ಶಿವಮೊಗ್ಗ | ರೈಲು ಪ್ರಯಾಣ ದರ ಏರಿಕೆ ಖಂಡಿಸಿ,ರೈಲ್ವೆ ನಿಲ್ದಾಣಕ್ಕೆ ಮುತ್ತಿಗೆ ಹಾಕಿದ ಯುವ ಕಾಂಗ್ರೆಸ್

ಶಿವಮೊಗ್ಗ

ಶಿವಮೊಗ್ಗ, ಪದೇ ಪದೇ ರೈಲು ಪ್ರಯಾಣದರ ಹೆಚ್ಚಳ ಖಂಡಿಸಿ ಜಿಲ್ಲಾ ಯುವ ಕಾಂಗ್ರೆಸ್ ನಿಂದ ಇಂದು ರೈಲ್ವೆ ನಿಲ್ದಾಣಕ್ಕೆ ಮುತ್ತಿಗೆ ಹಾಕಲಾಯಿತು.

ನಂತರ ಮಾತನಾಡಿದ ಮುಖಂಡರಾದ ಎಚ್. ಸಿ ಯೋಗೇಶ್ ಈ ಕೆಳಕಂಡ ಮನವಿಯ ಮಾಹಿತಿ ತಿಳಿಸಿದರು.ಅಚ್ಚೇ ದಿನ್ ಆಯೇಗಾ ಎಂದೇ ಅಧಿಕಾರದ ಗದ್ದುಗೆ ಹಿಡಿದ ಕೇಂದ್ರದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಂದಿನಿಂದಲೂ ಒಂದಲ್ಲಾ ಒಂದು ರೀತಿ ಜನಸಾಮಾನ್ಯರ ಮೇಲೆ ಗದಾ ಪ್ರಹಾರ ಮಾಡುತ್ತಿದೆ.

ಇದೀಗ ಜನಸಾಮಾನ್ಯಕ್ಕೆ ಸಾರಿಗೆ ಎಂದೇ ಖ್ಯಾತವಾಗಿರುವ ಮತ್ತು ಈ ದೇಶದ ಜನರ ಜೀವನಾಡಿಯಂತಾಗಿರುವ ರೈಲು ಪ್ರಯಾಣದರವನ್ನು ಪದೇ ಪದೇ ಹೆಚ್ಚಳ ಮಾಡಿರುವುದನ್ನು ಯುವ ಕಾಂಗ್ರೆಸ್ ಸಮಿತಿ ಖಂಡಿಸುತ್ತಿದ್ದು, ಹೆಚ್ಚಿಸಿರುವ ರೈಲು ಪ್ರಯಾಣ ದರವನ್ನು ಹಿಂಪಡೆಯಲು ಆಗ್ರಹಿಸಿ ಈ ದಿನ ರೈಲು ತಡೆದು ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು.

ರೈಲು ಸಂಚಾರವು ಈ ದೇಶದ ಜನರ ಜೀವನಾಡಿಯಾಗಿದೆ. ಪ್ರತಿದಿನ ಕೋಟ್ಯಂತರ ಜನರು ರೈಲು ಪ್ರಯಾಣವನ್ನೇ ನೆಚ್ಚಿಕೊಂಡಿದ್ದಾರೆ. ಜಗತ್ತಿನ ಅತ್ಯಂತ ದೊಡ್ಡ ರೈಲು ವ್ಯವಸ್ಥೆ ಭಾರತದ್ದಾಗಿದ್ದು, ರೈಲು ಸಂಚಾರದಿಂದ ಸರ್ಕಾರಕ್ಕೆ ನಷ್ಟವೇನೂ ಆಗುತ್ತಿಲ್ಲ. ಆದರೆ, ಜನಸಾಮಾನ್ಯರ ಜೀವನದ ಜೊತೆ ಚೆಲ್ಲಾಟವಾಡುತ್ತಿರುವ ಕೇಂದ್ರ ಬಿಜೆಪಿ ಸರ್ಕಾರ ರೈಲು ಪ್ರಯಾಣ ದರವನ್ನೂ ಹೆಚ್ಚಳ ಮಾಡುವ ಮೂಲಕ ಮೊದಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಿದೆ. ಒಂದು ವರ್ಷದಲ್ಲಿ ಇದು ಎರಡನೇ ಬಾರಿ ರೈಲು ಪ್ರಯಾಣದರ ಹೆಚ್ಚಳ ಮಾಡುತ್ತಿರುವುದು ತೀವ್ರ ಖಂಡನೀಯವೆಂದರು.

