ಶಿವಮೊಗ್ಗ, ಖಾಸಗಿ ಬಸ್ ಸಮಯದ ವಿಚಾರವಾಗಿ ಶಿವಮೊಗ್ಗದ ರವೀಂದ್ರ ನಗರದಲ್ಲಿ ಗಲಾಟೆ ನಡೆದಿದೆ. ಬಸ್ ಮಾಲೀಕರೊಬ್ಬರ ಮೇಲೆ ಮತ್ತೊಂದು ಸಂಸ್ಥೆಯ ಬಸ್ಸಿನ ಚಾಲಕ ಮತ್ತು ಕಂಡಕ್ಟರ್ ದೊಣ್ಣೆ ಹಾಗೂ ರಾಡ್‌ಗಳಿಂದ ಹಲ್ಲೆ ನಡೆಸಿದ್ದಾರೆ.
ಕೃಷ್ಣ ಮೋಟಾರ್ ಸರ್ವಿಸ್ ಬಸ್‌ನ ಮಾಲೀಕ ವಿಜಯಕುಮಾರ್ ಎಂಬುವವರು ತಮ್ಮ ಬಸ್ಸುಗಳ ಸಮಯದ ವಿಚಾರವಾಗಿ ಶಿವಮೊಗ್ಗದ ಉಷಾ ಸರ್ಕಲ್ ಸಮೀಪದ ರವೀಂದ್ರ ನಗರ ಬಸ್ ನಿಲ್ದಾಣದ ಬಳಿ ವಿಚಾರಿಸಲು ತೆರಳಿದ್ದರು. ಆಗ ಮತ್ತೊಂದು ಬಸ್ಸು ನಿಗದಿತ ಸಮಯವನ್ನು ಮೀರಿ ನಿಲ್ದಾಣದಿಂದ ತಡವಾಗಿ ಹೊರಡುತ್ತಿರುವುದನ್ನು ಗಮನಿಸಿದ್ದರು. ಈ ಸಂಬಂಧ ಬಸ್ಸಿನ ಕಂಡಕ್ಟರ್‌ಗೆ ಪ್ರಶ್ನಿಸಿದ್ದಾರೆ.
ಆಗ ಕಂಡಕ್ಟರ್, ಡ್ರೈವರ್ ಮತ್ತು ಅವರ ಜೊತೆಯಲ್ಲಿದ್ದ ಮೂರ್ನಾಲ್ಕು ಮಂದಿ ವಿಜಯಕುಮಾರ್ ಅವರಿಗೆ ಅವಾಚ್ಯವಾಗಿ ಬೈದು, ದೊಣ್ಣೆ ಹಾಗೂ ರಾಡ್‌ಗಳಿಂದ ತಲೆ ಮತ್ತು ಸೊಂಟಕ್ಕೆ ಹೊಡೆದು ಗಾಯಗೊಳಿಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಗಾಯಾಳು ವಿಜಯ್ ಕುಮಾರ್ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಘಟನೆ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



