ಶಿವಮೊಗ್ಗ, ಕೆಎಸ್ಆರ್ಟಿಸಿ ಬಸ್ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸಾವನ್ನಪ್ಪಿದ್ದು, ನಾಲ್ವರಿಗೆ ಗಂಭೀರ ಗಾಯಗಳಾಗಿವೆ. ತೀರ್ಥಹಳ್ಳಿ ತಾಲೂಕು ಭಾರತಿಪುರದ ಬಳಿ ಮಂಗಳವಾರ ಈ ಅಪಘಾತ ಸಂಭವಿಸಿದೆ.ತೀರ್ಥಹಳ್ಳಿ ಕಡೆಯಿಂದ ರಾಯಚೂರಿಗೆ ಹೊರಟಿದ್ದ ಕೆಎಸ್ಆರ್ಟಿಸಿ ಬಸ್ ಹಾಗೂ ಶಿವಮೊಗ್ಗ ಕಡೆಯಿಂದ ಶೃಂಗೇರಿ ಕಡೆ ಹೊರಟಿದ್ದ ಕಾರಿನ ನಡುವೆ ಡಿಕ್ಕಿಯಾಗಿದೆ.
ಕಾರು ಬಸ್ ನಡುವೆ ನಡೆದ ಅಪಘಾತದಲ್ಲಿ ಕ ರಿಹಾನ್ (14) ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಪ್ರಯಾಣಿಕಾದ ಫಾತಿಮಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಕಾರಿನಲ್ಲಿದ್ದ ಓರ್ವ ಮಹಿಳೆ ಹಾಗೂ ಮೂವರು ಮಕ್ಕಳಿಗೆ ಗಂಭೀರವಾಗಿದ್ದು, ಮಹಿಳೆಗೆ ತೀರ್ಥಹಳ್ಳಿಯ ಜೆ.ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೂವರು ಮಕ್ಕಳನ್ನು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ರವಾನೆ ಮಾಡಲಾಗಿದೆ.
ಕಾರಿನಲ್ಲಿದ್ದವರು ಶೃಂಗೇರಿ ಮೂಲದವರಾಗಿದ್ದು, ದಾವಣಗೆರೆ ಜಿಲ್ಲೆ ಚನ್ನಗಿರಿಯಲ್ಲಿ ನಡೆದ ಮದುವೆಯಲ್ಲಿ ಭಾಗಿಯಾಗಿ ಶೃಂಗೇರಿಗೆ ವಾಪಸ್ ಆಗುವಾಗ ಅಪಘಾತ ಸಂಭವಿಸಿದೆ.

ಅಪಘಾತದಿಂದ ರಸ್ತೆ ಸಂಚಾರ ಕೆಲ ಕಾಲ ಬಂದ್ ಆಗಿತ್ತು. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ತೀರ್ಥಹಳ್ಳಿ ಪೊಲೀಸರು, ರಸ್ತೆ ಸಂಚಾರಕ್ಕೆ ಅನುವು ಮಾಡಿ ಕೊಟ್ಟರು. ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.



