ದಕ್ಷಿಣ ಕನ್ನಡ ಜಿಲ್ಲೆ ಶೀಘ್ರ ಮಂಗಳೂರು ಜಿಲ್ಲೆ?

ದಕ್ಷಿಣ ಕನ್ನಡ

ತುಳು ಭಾಷೆಯ ಮಾನ್ಯತೆಯ ಜೊತೆಗೆ, ಕರಾವಳಿ ಜನರ ಬಹುದಿನಗಳ ಮತ್ತೊಂದು ಬೇಡಿಕೆಯಾದ, ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ಮರುನಾಮಕರಣ ಮಾಡುವ ಬಗ್ಗೆಯೂ ಸಚಿವ ಸಂಪುಟ ಸಭೆಯಲ್ಲಿ ಗಂಭೀರ ಚರ್ಚೆ ನಡೆದಿದೆ. ಈ ಬಗ್ಗೆ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ, ಮುಂದಿನ ಒಂದು ತಿಂಗಳ ಒಳಗಾಗಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ.

ಇದರೊಂದಿಗೆ, ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಪ್ರವಾಸೋದ್ಯಮಕ್ಕೆ ಭಾರಿ ಉತ್ತೇಜನ ನೀಡುವ ನಿಟ್ಟಿನಲ್ಲಿ ಸಚಿವ ಸಂಪುಟವು ‘ಹೊಸ ಟೂರಿಸಂ ಪಾಲಿಸಿ’ ಜಾರಿಗೆ ತರಲು ಅನುಮೋದನೆ ನೀಡಿದೆ.

ಧಾರ್ಮಿಕ ಕ್ಷೇತ್ರಗಳಿಗೆ ಭರ್ಜರಿ ಅನುದಾನ :

ಕರಾವಳಿ ಭಾಗದ ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರಗಳ ಅಭಿವೃದ್ಧಿಗೆ ಸಚಿವ ಸಂಪುಟವು ಕೋಟ್ಯಂತರ ರೂಪಾಯಿಗಳ ವಿಶೇಷ ಪ್ಯಾಕೇಜ್ ಪ್ರಕಟಿಸಿದೆ. ಅದರಂತೆ, ಕರಾವಳಿಯ ಐತಿಹಾಸಿಕ ದೇವಸ್ಥಾನಗಳು ಮತ್ತು ಮಠಗಳ ಜೀರ್ಣೋದ್ಧಾರ ಹಾಗೂ ಮೂಲಸೌಕರ್ಯ ಅಭಿವೃದ್ಧಿಗಾಗಿ ₹12 ಕೋಟಿ ವಿಶೇಷ ಅನುದಾನ ಘೋಷಿಸಲಾಗಿದೆ. ಅದರಂತೆ, ಪುತ್ತೂರು ಮಹಾಲಿಂಗೇಶ್ವರ ದೇಗುಲಕ್ಕೆ 5 ಕೋಟಿ ರೂಪಾಯಿ ಹಾಗೂ ಒಡಿಯೂರು ಮಠ, ಮಾಣಿಲ ಮಠ ಸೇರಿದಂತೆ ಹಲವು ಕ್ಷೇತ್ರಗಳಿಗೆ ತಲಾ 1 ಕೋಟಿ ರೂಪಾಯಿ ನೀಡಲಾಗಿದೆ.

ಇದರೊಂದಿಗೆ, ಸೌಹಾರ್ದತೆ ಮತ್ತು ಅಲ್ಪಸಂಖ್ಯಾತರ ಕಲ್ಯಾಣದ ದೃಷ್ಟಿಯಿಂದ ಕರಾವಳಿ ಭಾಗದ ಉಳ್ಳಾಲ ಸೈಯದ್ ಮದನಿ ಜುಮ್ಮಾ ಮಸೀದಿಗೆ 5 ಕೋಟಿ ರೂಪಾಯಿ ಸೇರಿದಂತೆ ವಿವಿಧ ಚರ್ಚ್, ಮಸೀದಿ ಹಾಗೂ ಶೈಕ್ಷಣಿಕ ಸಂಸ್ಥೆಗಳಿಗೂ ನೆರವು ಘೋಷಿಸಲಾಗಿದೆ. ಕರಾವಳಿಯ ಹೆಮ್ಮೆಯ ಜಾನಪದ ಕ್ರೀಡೆ ಕಂಬಳಕ್ಕೆ ನೀಡುತ್ತಿದ್ದ ಅನುದಾನವನ್ನು 40 ಲಕ್ಷದಿಂದ 1 ಕೋಟಿ ರೂಪಾಯಿಗೆ ಏರಿಕೆ ಮಾಡಲಾಗಿದೆ.

Author