ನಗರ ಪೊಲೀಸರಿಂದ ಅಂತರ್ ಜಿಲ್ಲಾ ಕಳ್ಳರ ಬಂಧನ

ಶಿವಮೊಗ್ಗ

ಹೊಸನಗರ ತಾಲೂಕಿನ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕಳವು ಪ್ರಕರಣವೊಂದನ್ನು ಭೇದಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸರು, ನಾಲ್ವರು ಅಂತರ್ ಜಿಲ್ಲಾ ಕಳ್ಳರನ್ನು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 7.90 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತುಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರನ್ನು ಜಪ್ತಿ ಮಾಡಲಾಗಿದೆ.

ಕಳೆದ 2025ರ ಡಿಸೆಂಬರ್ 27ರಂದು ಹೊಸನಗರ ತಾಲೂಕಿನ ನಿಟ್ಟೂರು ನಾಗೋಡಿ ಗ್ರಾಮದ ನಿವಾಸಿ ರಾಜೇಂದ್ರ ಶೆಟ್ಟಿ ಎಂಬುವವರ ಮನೆಯಲ್ಲಿ ಈ ಕಳವು ನಡೆದಿತ್ತು. ಮನೆಯವರು ಇಲ್ಲದ ಸಮಯ ನೋಡಿ ಮುಂಬಾಗಿಲ ಬೀಗ ಮುರಿದು ಒಳನುಗ್ಗಿದ್ದ ಕಳ್ಳರು , ಲಾಕರ್‌ನಲ್ಲಿದ್ದ ಬೆಲೆಬಾಳುವ ಆಭರಣಗಳನ್ನು ದೋಚಿ ಪರಾರಿಯಾಗಿದ್ದರು. ಈ ಸಂಬಂಧ ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಪ್ರಕರಣದ ಬೆನ್ನತ್ತಿದ ಪಿಎಸ್ ಐ ಶಿವಾನಂದ ಕೋಳಿ ನೇತೃತ್ವದ ವಿಶೇಷ ತಂಡವು, ತಾಂತ್ರಿಕ ವಿಶ್ಲೇಷಣೆ ಹಾಗೂ ಬೆರಳಚ್ಚು ತಜ್ಞರ ನೆರವಿನಿಂದ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ. ಬಂಧಿತರನ್ನು ಭಟ್ಕಳ ಮೂಲದ ಮಹಮ್ಮದ್ ಇಮ್ರಾನ್ ಇಕ್ಕೇರಿ (25), ಮಹಮ್ಮದ್ ಅಖೀಲ್ (24), ಅಮೀರ್ ಹಸನ್ ಬ್ಯಾರಿ (29) ಮತ್ತು ಬೇಬಿ ಹಾಜಿರ (55) ಎಂದು ಗುರುತಿಸಲಾಗಿದೆ.

ಬಂಧಿತರಿಂದ ಒಟ್ಟು 3.87 ಲಕ್ಷ ರೂ. ಮೌಲ್ಯದ 30 ಗ್ರಾಂ ತೂಕದ ಚಿನ್ನದ ನೆಕ್ಲಸ್, 93 ಸಾವಿರ ರೂ. ಮೌಲ್ಯದ 6 ಗ್ರಾಂ ಬ್ರೇಸ್‌ಲೆಟ್, 50 ಗ್ರಾಂ ಬೆಳ್ಳಿ ಪದಾರ್ಥಗಳು, ಮೊಬೈಲ್ ಫೋನ್ ಹಾಗೂ ಕಳ್ಳತನಕ್ಕೆ ಬಳಸಿದ್ದ ಇಟಿಯೋಸ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Author