“ಸೊರಬ ಅಗ್ನಿಶಾಮಕ ದಳಕ್ಕೆ ಎರಡು ನೂತನ ಜಲ ವಾಹನಗಳ ಸೇರ್ಪಡೆ”

ಶಿವಮೊಗ್ಗ

ಸೊರಬ,ನನ್ನ ಮತಕ್ಷೇತ್ರ ಸೊರಬ ತಾಲೂಕಿನ ಜನತೆಯ ಸುರಕ್ಷತೆಯೇ ನಮ್ಮ ಆದ್ಯತೆಯಾಗಿದ್ದು, ಸುಮಾರು 2 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಅಗ್ನಿ ಅವಘಡಗಳ ಸಂದರ್ಭದಲ್ಲಿ ಕ್ಷಿಪ್ರವಾಗಿ ಕಾರ್ಯನಿರ್ವಹಿಸಲು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಘಟಕಕ್ಕೆ ಇಂದು ಎರಡು ಹೊಸ ಜಲ ವಾಹನಗಳನ್ನು ಲೋಕಾರ್ಪಣೆಗೊಳಿಸಲಾಯಿತು ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಸೊರಬ ಪಟ್ಟಣದ ಅಗ್ನಿಶಾಮಕ ಠಾಣೆಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಾಹನಗಳಿಗೆ ಪೂಜೆ ಸಲ್ಲಿಸಿ, ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಲಾಯಿತು.

ಕ್ಷೇತ್ರದ ಜನರ ಆಸ್ತಿ-ಪಾಸ್ತಿ ಹಾಗೂ ಜೀವ ರಕ್ಷಣೆ ಮಾಡುವುದು ನಮ್ಮ ಮೊದಲ ಆದ್ಯತೆಯಾಗಿದೆ. ಬೇಸಿಗೆ ಕಾಲದಲ್ಲಿ ಹಾಗೂ ಆಕಸ್ಮಿಕ ಅಗ್ನಿ ಅವಘಡಗಳು ಸಂಭವಿಸಿದಾಗ ನೀರಿನ ಲಭ್ಯತೆ ಮತ್ತು ಇತರೆ ರಕ್ಷಣಾ ಕಾರ್ಯಗಳಿಗೆ ವಾಹನಗಳ ಕೊರತೆಯಾಗಬಾರದು ಎಂಬ ಉದ್ದೇಶದಿಂದ ಎರಡು ನೂತನ ಜಲ ವಾಹನಗಳನ್ನು ಒದಗಿಸಲಾಗಿದೆ.

ಇವುಗಳಿಂದ ಅಗ್ನಿಶಾಮಕ ದಳದ ಕಾರ್ಯಕ್ಷಮತೆ ಮತ್ತಷ್ಟು ಹೆಚ್ಚಲಿದೆ. ಸಿಬ್ಬಂದಿಗಳಿಗೆ ಅಗತ್ಯವಿರುವ ಹೆಚ್ಚಿನ ಸೌಲಭ್ಯಗಳ ಬಗ್ಗೆಯೂ ಗಮನ ಹರಿಸಿ ಅವರ ಬೇಡಿಕೆಗಳನ್ನು ಪರಿಹರಿಸುವ ಭರವಸೆ ನೀಡಿದರು .

ಈ ಸಂದರ್ಭದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಅಗ್ನಿಶಾಮಕ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.

Author