ರಿಪ್ಪನ್‌ಪೇಟೆ | ಅಮ್ಮನಘಟ್ಟ ಜೇನುಕಲ್ಲಮ್ಮ ದೇವಿಯ ವೈಭವದ ಜಾತ್ರಾ ಮಹೋತ್ಸವ

ಶಿವಮೊಗ್ಗ

ರಿಪ್ಪನ್‌ಪೇಟೆ, ಸಮೀಪದ ಇತಿಹಾಸ ಪ್ರಸಿದ್ಧ ಅಮ್ಮನಘಟ್ಟ ಜೇನುಕಲ್ಲಮ್ಮ ದೇವಿಯ ಜಾತ್ರಾ ಕಾರ್ಯಕ್ರಮ ವೈಭವದೊಂದಿಗೆ ಜರುಗಿತು.​ಮೊದಲ ಮಂಗಳವಾರದ ಜಾತ್ರೆಗೆ ಮುಂಜಾನೆಯೇ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಹಣ್ಣುಕಾಯಿ ಸಮರ್ಪಿಸಿ ಭಕ್ತಿಯ ಪರಾಕಾಷ್ಠತೆಯನ್ನು ಮೆರೆದರು.

ಪಿತೃ ಪಕ್ಷದಲ್ಲಿ ಆಚರಿಸಲಾಗುವ ಈ ಜಾತ್ರಾ ಮಹೋತ್ಸವದಲ್ಲಿ ಸುತ್ತಮುತ್ತಲಿನ ಸರ್ವಜನಾಂಗದವರು ಬಂದು ಜಾತ್ರೆಯಲ್ಲಿ ಪಾಲ್ಗೊಂಡು ಇಷ್ಟಾರ್ಥಗಳನ್ನು ಈಡೇರಿಸುವಂತೆ ಪ್ರಾರ್ಥಿಸಿದರೆ, ಹಲವರು ಮದುವೆಯಾಗದವರು, ಸಂತಾನ ಭಾಗ್ಯವಿಲ್ಲದವರು ಹೀಗೆ ಹಲವು ಸಮಸ್ಯೆಗಳನ್ನು ಹೊತ್ತು ಪರಿಹಾರಕ್ಕೆ ಮಾತೆಯಲ್ಲಿ ಹರಿಕೆ ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದರೆ, ಇನ್ನೂ ಕೆಲವು ರೈತರು ತಮ್ಮ ಜಮೀನಿನಲ್ಲಿ ಹಾಕಲಾದ ಬೆಳೆಗೆ ರೋಗ-ರುಜಿನ ಬಾರದಂತೆ ಉತ್ತಮ ಇಳುವರಿ ಬರಲೆಂದು ಪ್ರಾರ್ಥಿಸಿ ಅಡಿಕೆ, ಶುಂಠಿ ಇನ್ನಿತರ ಬೆಳೆಯನ್ನು ತಂದು ದೇವಿಯ ಸನ್ನಿಧಿಗೆ ಸಮರ್ಪಿಸುತ್ತಿದ್ದರೆ, ಇನ್ನೂ ಕೆಲವು ಭಕ್ತರು ಮಳೆಯಾಗಲೆಂದು ಪ್ರಾರ್ಥಿಸುತ್ತಿದ್ದ ದೃಶ್ಯ ಕಂಡುಬಂತು.

ಮಲೆನಾಡಿಗರ ಆರಾಧ್ಯ ದೈವ ದೇವತೆ ಜೇನುಕಲ್ಲಮ್ಮ ದೇವಿಯ ಪ್ರಥಮ ಮಂಗಳವಾರ ದಿನದ ಜಾತ್ರೆಗೆ ಭಕ್ತ ಜನಸಾಗರ ಹರಿದು ಬರುವ ಮೂಲಕ ಜಾತ್ರೆಯು ವೈಭವದೊಂದಿಗೆ ನೆರವೇರಿತು.

Author