ಶಿವಮೊಗ್ಗ,ತೋಟದ ಮಧ್ಯೆ ಸುಟ್ಟ ಸ್ಥಿತಿಯಲ್ಲಿ ಉಪನ್ಯಾಸಕರ ಮೃತದೇಹ ಪತ್ತೆಯಾದ ಘಟನೆ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಸಮೀಪದ ಹನುಮಂತಾಪುರ ಗ್ರಾಮದಲ್ಲಿ ನಡೆದಿದೆ.ಮೃತರನ್ನು ಸುರೇಶ್ (58) ಎಂದು ಗುರುತಿಸಲಾಗಿದೆ.
ಇವರು ಶಿವಮೊಗ್ಗದ ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದರು.ಭಾನುವಾರ ಬೆಳಿಗ್ಗೆ ತಮ್ಮದೇ ತೋಟದಲ್ಲಿ ಬೆಂಕಿಗೆ ಆಹುತಿಯಾದ ಸ್ಥಿತಿಯಲ್ಲಿ ಸುರೇಶ್ ಅವರ ಮೃತದೇಹ ಪತ್ತೆಯಾಗಿದೆ.
ಸ್ಥಳೀಯರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಹೊಳೆಹೊನ್ನೂರು ಪೊಲೀಸ್ ಠಾಣೆಯ ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸಾವು ಅನುಮಾನಾಸ್ಪದವಾಗಿದ್ದು, ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದರ ಬಗ್ಗೆ ಪೊಲೀಸರು ವಿವಿಧ ಕೋನಗಳಲ್ಲಿ ತನಿಖೆ ಆರಂಭಿಸಿದ್ದಾರೆ. ಘಟನೆ ಸಂಬಂಧ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಸುರೇಶ್ ಕುಮಾರ್ ಅವರ ಶವ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಬೆನ್ನಲ್ಲೇ, ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನಿಖಿಲ್ .ಬಿ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಪ್ರಕರಣವನ್ನು ಪ್ರಾಥಮಿಕವಾಗಿ ಕೊಲೆ ಎಂದು ಪರಿಗಣಿಸಿ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಶಿವಮೊಗ್ಗದ ಅಕ್ಷರ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದ ಸುರೇಶ್ ಅವರು ಮದುವೆ ಸಮಾರಂಭವೊಂದಕ್ಕೆ ಹೋಗಿ ಬರುವುದಾಗಿ ಹೇಳಿ ಶನಿವಾರ ಮನೆಯಿಂದ ಹೊರಟಿದ್ದರು. ಇಂದು ಬೆಳಗ್ಗೆ ಅವರದ್ದೇ ತೋಟದಲ್ಲಿ ಸುಟ್ಟ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಪೊಲೀಸರು ಸ್ಥಳಕ್ಕೆ ತಲುಪಿದಾಗ ಶವದ ಸುತ್ತಮುತ್ತ ಬೆಂಕಿ ಉರಿಯುತ್ತಿತ್ತು ಎಂದು ಜಿಲ್ಲಾ ರಕ್ಷಣಾಧಿಕಾರಿ ತಿಳಿಸಿದರು.

ಘಟನಾ ಸ್ಥಳದಲ್ಲಿ ಮೃತ ಸುರೇಶ್ ಅವರ ದ್ವಿಚಕ್ರ ವಾಹನ ಮತ್ತು ಬ್ಯಾಗ್ ಪತ್ತೆಯಾಗಿವೆ. ಶವವು ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಮೇಲ್ನೋಟಕ್ಕೆ ಇದು ಕೊಲೆ ಎಂಬ ಸಂಶಯವಿದೆ. ಆದ್ದರಿಂದ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದರು.
ಸುರೇಶ್ ಅವರ ಮೊಬೈಲ್ ಫೋನ್ ಸ್ಥಳದಲ್ಲಿ ಸಿಕ್ಕಿದೆ. ಅದನ್ನು ಹೆಚ್ಚಿನ ತನಿಖೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವಷ್ಟೇ ಸಾವಿನ ನಿಖರ ಕಾರಣ ತಿಳಿಯಲಿದೆ ಎಂದು ನಿಖಿಲ್ ಅವರು ತಿಳಿಸಿದರು.
ಸುರೇಶ್ ಅವರ ಕುಟುಂಬದವರು ಯಾರ ಮೇಲೆಯೂ ಆರೋಪ ಮಾಡಿಲ್ಲ. ಆದರೂ ಪೊಲೀಸರು ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ಸೋಕೋ ತಂಡ ಭೇಟಿ ನೀಡಿ ಪರಿಶೀಲಿಸುತ್ತಿದೆ ಎಂದರು.
ಪ್ರಕರಣದ ತನಿಖೆಗೆ ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ. ಈ ತಂಡ ಈಗಾಗಲೇ ಸಂಶಯಾಸ್ಪದ ವ್ಯಕ್ತಿಗಳ ವಿಚಾರಣೆ ಆರಂಭಿಸಿದೆ ಎಂದು ಎಸ್ಪಿ ನಿಖಿಲ್ ತಿಳಿಸಿದರು.



