ಶಿವಮೊಗ್ಗ | ನಕಲಿ ಚಿನ್ನದ ನಾಣ್ಯ ನೀಡಿ ಲಕ್ಷಾಂತರ ರೂಪಾಯಿ ವಂಚನೆ

ಶಿವಮೊಗ್ಗ

ಶಿವಮೊಗ್ಗ, ಹಳೆಯ ಕಾಲದ ಚಿನ್ನದ ನಾಣ್ಯಗಳನ್ನು ಕಡಿಮೆ ಬೆಲೆಗೆ ನೀಡುವುದಾಗಿ ನಂಬಿಸಿ ಹುಬ್ಬಳ್ಳಿಯ ಸಮಾಜ ಸೇವಕರೊಬ್ಬರಿಗೆ ಬರೋಬ್ಬರಿ 4 ಲಕ್ಷ ರೂಪಾಯಿ ವಂಚಿಸಿರುವ ಬಗ್ಗೆ ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ.

ಹಳೆ ಹುಬ್ಬಳ್ಳಿಯ ಆನಂದನಗರ ರಸ್ತೆಯ ನಿವಾಸಿ ಮುಕುಂದ ಗೌಡ. ಇವರಿಗೆ 6 ತಿಂಗಳ ಹಿಂದೆ ಅಶೋಕ ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬ ತಮಗೆ ಸಮಸ್ಯೆಯಿದ್ದು ಸಹಾಯ ಮಾಡುವಂತೆ ಕೋರಿದ್ದನಂತೆ ಬಳಿಕ ತಾನು ಮೈಸೂರು ಕಡೆಯವನು, ಮನೆಯ ಪಾಯ ತೆಗೆಯುವಾಗ ಹಳೆಯ ಕಾಲದ ಚಿನ್ನದ ನಾಣ್ಯಗಳು ಸಿಕ್ಕಿವೆ. ಕಡಿಮೆ ಬೆಲೆಗೆ ಅವುಗಳನ್ನು ನೀಡುತ್ತೇನೆ ಎಂಬಿತ್ಯಾದಿಯಾಗಿ ಆಮೀಷ ಒಡ್ಡಿದ್ದಾನೆ.

ಮೊದಲು ಇದನ್ನು ನಂಬದ ಸಂತ್ರಸ್ತರು ಬಳಿಕ ನಾಣ್ಯ ಖರೀದಿಸಲು ಒಪ್ಪಿದ್ದಾರೆ. ಈ ವಹಿವಾಟಿಗೆ ಶಿವಮೊಗ್ಗ ಪಿಕ್ಸ್​ ಆಗಿತ್ತು. ಕಳೆದ ಮಾರ್ಚ್ 10, 2026 ರಂದು ಮಧ್ಯಾಹ್ನ 1 ಗಂಟೆಗೆ ಶಿವಮೊಗ್ಗದ ಸಾಗರ ರಸ್ತೆಯ ಶ್ರೀರಾಂಪುರ ಬಳಿಯ ಹೈವೇ ಪಕ್ಕದ ಖಾಲಿ ಜಾಗದಲ್ಲಿ ಆರೋಪಿಗಳು ಸಂತ್ರಸ್ತರನ್ನ ಭೇಠಿಯಾಗಿದ್ದಾರೆ.

101 ರೂಪಾಯಿ ಪಡೆದು ಒಂದು ನಾಣ್ಯವನ್ನು ಸಂತ್ರಸ್ತರಿಗೆ ನೀಡಿ ಅಲ್ಲಿಂದ ಆರೋಪಿಗಳು ತೆರಳಿದ್ದರು. ಬಳಿಕ ಮುಕುಂದ ಗೌಡರು ಹುಬ್ಬಳ್ಳಿಯ ಬಂಗಾರದ ಅಂಗಡಿಯಲ್ಲಿ ಆ ನಾಣ್ಯವನ್ನು ಪರೀಕ್ಷಿಸಿದ್ದರು. ಅದು ಅಸಲಿ ಆಗಿತ್ತು. ನಂಬಿಕೆ ಮೂಡಿದ ಮೇಲೆಕೊಟ್ಟ ಸ್ಯಾಂಪಲ್ ಅಸಲಿ ಆಗಿದ್ದರಿಂದ ಸಂತ್ರಸ್ತರಲ್ಲಿ ನಂಬಿಕೆ ಹುಟ್ಟಿದೆ.

ಹೀಗಾಗಿ 200 ಗ್ರಾಂ ಚಿನ್ನಕ್ಕೆ 5 ಲಕ್ಷ ರೂಪಾಯಿ ಡಿಮ್ಯಾಂಡ್ ಇಟ್ಟಿದ್ದರು. ಕೊನೆಗೆ 4 ಲಕ್ಷ ರೂಪಾಯಿ ನೀಡಲು ಚೌಕಾಸಿ ಆಗಿದೆ. ಅದರಂತೆ ಮಾರ್ಚ್ 13, 2026 ರಂದು ಬೆಳಗ್ಗೆ 11:30 ಕ್ಕೆ ಅದೇ ಸ್ಥಳಕ್ಕೆ ಮುಕುಂದ ಗೌಡರು ಮತ್ತೆ ಶಿವಮೊಗ್ಗಕ್ಕೆ ಬಂದು ಆರೋಪಿಗಳಿಗೆ ನಾಲ್ಕು ಲಕ್ಷ ಕೊಟ್ಟು, 200 ಗ್ರಾಂ ತೂಕದ ನಾಣ್ಯಗಳನ್ನು ಪಡೆದು ಹುಬ್ಬಳ್ಳಿಗೆ ವಾಪಸಾಗಿದ್ದರು.

ಆದರೆ ಈ ಸಲ ಚಿನ್ನದ ನಾಣ್ಯಗಳು ಅಸಲಿಯಾಗಿರಲಿಲ್ಲ. ಅಂತಿಮವಾಗಿ ಆರೋಪಿಗಳಿಗೆ ಕರೆ ಮಾಡಿದರೆ, ಅವರ ಫೋನ್ ಸ್ವಿಚ್ ಆಫ್​ ಆಗಿತ್ತು. ಹೀಗಾಗಿ ಮೋಸ ಹೋಗಿರುವುದು ಖಾತರಿಯಾಗಿ ಶಿವಮೊಗ್ಗ ತುಂಗಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Author