ಬಿಜೆಪಿ ಒಂದು ಕಡೆ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡುತ್ತೇವೆ ಎಂದು ಹೇಳುತ್ತಾ ಮತ್ತೊಂದೆಡೆ ಒಂದೊಂದೇ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಇಬ್ಬಗೆಯ ನೀತಿ ಅನುಸರಿಸುತ್ತಿದೆ. ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಂದಿನಿಂದಲೂ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿರಂತರವಾಗಿ ಮಾಡಿಕೊಂಡೇ ಬಂದಿದೆ.

ಲೀಟರೆ 60 ರೂ. ಇದ್ದ ಡೀಸೆಲ್-ಪೆಟ್ರೋಲ್ ಬೆಲೆ ಈಗ 90-105 ರೂ.ಗಳಾಗಿದೆ. 450 ರೂ. ಇದ್ದ ಗ್ಯಾಸ್ ಸಿಲಿಂಡರ್ ಬೆಲೆ ಸಾವಿರ ರೂ.ಗಳಿಗೆ ತಲುಪಿದೆ. ದಿನೇ ದಿನೇ ಎಲೆಕ್ಟ್ರಾನಿಕ್ ವಸ್ತುಗಳ ಬೆಲೆ ಏರಿಕೆ ಮಾಡುತ್ತಲೇ ಬಂದಿದೆ. ಇತ್ತೀಚೆಗಷ್ಟೇ ರಸಗೊಬ್ಬರದ ಬೆಲೆಯನ್ನು ಹೆಚ್ಚಿಸುವ ಮೂಲಕ ರೈತರ ಬದುಕಿಗೆ ಕೊಳ್ಳಿ ಇಟ್ಟಿದೆ. ಔಷಧಿಗಳ ಬೆಲೆ ಹೆಚ್ಚಳ ಮಾಡಿದ್ದು, ಜನಸಾಮಾನ್ಯರ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿದೆ.

ರೈಲು ಪ್ರಯಾಣ ದರವನ್ನು ಪದೇ ಪದೇ ಹೆಚ್ಚಳ ಮಾಡಿ, ಬೆಲೆ ಏರಿಕೆಯಿಂದ ತತ್ತರಿಸಿರುವ ಜನರ ಮೇಲೆ ಗದಾ ಪ್ರಹಾರ ಮಾಡಿದೆ.ಕೂಡಲೇ ಕೇಂದ್ರ ಸರ್ಕಾರ ಹೆಚ್ಚಿಸಿರುವ ರೈಲು ಪ್ರಯಾಣ ದರವನ್ನು ಹಿಂಪಡೆಯಬೇಕು. ರೈಲು ಪ್ರಯಾಣ ಹಿಂದಿನಂತೆ ಜನಸಾಮಾನ್ಯರ ಜೀವನಾಡಿಯಾಗಿರುವಂತೆ ನೋಡಿಕೊಳ್ಳಬೇಕು. ಅಗತ್ಯವಸ್ತುಗಳ ಬೆಲೆ ಏರಿಕೆ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಯುವ ಕಾಂಗ್ರೆಸ್ ವತಿಯಿಂದ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಈ ಮೂಲಕ ಎಚ್ಚರಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಈ ಮನವಿಯನ್ನು ರೈಲ್ವೆ ಸ್ಟೇಷನ್ ಮಾಸ್ಟರ್ ಅವರಿಗೆ ತಲುಪಿಸುವ ಮೂಲಕ ಪ್ರಧಾನ ಮಂತ್ರಿ ಅವರಿಗೆ ಮನವಿ ತಲುಪಿಸುವಂತೆ ಕೋರಿದರು.

ಈ ಒಂದು ಪ್ರತಿಭಟನೆಯಲ್ಲಿ ಮಹಾನಗರ ಪಾಲಿಕೆಯ ಮಾಜಿ ಸದಸ್ಯರಾದ ರಮೇಶ್ ಹೆಗಡೆ, ಯಮುನಾ ರಂಗೇಗೌಡರು, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಹರ್ಷಿತ್ ಗೌಡ, ಮಧುಸೂದನ್, ಜವಳಿ ನಿಗಮದ ಅಧ್ಯಕ್ಷರಾದ ಚೇತನ್ ಗೌಡ, ಅನಿಲ್ ಪಾಟೀಲ್, ಹಾಗೂ ಅನೇಕ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

Author