ದಾವಣಗೆರೆ, ಉಸಿರುಗಟ್ಟಿಸಿ ವೃದ್ದೆಯ ಕೊಲೆ ಮಾಡಿದ ದುಷ್ಕರ್ಮಿಗಳು, ಆಕೆಯ ಮೈಮೇಲಿದ್ದ 73 ಗ್ರಾಂ ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿರುವ ಘಟನೆ ಜಿಲ್ಲೆಯ ನ್ಯಾಮತಿ ತಾಲೂಕಿನ ಆರುಂಡಿ ಗ್ರಾಮದಲ್ಲಿ ನಡೆದಿದೆ.
ಕೊಲ್ಲಾರಿ ಕಮಲಮ್ಮ (64) ಕೊಲೆಯಾದ ವೃದ್ಧೆ. ತಾಲೂಕಿನ ಆರುಂಡಿ ಗ್ರಾಮದ ನಿವಾಸಿಯಾಗಿದ್ದ ಕಮಲಮ್ಮ, ರಾತ್ರಿ ಮನೆಯಲ್ಲಿ ಮಲಗಿದ್ದಾಗ ತಲೆದಿಂಬದಿಂದ ಒತ್ತಿ ಉಸಿರುಗಟ್ಟಿಸಿ ಕೊಲೆ ಮಾಡಿರುವ ದುಷ್ಕರ್ಮಿಗಳು, ಒಂದು ಜೊತೆ ಕಿವಿ ಓಲೆ, ಎರಡು ಬಂಗಾರದ ಬಳೆ, ಉಂಗುರ ಸೇರಿದಂತೆ ವೃದ್ಧೆಗೆ ಸೇರಿದ ಸುಮಾರು 73 ಗ್ರಾಂ ಚಿನ್ನದ ಆಭರಣ ದೋಚಿಕೊಂಡು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಮಲಮ್ಮ ಮನೆಯಲ್ಲಿ ಒಬ್ಬಂಟಿಯಾಗಿ ವಾಸವಿದ್ದುದನ್ನು ಗಮನಿಸಿ ಈ ಕೃತ್ಯ ಎಸಗಲಾಗಿರಬಹುದು ಎಂದು ಶಂಕಿಸಲಾಗಿದೆ.
ಘಟನಾ ಸ್ಥಳಕ್ಕೆ ಎಸ್ಪಿ ಉಮಾ ಪ್ರಶಾಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

