ಭದ್ರಾವತಿ | ಜಾತಿ ನಿಂದಿಸಿ, ಹಲ್ಲೆಗೈದ ಆರೋಪಿಗಳಿಗೆ ಎರಡು ವರ್ಷ ಶಿಕ್ಷೆ

ಶಿವಮೊಗ್ಗ

ಭದ್ರಾವತಿ ತಾಲೂಕಿನ ಸುಣ್ಣದಹಳ್ಳಿ ಗ್ರಾಮದ ನಿವಾಸಿಗಳು ಅದೇ ಗ್ರಾಮದ ವ್ಯಕ್ತಿಯೋರ್ವನಿಗೆ ಜಾತಿ ನಿಂದನೆ ಮಾಡಿ, ಹಲ್ಲೆಗೈದ ಆರೋಪಿಗಳಿಗೆ ನಗರದ ೪ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರನ್ಯಾಯಾಲಯದ ನ್ಯಾಯಾಧೀಶೆ ಇಂದಿರಾ ಮೈಲ್‌ಸ್ವಾಮಿ ಚೆಟ್ಟಿಯಾರ್ ೨ ವರ್ಷ ಶಿಕ್ಷೆ, ೧.೭೩,೦೦೦ ರೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಭದ್ರಾವತಿಯ ಆಕಾಶವಾಣಿ ಹತ್ತಿರದ ಸುಣ್ಣದ ಹಳ್ಳಿ ನಿವಾಸಿಗಳಾದ ಜಗದೀಶ, ಕಾಂತರಾಜ ಯಾನೆ ಶ್ರೀಕಾಂತ, ನಾಗೇಶ, ಮಂಜುನಾಥ, ಪ್ರೇಮ ಶಿಕ್ಷೆಗೊಳಗಾದ ಆರೋಪಿಗಳು.

ಘಟನೆ ವಿವರ;

ಸುಣ್ಣದಹಳ್ಳಿ ನಿವಾಸಿ ವಿ. ಆರ್‍ಮುಗಂ ಅವರು ಸದರಿ ಗ್ರಾಮದಲ್ಲಿರುವ ತಮಗೆ ಸೇರಿದ ಸರ್ವೆ ನಂ. ೫೮/೮ ರಲ್ಲಿ ಒಂದು ಎಕರೆ ಜಮೀನು ಇದ್ದು, ಇದರಲ್ಲಿ ೧೦ ಗುಂಟೆ ಜಮೀನನ್ನು ಸೈಟ್ ಮಾಡಿ ಅದರಲ್ಲಿ ಪ್ರೇಮ ಕೋಂ ಮಂಜುನಾಥ ಇವರಿಗೆ ೪೦*೯೦ ಉದ್ದಳತೆಯ ನಿವೇಶನವನ್ನು ಕೊಟ್ಟಿದ್ದು, ಸದರಿಯವರು ನಿವೇಶನದಲ್ಲಿ ಆರ್,ಸಿ.ಸಿ ಮನೆಯನ್ನು ಕಟ್ಟಿಕೊಂಡು ವಾಸವಿರುತ್ತಾರೆ.

ಸದರಿ ಮನೆಯ ಪಕ್ಕದಲ್ಲಿ ೧/೨ ಗುಂಟೆ ಖಾಲಿಜಾಗವಿದ್ದು, ಆ ಖಾಲಿ ಜಾಗವನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಸರ್ಕಾರಿ ಸರ್ವೆಗೆ ಹಾಕಿದ್ದು, ಅದರಂತೆ ಜೂನ್ ೩, ೨೦೨೦ ರಂದು ಬೆಳಗ್ಗೆ ೧೦.೩೦ ರ ಸುಮಾರಿಗೆ ಸರ್ಕಾರಿ ಸರ್ವೇಯವರಾದ ಉಮೇಶ್ ಎಂಬುವರು ಸರ್ವೆ ಮಾಡುವಾಗ, ಪ್ರೇಮ, ಮಂಜುನಾಥ್ ಸರ್ವೆ ಮಾಡುವ ಜಾಗಕ್ಕೆ ಸದರಿ ಜಾಗ ತಮಗೆ ಸೇರಿದ್ದು ಈ ಜಾಗದಲ್ಲಿ ಸರ್ವೆ ಮಾಡಬೇಡಿ ಎಂದಿರುತ್ತಾರೆ.

ಆಗ ಆರ್‍ಮುಗಂ ನಿಮಗೆ ಕೊಟ್ಟ ನಿವೇಶನದ ಅಳತೆಯಲ್ಲಿ ಮನೆ ಕಟ್ಟಿಕೊಂಡಿದ್ದೀರಿ, ಉಳಿದ ಜಾಗ ತನ್ನ ಮಾಲಿಕತ್ವಕ್ಕೆ ಸೇರಿದ್ದು ಎಂದಾಗ, ಜಗದೀಶ, ಕಾಂತರಾಜ್, ನಾಗೇಶ್ ಅವರುಗಳು ಆರ್‍ಮಗಂ ಈತನಿಗೆ ಜಾತಿ ಹಿಡಿದು ನಿಂದಿಸಿ, ಇಟ್ಟಿಗೆಯಿಂದ ಆರ್‍ಮುಗಂನ ತಲೆಯ ಎಡಭಾಗಕ್ಕೆ ಹೊಡೆದಿದ್ದರುರುತ್ತಾರೆ.

ಕಾಂತರಾಜ್ ರೀಪರ್‌ನಿಂದ ಬಲಪಾದದ ಮೇಲೆ ಹೊಡೆದಿದ್ದು, ಆರ್‍ಮುಗಂ ಕೆಳಗೆ ಬಿದ್ದು ಕೂಗಿಕೊಂಡಾಗ ಸರ್ವೆ ಮಾಡಲು ಬಂದ ಸರ್ವೆ ಅಧಿಕಾರಿ ಉಮೇಶ್ ಮತ್ತು ಪಕ್ಕದ ಜಮೀನಿನ ಮಾಲಿಕರಾದ ಕುಮಾರಸ್ವಾಮಿ, ಕರ್ಣ ಗಲಾಟೆ ಬಿಡಿಸಿರುತ್ತಾರೆ.

ಕಾಗದನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತನಿಖಾಧಿಕಾರಿ ಸುಧಾಕರ್ ನಾಯ್ಕ ಪ್ರಕರಣದ ತನಿಖೆ ಪೂರೈಸಿ ಮಾನ್ಯ ನ್ಯಾಯಾಲಯಕ್ಕೆ ಆರೋಪ ಪಟ್ಟಿಯನ್ನು ಸಲ್ಲಿಸಿದ್ದರು.

ಆರೋಪಿಗಳ ಮೇಲೆ ಮಾಡಿದ ಆರೋಪ ಸಾಭೀತಾದ ಮೇರೆಗೆ ನ್ಯಾಯಾಲಯವು ಈ ಮೇಲಿನಂತೆ ಶಿಕ್ಷೆ ಪ್ರಕಟಿಸಿ ದಂಡ ವಿಧಿಸಿದೆ.

ದಂಡದ ಹಣದಲ್ಲಿ ಪಿರ್ಯಾಧಿ ಆರ್‍ಮುಗಂ ಇವರಿಗೆ ರೂ. ೧ ಲಕ್ಷ ಹಣವನ್ನು ಪರಿಹಾರವಾಗಿ ನೀಡುವಂತೆ ಸೂಚಿಸಿದೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಪಿ. ರತ್ನಮ್ಮ ವಾದ ಮಂಡಿಸಿದರು

Author