ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಹಂಚಿನ ಸಿದ್ಧಾಪುರ ಗ್ರಾಮದಲ್ಲಿ 2019ರ ಶಿವರಾತ್ರಿ ದಿನ ನಡೆದ ಗಲಾಟೆ ಪ್ರಕರಣದಲ್ಲಿ 10 ಆರೋಪಿಗಳಿಗೆ ತಲಾ ಒಂದು ವರ್ಷದ ಕಾರಾವಾಸ ಹಾಗೂ ತಲಾ ₹8,000 ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ. ಜೊತೆಗೆ ಒಟ್ಟು ₹80,000 ಪರಿಹಾರವನ್ನು ಗಾಯಾಳುಗಳಿಗೆ ನೀಡುವಂತೆ ಆದೇಶಿಸಲಾಗಿದೆ.
ದಿನಾಂಕ 08-03-2019 ರಂದು, ಗ್ರಾಮದ ನಿವಾಸಿ ಸಾಕ್ಷಿ ಅಭಿಲಾಷ್ ದೇವಸ್ಥಾನಕ್ಕೆ ತೆರಳಿದ ವೇಳೆ ಆರೋಪಿತರಾದ ರುದ್ರೇಶ್ ಹಾಗೂ ಇತರರು ಅವಹೇಳನವಾಗಿ ವರ್ತಿಸಿದ ಹಿನ್ನೆಲೆ ವಿವಾದ ಉಂಟಾಗಿ, ನಂತರ ಸಂಜೆ ಆರೋಪಿತರು ಗುಂಪು ಸೇರಿ ಫಿರ್ಯಾದಿದಾರರ ಮನೆಯೊಳಗೆ ನುಗ್ಗಿ ಹಲ್ಲೆ ನಡೆಸಿದ್ದರು.
ಗಲಾಟೆಯ ವೇಳೆ ಮನೆಯ ಸಿಸಿ ಕ್ಯಾಮೆರಾ ಕಿತ್ತುಹಾಕಿ, ವಾಹನದ ಗ್ಲಾಸ್ ಹಾನಿಗೊಳಿಸಿ, ನಗದು ₹3,000 ನಷ್ಟ ಉಂಟುಮಾಡಿದ್ದರೆಂದು ದೂರಿನಲ್ಲಿ ಹೇಳಲಾಗಿದೆ. ಗಲಾಟೆ ತಡೆಯಲು ಬಂದ ರಾಜಪ್ಪ ಅವರಿಗೆ ತೀವ್ರ ಗಾಯಗಳಾಗಿದ್ದು, ಜೀವ ಬೆದರಿಕೆ ಹಾಕಿದ ಆರೋಪವೂ ದಾಖಲಾಗಿತ್ತು.
ಈ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ 143, 147, 448, 504, 323, 354, 506, 427 ಸಹಿತ 149 ಅಡಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆಯನ್ನು ಆಗಿನ ತನಿಖಾಧಿಕಾರಿ ಕೃಷ್ಣ ನಾಯ್ಕ್ ಪೂರ್ಣಗೊಳಿಸಿ ಆರೋಪಪಟ್ಟಿ ಸಲ್ಲಿಸಿದ್ದರು.
ಸರ್ಕಾರದ ಪರವಾಗಿ ಶ್ರೀ ತಿಪ್ಪೇಶ್ ರಾವ್ ವಾದ ಮಂಡಿಸಿದ್ದು, ವಿಚಾರಣೆ ನಡೆಸಿದ 1ನೇ ಎ.ಸಿ.ಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಆರೋಪಗಳು ದೃಢಪಟ್ಟ ಹಿನ್ನೆಲೆಯಲ್ಲಿ ಮಾನ್ಯ ನ್ಯಾಯಾಧೀಶ ಶ್ರೀ ರವಿ ಕುಮಾರ್ ವಿ. ಅವರು 26-02-2026 ರಂದು ಶಿಕ್ಷೆ ಪ್ರಕಟಿಸಿದ್ದಾರೆ.
ಶಿಕ್ಷೆಗೆ ಗುರಿಯಾದವರು ರುದ್ರೇಶ್, ವಿಶ್ವ, ಶಿವು, ಗಿರೀಶ್, ಶಶಿಧರ್, ಮಧು, ಶೇಖರಪ್ಪ, ರಾಜಪ್ಪ, ಮಲ್ಲಿಕಾ ಮತ್ತು ಹರೀಶ್ ಎಂದು ತಿಳಿದುಬಂದಿದೆ.



