ಶಿವಮೊಗ್ಗ | ಕೈದಿಯನ್ನು ಭೇಟಿಗೆ ಬಂದ ವೇಳೆ ಗಾಂಜಾ ಸಾಗಿಸಲು ಯತ್ನ ; ಇಬ್ಬರ ಬಂಧನ

ಶಿವಮೊಗ್ಗ

ಶಿವಮೊಗ್ಗ, ಕೇಂದ್ರ ಕಾರಾಗೃಹಕ್ಕೆ ಕೈದಿಯನ್ನು ಭೇಟಿಯಾಗಲು ಬಂದಿದ್ದ ವೇಳೆ ಪ್ಯಾಂಟ್ ಒಳಗಡೆ ಗಾಂಜಾ ಮರೆಮಾಚಿಕೊಂಡು ಸಾಗಿಸಲು ಯತ್ನಿಸಿದ ಘಟನೆ ನಿನ್ನೆ ಸಂಜೆ ಬೆಳಕಿಗೆ ಬಂದಿದೆ.

ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಬ್ಬರನ್ನು ಬಂಧಿಸಲಾಗಿದೆ.ಬಂಧಿತರನ್ನು ಮಹಮ್ಮದ್ ಅಕ್ಬರ್ ಅಲಿಯಾಸ್ ಕಣ್ಣಪ್ಪ (22), ಮದರಿ ಪಾಳ್ಯ ಹಾಗೂ ಅಜ್ಗರ್ ಅಲಿ ಅಲಿಯಾಸ್ ಅಜ್ಜು (21), ಮದರಿ ಪಾಳ್ಯ ಎಂದು ಗುರುತಿಸಲಾಗಿದೆ.

ನಿನ್ನೆ ಸಂಜೆ ಕೇಂದ್ರ ಕಾರಾಗೃಹದಲ್ಲಿ ಕೈದಿಯನ್ನು ಭೇಟಿಯಾಗಲು ಈ ಇಬ್ಬರು ಆಗಮಿಸಿದ್ದರು. ಈ ವೇಳೆ ಜೈಲು ಅಧಿಕಾರಿಗಳು ರೂಢಿಯಂತೆ ತಪಾಸಣೆ ನಡೆಸಿದಾಗ, ಅವರ ಪ್ಯಾಂಟ್ ಒಳಗಡೆ ಗಾಂಜಾ ಇಟ್ಟುಕೊಂಡಿರುವುದು ಪತ್ತೆಯಾಗಿದೆ.

ಕೂಡಲೇ ಜೈಲು ಅಧಿಕಾರಿಗಳು ತುಂಗಾನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.ಬಂಧಿತರಿಂದ ಪತ್ತೆಯಾದ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದು,

ಈ ಕುರಿತು ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಪ್ರಕ್ರಿಯೆ ಮುಂದುವರಿದಿದೆ.

ಜೈಲು ಒಳಗೆ ಮಾದಕ ವಸ್ತು ಸಾಗಣೆ ಮಾಡುವ ಯತ್ನವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಈ ಹಿಂದೆ ಯಾವುದೇ ಸಂಪರ್ಕ ಅಥವಾ ಜಾಲವಿದೆಯೇ ಎಂಬ ಕುರಿತು ತನಿಖೆಯನ್ನು ಮುಂದುವರೆಸಿದ್ದಾರೆ.

Author