ಹೊಸನಗರ, ರಿಪ್ಪನ್ಪೇಟೆಯ ಗದ್ದೆಯ ಪಕ್ಕದ ಕೆರೆಯ ಏರಿಯ ಮೇಲೆ ನಡೆಯುತ್ತಿದ್ದಾಗ ಆಕಸ್ಮಿಕವಾಗಿ ಕಾಲುಜಾರಿ ನೀರಿನಲ್ಲಿ ಮುಳುಗಿ ಎಸ್ಎಸ್ಎಲ್ಸಿ ವಿದ್ಯಾರ್ಥಿಯೊಬ್ಬ ಪ್ರಾಣ ಕಳೆದುಕೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ರಿಪ್ಪನ್ಪೇಟೆ ಸಮೀಪದ ಬರುವೆ ಗ್ರಾಮದಲ್ಲಿ ನಡೆದಿದೆ. ಮೃತ ಬಾಲಕನನ್ನು ರಿಪ್ಪನ್ಪೇಟೆಯ ಮದೀನಾ ಕಾಲೋನಿ ನಿವಾಸಿ ಮಹಮ್ಮದ್ ತಮೀಮ್ ಬಿನ್ ತಾಹಿರ್ ಹುಸೇನ್ ಎಂದು ಗುರುತಿಸಲಾಗಿದೆ.
ಮಹಮ್ಮದ್ ತಮೀಮ್ ಪಟ್ಟಣದ ಚೌಡೇಶ್ವರಿ ಬೀದಿಯಲ್ಲಿರುವ ಟ್ಯೂಷನ್ ಕೇಂದ್ರಕ್ಕೆ ತೆರಳಿದ್ದನು. ಪಾಠ ಮುಗಿದ ನಂತರ ತನ್ನ ಸ್ನೇಹಿತರೊಂದಿಗೆ ಬರುವೆ ಗ್ರಾಮದ ದಿಬ್ಬದ ಪ್ರದೇಶಕ್ಕೆ ವಿಹಾರಕ್ಕೆಂದು ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಗದ್ದೆಯ ಮಧ್ಯಭಾಗದಲ್ಲಿದ್ದ ಕೆರೆಯ ಅಂಚಿನಲ್ಲಿ ಸಾಗುವಾಗ ಆಯತಪ್ಪಿ ಆಳವಾದ ನೀರಿಗೆ ಬಿದ್ದಿದ್ದರಿಂದ ರಕ್ಷಣೆ ಪಡೆಯಲು ಸಾಧ್ಯವಾಗದೆ ಮೃತಪಟ್ಟಿದ್ದಾನೆ ಎಂದು ಪೊಲೀಸರಿಗೆ ನೀಡಲಾದ ದೂರಿನಲ್ಲಿ ವಿವರಿಸಲಾಗಿದೆ.
ನೀರಿಗೆ ಬಿದ್ದ ವಿದ್ಯಾರ್ಥಿಯನ್ನು ತಕ್ಷಣವೇ ಗಮನಿಸಿದ ಸ್ಥಳೀಯರು ಮತ್ತು ಸ್ನೇಹಿತರು ಆತನನ್ನು ರಕ್ಷಿಸಿ ರಿಪ್ಪನ್ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದರು. ಆದರೆ, ಆಸ್ಪತ್ರೆಗೆ ದಾಖಲಿಸುವ ಮೊದಲೇ ಬಾಲಕ ಮೃತಪಟ್ಟಿದ್ದಾನೆ ಎಂದು ವೈದ್ಯರು ಅಧಿಕೃತವಾಗಿ ಘೋಷಿಸಿದ್ದಾರೆ.
ಈ ಸಂಬಂಧ ರಿಪ್ಪನ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



