ಶಿವಮೊಗ್ಗ | ಲಿಫ್ಟ್ ಕೆಟ್ಟು ನಿಂತು ವರ್ಷವಾದರೂ ರಿಪೇರಿ ಇಲ್ಲ ; ಭದ್ರಾವತಿ ತಾಲೂಕು ಕಚೇರಿಯ ದುರವಸ್ಥೆ

ಶಿವಮೊಗ್ಗ

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಗರದ ತಾಲೂಕು ಕಚೇರಿಯಲ್ಲಿ ಸಾರ್ವಜನಿಕರ ಉಪಯೋಗಕ್ಕಾಗಿ ಅಳವಡಿಸಲಾಗಿರುವ ಲಿಫ್ಟ್ ಕೆಟ್ಟು ನಿಂತು ವರ್ಷ ಕಳೆದರೂ ದುರಸ್ತಿ ಕಾಣದೆ ಸಾರ್ವಜನಿಕರಿಗೆ ವಯೋವೃದ್ಧರಿಗೆ ಅಂಗವೈಕಲ್ಯರ ಉಪಯೋಗಕ್ಕಿಲ್ಲದೆ ತಾಲೂಕು ಆಡಳಿತ ಶಾಪಕ್ಕೆ ಗುರಿಯಾಗಿದೆ. ಹಿಂದಿನ ಜನತಾದಳ ಸರಕಾರದ ಅವಧಿಯಲ್ಲಿ ಪ್ರತಿ ತಾಲೂಕಿಗೊಂದು ಮಿನಿ ವಿಧಾನ ಸೌಧ ನಿರ್ಮಿಸಿ ಸರಕಾರದ ಎಲ್ಲಾ ಇಲಾಖೆಗಳು ಈ ಆಡಳಿತ ಸೌಧದೊಳಗೆ ತರುವ ಮಹತ್ವಾಕಾಂಕ್ಷಿ ಯೋಜನೆಯಂತೆ ಕಳೆದ ಹನ್ನೊಂದು ವರ್ಷಗಳ ಹಿಂದೆ ನೂತನ ತಾಲೂಕು ಆಡಳಿತ ಸೌಧ (ಮಿನಿ ವಿಧಾನಸೌಧ) ನಿರ್ಮಿಸಲಾಗಿತ್ತು.

ಈ ಕಟ್ಟಡದಲ್ಲಿ ಮೂರು ಅಂತಸ್ಥಿನ ಕಟ್ಟಡ ನಿರ್ಮಾಣವಾದರೂ ವಯೋವೃದ್ಧರಿಗೆ ಅಂಗವೈಲಕ್ಯರಿಗೆ ಕಟ್ಟಡವನ್ನು ಹತ್ತಿ ಇಳಿಯಲು ಲಿಫ್ಟ್ ಇಲ್ಲದೆ ಕಷ್ಟಸಾಧ್ಯವಾಗಿತ್ತು.

ಸಾರ್ವಜನಿಕರ ಮತ್ತು ಚುನಾಯಿತ ಪ್ರತಿನಿಧಿಗಳ ಸಂಘ ಸಂಸ್ಥೆಗಳ ಒತ್ತಾಸೆಯಿಂದಾಗಿ ಕಳೆದ ಆರೇಳು ವರ್ಷಗಳ ಹಿಂದೆ ಶಾಸಕ ಬಿ.ಕೆ.ಸಂಗಮೇಶ್ ಅವರಿಂದ ಲಿಫ್ಟ್ ನಿರ್ಮಾಣ ಮಾಡಲಾಗಿತ್ತು.

ಲಿಫ್ಟ್ ಅಳವಡಿಸಿದ ಸ್ವಲ್ಪ ಸಮಯದಲ್ಲಿಯೇ ಕೆಟ್ಟು ನಿಂತು ವರ್ಷಾನುಗಟ್ಟಲೆ ಆದರೂ ಕ್ರಮ ಕೈಗೊಂಡಿರಲಿಲ್ಲ. ಲಿಫ್ಟ್ ಅಳವಡಿಸಿದ ಕಂಪನಿ ವಿರುದ್ದವಾಗಲೀ ಗುತ್ತಿಗೆದಾರನ ವಿರುದ್ಧವಾಗಲಿ ಯಾವುದೇ ಕಾನೂನು ಕ್ರಮ ಅನುಸರಿಸದೆ ನಿರ್ಲಕ್ಷ ತಾಳಿತ್ತು.

