ಶಿವಮೊಗ್ಗ | ನಾಡಬಂದೂಕು ಕಾರ್ಖಾನೆ ಬಯಲು ; 7 ಅಕ್ರಮ ಬಂದೂಕು ಜಪ್ತಿ, ಓರ್ವ ಪೊಲೀಸ್ ವಶಕ್ಕೆ

ಶಿವಮೊಗ್ಗ

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಉಪವಿಭಾಗದ ಶಿಕಾರಿಪುರ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯ ಭದ್ರಾಪುರ ಗ್ರಾಮದಲ್ಲಿ ಅಕ್ರಮವಾಗಿ ನಾಡಬಂದೂಕುಗಳನ್ನು ತಯಾರಿಸಿ ಮಾರಾಟ ಮಾಡಲು ಸಂಗ್ರಹಿಸಿಟ್ಟಿದ್ದ ಪ್ರಕರಣವನ್ನು ಪೊಲೀಸರು ಪತ್ತೆಹಚ್ಚಿ, 7 ಸಿಂಗಲ್ ಬ್ಯಾರಲ್ ನಾಡಬಂದೂಕುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.

ಭದ್ರಾಪುರ ಗ್ರಾಮದ 3ನೇ ಕ್ರಾಸ್ ನಿವಾಸಿ, ಕಾರ್ಪೆಂಟರ್ ಕೆಲಸ ನಿರ್ವಹಿಸುತ್ತಿದ್ದ ಲಕ್ಷ್ಮಣಪ್ಪ ಬಿನ್ ಮಲ್ಲಪ್ಪ (67) ಎಂಬಾತನು ತನ್ನ ಮನೆಯ ಪಕ್ಕದಲ್ಲಿರುವ ಹಳೆಯ ಮನೆಯಲ್ಲಿ ಅಕ್ರಮವಾಗಿ ನಾಡಬಂದೂಕುಗಳನ್ನು ತಯಾರಿಸಿ ಮಾರಾಟ ಮಾಡಲು ಸಂಗ್ರಹಿಸಿಟ್ಟಿದ್ದಾನೆ ಎಂಬ ಮಾಹಿತಿ ದಿ.04-02-2026 ರಂದು ಬಾತ್ಮೀದಾರರಿಂದ ಲಭಿಸಿತು.

ಈ ಮಾಹಿತಿ ಮೇರೆಗೆ ಶಿಕಾರಿಪುರ ಪಟ್ಟಣ ಠಾಣೆಯ ಎ.ಎಸ್.ಐ ವಿಜಯ್ ಅವರು ಸ್ಥಳಕ್ಕೆ ತೆರಳಿ ಮಾಹಿತಿ ಖಚಿತಪಡಿಸಿಕೊಂಡು ನೀಡಿದ ದೂರಿನ ಆಧಾರದಲ್ಲಿ ಶಿಕಾರಿಪುರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ 22/2026 ಕಲಂ 25(1)(ಎ) ಶಸ್ತ್ರಾಸ್ತ್ರ ತಿದ್ದುಪಡಿ ಅಧಿನಿಯಮ 2019ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ನಂತರ ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ಶ್ರೀ ನಿಖಿಲ್ ಬಿ. ಐಪಿಎಸ್ ಅವರ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶ್ರೀ ಎ.ಜಿ. ಕಾರಿಯಪ್ಪ ಹಾಗೂ ಶ್ರೀ ರಮೇಶ್ ಅವರ ನಿರ್ದೇಶನದಂತೆ, ಪೊಲೀಸ್ ಉಪಾಧೀಕ್ಷಕರು ಶಿಕಾರಿಪುರ ಉಪವಿಭಾಗದ ಶ್ರೀ ಕೇಶವ ಕೆ.ಇ ಅವರ ಮೇಲ್ವಿಚಾರಣೆಯಲ್ಲಿ ಸಿಪಿಐ ಸಂತೋಷ್ ಎಂ. ಪಾಟೀಲ್ ಅವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಯಿತು.ಮಾನ್ಯ ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದು ದಿ.04-02-2026ರಂದು ಸಂಜೆ 6 ಗಂಟೆ ಸುಮಾರಿಗೆ ಆರೋಪಿತನ ಮನೆಯ ಮೇಲೆ ದಾಳಿ ನಡೆಸಿದ ಪೊಲೀಸರು, ಹಳೆಯ ಮನೆಯೊಳಗೆ ಬಚ್ಚಿಟ್ಟಿದ್ದ 7 ಸಿಂಗಲ್ ಬ್ಯಾರಲ್ ನಾಡಬಂದೂಕುಗಳು ಹಾಗೂ ಸಂಬಂಧಿತ ಇತರೆ ವಸ್ತುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.

ಆರೋಪಿತ ಲಕ್ಷ್ಮಣಪ್ಪನನ್ನು ವಶಕ್ಕೆ ಪಡೆದು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ, ನ್ಯಾಯಾಲಯವು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ತನಿಖಾ ತಂಡದ ಶ್ಲಾಘನೀಯ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ಅವರು ಪ್ರಶಂಸಿಸಿ ಅಭಿನಂದಿಸಿದ್ದಾರೆ.

Author