ಶಿವಮೊಗ್ಗ,ಹೊಳೆಹೊನ್ನೂರು ಸಮೀಪದ ಹನುಮಂತಾಪುರದಲ್ಲಿ ಮಾರ್ಚ್ 29ರಂದು ಉಪನ್ಯಾಸಕ ಸುರೇಶ್ ಅವರ ಮೃತದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಎಫ್‌ಐಆರ್ ದಾಖಲಾಗಿದೆ.
ದಾಖಲಾಗಿರುವ ಎಫ್ಐಆರ್ನಲ್ಲಿ ಮೃತರ ಸಾವಿನ ಬಗ್ಗೆ ಪತ್ನಿ ಅನುಮಾನ ವ್ಯಕ್ತಪಡಿಸಿದ್ದಾರೆ. ಕೊನೆಯದಾಗಿ ಉಪನ್ಯಾಸಕ ಸುರೇಶ್ ತನ್ನ ಸ್ನೇಹಿತರ ಜೊತೆಗೆ ಹೋಗುವುದಾಗಿ ಹೇಳಿದ್ದರ ಬಗ್ಗೆ ಉಲ್ಲೇಖಿಸಿದ್ದಾರೆ. ಸದ್ಯ ಈ ವಿಚಾರ ಒಂದಷ್ಟು ಅನುಮಾನ ಮೂಡಿಸಿದೆ.
ಸುರೇಶ್ ಅವರ ಪತ್ನಿ ನನ್ನ ಗಂಡನನ್ನು ಯಾರೋ ಬೆಂಕಿ ಹಚ್ಚಿ ಕೊಲೆ ಮಾಡಿರಬಹುದು ಎಂದು ದೂರಿದ್ದು, ಆರೋಪಿಗಳನ್ನ, ಅವರನ್ನು ಪತ್ತೆಹಚ್ಚಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಎಫ್‌ಐಆರ್ ಮಾಹಿತಿಯ ಪ್ರಕಾರ, ಮಾರ್ಚ್ 28ರಂದು ಬೆಳಿಗ್ಗೆ ಉಪನ್ಯಾಸಕ ಸುರೇಶ್ ಕೆಲಸಕ್ಕೆಂದು ಹೋದವರು ಮರಳಿ ಬಂದಿಲ್ಲ. ಈ ಬಗ್ಗೆ ಪತ್ನಿ ನಾಗರತ್ನ ಸುರೇಶರವರ ತಾಯಿಯ ಬಳಿ ವಿಚಾರಿಸಿದಾಗ, ಭದ್ರಾವತಿಯಿಂದ ಮೂವರು ಸ್ನೇಹಿತರು ಬರುತ್ತಾರೆ, ಅವರೊಂದಿಗೆ ಕಾರ್ಯಕ್ರಮವೊಂದಕ್ಕೆ ತುಮಕೂರಿಗೆ ಹೋಗಿ ನಾಳೆ ಸಂಜೆ ಬರುತ್ತೇನೆ ಎಂದು ಸುರೇಶ್ ತಿಳಿಸಿ ಹೋಗಿದ್ದರು ಎಂಬ ವಿಚಾರ ಗೊತ್ತಾಗಿದೆ.
ಈ ಮಧ್ಯೆ ಮರುದಿನ ಬೆಳಿಗ್ಗೆ 7.15ಕ್ಕೆ ಸುರೇಶ್ ಅವರ ಅಣ್ಣನ ಮಗ ಮಧು ಎಂಬುವವರು ಫೋನ್ ಮಾಡಿ, ತೋಟದಲ್ಲಿ ಚಿಕ್ಕಪ್ಪನಿಗೆ ಬೆಂಕಿ ಹತ್ತಿಕೊಂಡಿದೆ, ಕೂಡಲೇ ಬನ್ನಿ ಎಂದು ತಿಳಿಸಿದ್ದಾರೆ. ಸ್ಥಳಕ್ಕೆ ಹೋಗಿ ನೋಡಿದಾಗ ಸುರೇಶ್ ಅವರ ದೇಹ ಸುಟ್ಟು ಕರಕಲಾಗಿತ್ತು. ತುಮಕೂರಿಗೆ ಹೋಗುವುದಾಗಿ ಹೇಳಿದವರು ತೋಟದಲ್ಲಿ ಹೆಣವಾಗಿ ಬಿದ್ದಿರುವುದನ್ನು ಗಮನಿಸಿದರೆ, ಯಾರೋ ವೈಷಮ್ಯದಿಂದ ಅವರನ್ನು ಕೊಲೆ ಮಾಡುವ ಉದ್ದೇಶದಿಂದಲೇ ಬೆಂಕಿ ಹಚ್ಚಿ ಸಾಯಿಸಿರಬಹುದು ಎಂಬ ಅನುಮಾನವನ್ನು ಪತ್ನಿ ವ್ಯಕ್ತಪಡಿಸಿದ್ದಾರೆ.
ಮಾನಸಿಕ ಒತ್ತಡ ಮತ್ತು ಖಿನ್ನತೆ,ಇನ್ನೊಂದೆಡೆ, ಕಳೆದ ಎರಡು ವರ್ಷಗಳ ಹಿಂದೆ ತಮ್ಮ ಅಕ್ಕನ ಸಾವಿನಿಂದ ಸುರೇಶ್ ಕುಗ್ಗಿದ್ದರು ಮತ್ತು ಇತ್ತೀಚೆಗೆ ಆಪ್ತ ಮಿತ್ರ ಹಾಲೇಶ್ ಅವರ ನಿಧನದಿಂದ ಮಾನಸಿಕ ಆಘಾತಕ್ಕೊಳಗಾಗಿದ್ದರು ಎಂದು ಸಹ ಪತ್ನಿ ನಾಗರತ್ನ ಉಲ್ಲೇಖಿಸಿದ್ದಾರೆ. ಅಲ್ಲದೆ ಇದೇ ಕಾರಣಕ್ಕೆ ಖಿನ್ನತೆಗೆ ಒಳಗಾಗಿ ಮಂಕಾಗಿದ್ದರು ಎಂದು ಸಹ ದೂರಿನಲ್ಲಿ ತಿಳಿಸಿದ್ದಾರೆ.
ಸದ್ಯ ಹೊಳೆಹೊನ್ನೂರು ಪೊಲೀಸರು ಎಲ್ಲಾ ಆಯಾಮಗಳಲ್ಲಿಯು ತನಿಖೆ ನಡೆಸುತ್ತಿದ್ದಾರೆ.



