ಶಿವಮೊಗ್ಗ | ನಟೋರಿಯಸ್ ರೌಡಿ ಶೀಟರ್ ಡಿಚ್ಚಿ ಮುಬಾರಕ್ ಕಾಲಿಗೆ ಪೊಲೀಸರ ಗುಂಡೇಟು

ಶಿವಮೊಗ್ಗ

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಗರವನ್ನು ಬೆಚ್ಚಿಬೀಳಿಸುವ ಘಟನೆಯಲ್ಲಿ ಕುಖ್ಯಾತ ರೌಡಿ ಡಿಚ್ಚಿ ಮುಬಾರಕ್ ಹಾಗೂ ಆತನ ಸಹಚರರು ಡಕಾಯಿತಿ ಹೊಂಚು ಹಾಕಿದ್ದ ವೇಳೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ತೀವ್ರ ಘರ್ಷಣೆ ನಡೆದಿದೆ.

ಮಾರಕಾಸ್ತ್ರಗಳೊಂದಿಗೆ ತಿರುಗಾಡುತ್ತಿದ್ದ ಗುಂಪು ಪೊಲೀಸರ ಮೇಲೆ ಕಲ್ಲು–ಚಾಕುಗಳಿಂದ ದಾಳಿ ನಡೆಸಿದ ಪರಿಣಾಮ ಅಧಿಕಾರಿಗಳು ಗಾಯಗೊಂಡಿದ್ದಾರೆ ನಂತರ ಆತ್ಮರಕ್ಷಣೆಗಾಗಿ ಪೊಲೀಸರು ಗುಂಡು ಹಾರಿಸಿ ರೌಡಿಯನ್ನು ವಶಕ್ಕೆ ಪಡೆದಿದ್ದಾರೆ.

ಫೆಬ್ರವರಿ 7 ರಂದು ಮಧ್ಯಾಹ್ನ ಮಾಹಿತಿ ಸಿಕ್ಕ ತಕ್ಷಣ ಡಿವೈಎಸ್‌ಪಿ ಪ್ರಕಾಶ್ ರಾಠೋಡ್ ನೇತೃತ್ವದಲ್ಲಿ ವಿಶೇಷ ತಂಡ ರಚನೆಗೊಂಡಿತು. ಶಿವನಿ ಕ್ರಾಸ್ ಸಮೀಪ ಸಂಜೆ ವೇಳೆಗೆ ಅನುಮಾನಾಸ್ಪದ ಚಲನವಲನ ಕಂಡುಬಂದಾಗ ತಂಡ ಆರೋಪಿಗಳನ್ನು ವಶಕ್ಕೆ ಪಡೆಯಲು ಮುಂದಾಯಿತು.

ಆದರೆ, ಶರಣಾಗುವಂತೆ ಎಚ್ಚರಿಕೆ ನೀಡಿದರೂ ಕೇಳದೆ ಡಿಚ್ಚಿ ಮುಬಾರಕ್ ಹಾಗೂ ಆತನ ಸಹಚರರು ಪೊಲೀಸರ ಮೇಲೆ ಮಾರಣಾಂತಿಕ ದಾಳಿ ನಡೆಸಿದರು.

ಘರ್ಷಣೆಯಲ್ಲಿ ಹೊಸಮನೆ ಠಾಣೆಯ ಪಿಎಸ್‌ಐ ಸಿದ್ದಪ್ಪ ಎಂ.ಪಿ ಅವರ ಕಾಲಿನ ಮೂಳೆ ಮುರಿದು ರಕ್ತಗಾಯಗಳಾಗಿವೆ. ಪಿಎಸ್‌ಐ ಕೃಷ್ಣಕುಮಾರ್ ಬಿ. ಮಾನೆ ಅವರ ಕೈ ಬೆರಳು ಮುರಿದಿದ್ದು, ಸಿಬ್ಬಂದಿ ಆದರ್ಶ ಅವರಿಗೆ ಕಾಲಿಗೆ ಗಾಯವಾಗಿದೆ.

ಪರಿಸ್ಥಿತಿ ನಿಯಂತ್ರಣ ತಪ್ಪುತ್ತಿದ್ದಂತೆ ಪಿಎಸ್‌ಐ ಕೃಷ್ಣಕುಮಾರ್ ಬಿ. ಮಾನೆ ಮೊದಲು ಗಾಳಿಯಲ್ಲಿ ಎಚ್ಚರಿಕೆ ಗುಂಡು ಹಾರಿಸಿದರು. ಆದರೂ ದಾಳಿ ನಿಲ್ಲಿಸದ ಡಿಚ್ಚಿ ಮುಬಾರಕ್ ಚಾಕುವಿನಿಂದ ಮತ್ತೆ ದಾಳಿ ಮಾಡಲು ಮುಂದಾದಾಗ ಆತ್ಮರಕ್ಷಣೆಗಾಗಿ ಕಾಲಿಗೆ ಗುಂಡು ಹಾರಿಸಲಾಯಿತು.

ಗುಂಡೇಟಿನಿಂದ ಗಾಯಗೊಂಡ ಡಿಚ್ಚಿ ಮುಬಾರಕನನ್ನು ತಕ್ಷಣ ಭದ್ರಾವತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಘಟನೆಯಲ್ಲಿ ಜಹೀರ್, ರೆಹಮತ್ ಪಾಷಾ, ಜುನೈದ್ ಮತ್ತು ಮನುಸಿಂಗ್ ಸೇರಿ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Author