ಶಿವಮೊಗ್ಗ, ಗಿಫ್ಟ್ ಆಸೆಗಾಗಿ ವ್ಯಕ್ತಿಯೊಬ್ಬರು ಬರೋಬ್ಬರಿ 2,80,590 ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ.ಸಾಮಾನ್ಯವಾಗಿ ನಮಗೆ ಪರಿಚಿತರೇ ಗಿಫ್ಟ್ ಕಳುಹಿಸುತ್ತಾರೆ ಎಂದರೆ ಅದು ಬರುವವರೆಗೂ ಕುತೂಹಲ ತಡೆಯಲು ಸಾಧ್ಯವಾಗುವುದಿಲ್ಲ. ಯಾವಾಗ ಬರುತ್ತೆ, ಅದರಲ್ಲಿ ಏನಿರಬಹುದು ಎಂಬ ಕಾತರ ಒಂದೆಡೆಯಾದರೆ, ಅದನ್ನು ಪಡೆಯಲು ನಾವು ಏನು ಬೇಕಾದರೂ ಮಾಡಲು ಸಿದ್ಧರಿರುತ್ತೇವೆ. ಇದೇ ದೌರ್ಬಲ್ಯವನ್ನು ವಂಚಕರು ಬಂಡವಾಳ ಮಾಡಿಕೊಂಡಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ವ್ಯಕ್ತಿಯೊಬ್ಬರಿಗೆ ಕಳೆದ ಸೆಪ್ಟೆಂಬರ್ 26ರಂದು ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿದ್ದಾನೆ. ದೂರುದಾರರ ತಂಗಿ ಈ ಕರೆಯನ್ನು ಸ್ವೀಕರಿಸಿದ್ದು, ವಂಚಕನು ತಾನು ‘ಮುಂಬೈ ಕಸ್ಟಮ್ಸ್ ಇಲಾಖೆಯ ಅಧಿಕಾರಿ’ ಎಂದು ಪರಿಚಯಿಸಿಕೊಂಡದಾಖಲಾಗಿದೆ.ನಿಮಗೆ ನೈಜೀರಿಯಾದಿಂದ ಬೆಲೆಬಾಳುವ ಗಿಫ್ಟ್ ಬಂದಿದೆ. ಅದನ್ನು ಪಡೆಯಬೇಕಾದರೆ ನೀವು ಸರ್ವೀಸ್ ಚಾರ್ಜ್ ಹಾಗೂ ಟ್ಯಾಕ್ಸ್ ಪಾವತಿಸಬೇಕು ಎಂದು ವಂಚಕ ನಂಬಿಸಿದ್ದಾನೆ.
ಇದನ್ನು ನಿಜವೆಂದು ನಂಬಿದ ಶಿಕಾರಿಪುರದ ವ್ಯಕ್ತಿ, ಮನೆಯವರೊಂದಿಗೆ ಚರ್ಚಿಸಿ ಸೆಪ್ಟೆಂಬರ್ 27 ರಿಂದ ಅಕ್ಟೋಬರ್ 2 ರ ನಡುವೆ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು 2,80,590/- ರೂ. ಹಣವನ್ನು ವರ್ಗಾಯಿಸಿದ್ದಾರೆ. ಇಷ್ಟಕ್ಕೆ ನಿಲ್ಲದ ವಂಚಕರು, ಮತ್ತೆ ಕರೆ ಮಾಡಿ ಸರ್ವೀಸ್ ಚಾರ್ಜ್ ಹೆಸರಿನಲ್ಲಿ ಇನ್ನೂ 2,95,499/- ರೂ. ಪಾವತಿಸುವಂತೆ ಬೇಡಿಕೆಯಿಟ್ಟಿದ್ದಾರೆ.
ಈ ಹಂತದಲ್ಲಿ ದೂರುದಾರರಿಗೆ ಅನುಮಾನ ಬಂದಿದ್ದು, ಅಕ್ಕಪಕ್ಕದವರಲ್ಲಿ ವಿಚಾರಿಸಿದಾಗ ತಾವು ಮೋಸ ಹೋಗಿರುವುದು ಅರಿವಿಗೆ ಬಂದಿದೆ. ಈ ಹಿಂದೆ ಶಿವಮೊಗ್ಗದ ಶ್ರೀರಾಮಪುರದ ಮಹಿಳೆಯೊಬ್ಬರಿಗೂ ಇದೇ ರೀತಿ ಗಿಫ್ಟ್ ಆಸೆ ತೋರಿಸಿ 2.35 ಲಕ್ಷ ರೂ. ವಂಚಿಸಲಾಗಿತ್ತು.
ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದ ಸಿಇಎನ್ (CEN) ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ



