5 ಸಾವಿರ ಕೋಟಿ ಮೂಲಕ ವಿಐಎಸ್ಸೆಲ್ ಪುನಶ್ಚೇತನಕ್ಕೆ ನಿರ್ಧಾರ : ಕೇಂದ್ರ ಸಚಿವ ಎಚ್ ಡಿ ಕೆ ಹೇಳಿಕೆ

ಶಿವಮೊಗ್ಗ

ಶಿವಮೊಗ್ಗ, VISL ಕಾರ್ಖಾನೆ‌ ಪುನಶ್ಚೇತನಕ್ಕೆ ಸೈಲ್​ನಿಂದಲೇ ಕಾಯಕಲ್ಪ‌ ಮಾಡಿದ್ದು, ಪ್ರಾರಂಭಿಕವಾಗಿ ಕಾರ್ಖಾನೆಗೆ 5 ಸಾವಿರ ಕೋಟಿ ರೂ. ಬಿಡುಗಡೆ ಮಾಡಲಾಗುವುದು ಎಂದು ಕೇಂದ್ರದ ಬೃಹತ್ ಕೈಗಾರಿಕಾ ಸಚಿವ ಹೆಚ್. ಡಿ‌. ಕುಮಾರಸ್ವಾಮಿ ತಿಳಿಸಿದರು.

ಭದ್ರಾವತಿಯ ಬೊಮ್ಮನಕಟ್ಟೆ ಬಳಿಯ ವಿಐಎಸ್ಎಲ್‌ನ ಜಾಗದಲ್ಲಿ ಶನಿವಾರದಿಂದ ಪ್ರಾರಂಭವಾದ ತರಳುಬಾಳು ಹುಣ್ಣಿಮೆ-2026 ರಲ್ಲಿ ಭಾಗಿಯಾಗಿ, ಸಿರಿಗೆರೆಯ ತರಳಬಾಳು ಪೀಠದ ಪೀಠಾಧಿಪತಿಗಳಾದ ಶಿವಕುಮಾರ ಸ್ವಾಮೀಜಿ ಅವರ ಬೇಡಿಕೆ ಕುರಿತು ಮಾತನಾಡಿದ ಅವರು, ಕೆಲ ಸಮಸ್ಯೆಗಳಿಗೆ ಪರಿಹಾರ ದೊರಕಬೇಕೆಂದು ಸ್ವಾಮೀಜಿ ನಮ್ಮ ಮುಂದೆ ಬೇಡಿಕೆ ಇಟ್ಟಿದ್ದಾರೆ.

ಪರಮ ಪೂಜ್ಯರು ನನಗೆ ಒಂದು ಸೂಚನೆ ನೀಡಿದ್ದಾರೆ. ಮಠದಿಂದ 5 ಕೋಟಿ ರೂ. ಸಂಗ್ರಹಿಸಿ ನೀಡುತ್ತೇವೆ ಎಂದು ಹೇಳಿರುವುದು ಅವರ ಕಳಕಳಿಯನ್ನು ತೋರಿಸುತ್ತದೆ. ಇಂದು ನಮ್ಮ‌ ದೇಶ ವಿಶ್ವಕ್ಕೆ ಸರಿಸಾಟಿಯಾಗಿ ಮುನ್ನಗ್ಗುತ್ತಿದೆ. ಖಾಸಗಿ ಕಾರ್ಖಾನೆಗೆ ಉತ್ತೇಜನ ನೀಡುತ್ತಿದ್ದೇವೆ. ನಮ್ಮ‌ ಬೃಹತ್ ಕೈಗಾರಿಕೆಯಲ್ಲಿ ಹಲವು ಕಾರ್ಖಾನೆಗಳು ಮುಚ್ಚಿವೆ. ಈ ಕಾರ್ಖಾನೆಯನ್ನು ನಷ್ಟದ ಕಾರಣ ನೀಡಿ ಸಚಿವ ಸಂಪುಟದಲ್ಲಿ ಮುಚ್ಚಬೇಕೆಂದು ತೀರ್ಮಾನ ಮಾಡಿದ್ದಾರೆ. ಕೇಂದ್ರದ ಬಜೆಟ್​​ನಲ್ಲಿ ಇದನ್ನು ಪುನಶ್ಚೇತನ ಮಾಡುವುದು ಡೌಟ್ ಇದೆ ಸ್ವಾಮೀಜಿ ಎಂದರು.

ವಿಐಎಸ್​ಎಲ್​ ಪುನಶ್ಚೇತನದ ಕುರಿತು ಕೇಂದ್ರ ಸಚಿವ ಹೆಚ್​. ಡಿ . ಕುಮಾರಸ್ವಾಮಿ ಅವರು ಪ್ರತಿಕ್ರಿಯಿಸಿದ್ದಾರೆ ನಮ್ಮ ಉಕ್ಕು ಇಲಾಖೆಯಲ್ಲಿ ಈ ಕಾರ್ಖಾನೆಯ ಪುನಶ್ಚೇತನಕ್ಕೆ 5 ಸಾವಿರ ಕೋಟಿ ರೂ. ನೀಡಲು ಸಿದ್ಧರಿದ್ದೇವೆ. ಆದರೆ ಕೇಂದ್ರದ ವಿತ್ತ ಸಚಿವರ ಸಹಿ ಬೇಕಿದೆ. ಈ ಕುರಿತು ಪ್ರಧಾನಮಂತ್ರಿ ಅವರನ್ನು ಭೇಟಿ ಮಾಡಿ ತಿಳಿಸಿದ್ದೇವೆ. ಇದಕ್ಕೆ ಪ್ರಧಾನಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

ಕಾರ್ಖಾನೆಯ ಪುನಶ್ಚೇತನಕ್ಕೆ ನಾವು ಸಿದ್ಧರಿದ್ದೇವೆ. ಆಂಧ್ರದ ವಿಶಾಖಪಟ್ಟಣದ ಆರ್​​ಎನ್​ಎಲ್ ಕಾರ್ಖಾನೆಯನ್ನು ಮುಚ್ಚಬೇಕೆಂದು ಇತ್ತು. ಅದನ್ನು ಈಗ ಪ್ರಾರಂಭ ಮಾಡಲಾಗಿದೆ. ಅಲ್ಲಿ 21 ಮೆಟ್ರಿಕ್ ಟನ್ ಸ್ಟೀಲ್ ಉತ್ಪಾದನೆ ಮಾಡುತ್ತಿದ್ದೇವೆ. ಅದರಂತೆ ವಿಐಎಸ್ಎಲ್ ‌ಕಾರ್ಖಾನೆಯನ್ನು ಮುಂದಿನ ಮೂರು ತಿಂಗಳಲ್ಲಿ ಪುನಶ್ಚೇತನ ಮಾಡಲಾಗುವುದು. ನಿಮ್ಮ ಮಾತಿಗೆ ಗೌರವ ನೀಡಿ ನಿಮ್ಮ ಮಾತನ್ನು ಉಳಿಸುತ್ತೇವೆ ಎಂದು ಹೆಚ್​ ಡಿಕೆ ಭರವಸೆ ನೀಡಿದರು

Author