ಅನೇಕ ಸಂಘ ಸಂಸ್ಥೆಗಳ ಮತ್ತು ಮಾಧ್ಯಮಗಳಲ್ಲಿ ಬಿತ್ತರಿಸಿದ ವರದಿಯಿಂದಾಗಿ ಮಂದಗತಿಯಲ್ಲಿ ದುರಸ್ತಿ ಮಾಡಿಸಲಾಗಿತ್ತು. ರಿಪೇರಿ ಮಾಡಿಸಿದ ಸ್ವಲ್ಪ ದಿನದಲ್ಲಿಯೇ ಮತ್ತೀಗ ರಿಪೇರಿಯಾಗಿ ವರ್ಷ ಕಳೆದಿದೆ.

ಇದರಿಂದ ಆಡಳಿತ ಸೌಧದ 2 ಮತ್ತು 3 ನೇ ಅಂತಸ್ಥಿನ ಮಹಡಿಗೆ ಚುನಾವಣಾ ಶಾಖೆ, ಸರ್ವೇ ಇಲಾಖೆ ಮತ್ತು ಖಜಾನೆ ಮತ್ತಿತರೆ ಇಲಾಖೆಗಳಿಗೆ ಹಾಗೂ ಪಿಂಚಣಿ, ವಿವಿಧ ಬಗೆಯ ದೃಢೀಕರಣಗಳಿಗೆ ಹೋಗಿ ಬರಲು ಹತ್ತಿ ಇಳಿಯಲು ವಯೋವೃದ್ದರಿಗೆ ಅಂಗವೈಕಲ್ಯರಿಗೆ ಮಹಿಳೆಯರಿಗೆ ಅನಾರೋಗ್ಯ ಪೀಡಿತರಿಗೆ ಅಸಾಧ್ಯವಾಗುತ್ತಿದೆ.

ಸಾರ್ವಜನಿಕರ ಹೇಳಿಕೆ:

ಮೂರು ಅಂತಸ್ತಿನ ಕಟ್ಟಡಕ್ಕೆ ಹತ್ತಿ ಇಳಿಯಲು ಲಿಫ್ಟ್ ಇಲ್ಲದೆ ಪಿಂಚಣಿಗಳು, ಚುನಾವಣಾ ಶಾಖೆ ಸರ್ವೇ ಇಲಾಖೆಗಳಿಗೆ ಹೋಗಿ ಬರಲು ಕಷ್ಟಕರವಾಗಿದೆ. ಸಂಘ ಸಂಸ್ಥೆಗಳ ಒತ್ತಾಯದಿಂದಾಗಿ ಲಿಫ್ಟ್ ಅಳವಡಿಸಿದ್ದರೂ ಎರಡೆರೆಡು ದಿನಕ್ಕೆ ಕೆಟ್ಟು ನಿಲ್ಲುವ ಕಳಪೆಯ ಲಿಫ್ಟ್ ಅಳವಡಿಸಿ ಸರಕಾರದ ಬೊಕ್ಕಸಕ್ಕೆ ಕೊಡಲಿ ಪೆಟ್ಟಾಗಿದೆ.

ಅಂತಹ ಕಂಪನಿ ಮತ್ತು ಗುತ್ತಿಗೆದಾರನ ವಿರುದ್ದ ಶಿಸ್ತು ಕ್ರಮ ಜರುಗಿಸಬೇಕೆಂದು ಮಾಜಿ ನಗರಸಭಾಧ್ಯಕ್ಷ ಸಿ.ಎನ್.ರಾಮಕೃಷ್ಣ, ಮುಖಂಡರಾದ ರಾಮಣ್ಣ, ಹನುಮಂತು, ದೊರೈ ಭಗವಾನ್, ಮಂಜುನಾಥ್, ರಾಮನಾಥ್, ಶೃಂಗವೇಣಿ, ಮಂಜುಳಮ್ಮ, ಕಾವೇರಮ್ಮ, ಕುಮಾರ್ ಮುಂತಾದವರು ಒತ್ತಾಯಿಸಿದ್ದಾರೆ.

Author