ರಾಸಿಂಗ್ಗಳನ್ನು ಪುನಃಸ್ಥಾಪಿಸಿ. ಪೀಕ್ ಅವರ್ನಲ್ಲಿ ಭಾರಿ ವಾಹನ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ.

ಪೊಲೀಸ್ ಮತ್ತು ಮಹಾನಗರ ಪಾಲಿಕೆಯ ನಡುವೆ ಸಮನ್ವಯ ಕಮಿಟಿ ರಚಿಸಿ.
ನಗರದ ನಾಗರಿಕರು ಈಗಾಗಲೇ ಹೈರಾಣಾಗಿದ್ದಾರೆ. “ದಂಡ ಕಟ್ಟುತ್ತೇವೆ, ಆದರೆ ರಸ್ತೆಯಲ್ಲಿ ಸಂಚರಿಸಲು ಸಾಧ್ಯವಿಲ್ಲ” ಎಂಬ ಅಸಮಾಧಾನ ಹೆಚ್ಚಾಗುತ್ತಿದೆ. ಪೊಲೀಸ್ ಇಲಾಖೆಯ ಈ ತಂತ್ರಜ್ಞಾನ ಆಧಾರಿತ ಕ್ರಮ ಸ್ವಾಗತಾರ್ಹವಾದರೂ, ಅದು ಕೇವಲ ದಂಡ ವಸೂಲಿಯ ಸಾಧನವಾಗದೆ ನಿಜವಾದ ಸುರಕ್ಷತೆ ಮತ್ತು ಸುಗಮ ಸಂಚಾರಕ್ಕೆ ಕಾರಣವಾಗಬೇಕು.
ಶಿವಮೊಗ್ಗ ನಗರವು ಸ್ಮಾರ್ಟ್ ಸಿಟಿಯಾಗಿ ಬೆಳೆಯಬೇಕಾದರೆ ಕ್ಯಾಮೆರಾ ಕಣ್ಣುಗಳ ಜೊತೆಗೆ ಅಧಿಕಾರಿಗಳ ‘ಕಣ್ಣು ತೆರೆಯುವುದು’ ಅಗತ್ಯ. ಇಲ್ಲವಾದರೆ ಈ ದಂಡ ಯೋಜನೆ ಕೇವಲ ಒಂದು ‘ಕ್ಯಾಮೆರಾ ಶೋ’ ಆಗಿ ಉಳಿಯುತ್ತದೆ.
ನಗರದ ಪ್ರಜೆಗಳು ಮತ್ತು ಸಾರ್ವಜನಿಕರು ಸಮಗ್ರ ಬದಲಾವಣೆಗಾಗಿ ಕಾಯುತ್ತಿದ್ದಾರೆ. ಈಗ ಅಧಿಕಾರಿಗಳ ಕ್ರಮದ ಸರಿ-ತಪ್ಪುಗಳನ್ನು ಪರೀಕ್ಷಿಸುವ ಸಮಯ ಬಂದಿದೆ.



