ಮಂಡ್ಯ ಜಿಲ್ಲೆಯ ಮೈಸೂರು ಶುಗರ್ ಫ್ಯಾಕ್ಟರಿ (ಮೈಶುಗರ್)ಯಲ್ಲಿ ಬಿಸಿ ನೀರಿನ ಹೊಂಡಕ್ಕೆ ಬಿದ್ದು 33 ವರ್ಷದ ಗುತ್ತಿಗೆ ಕಾರ್ಮಿಕ ಮೃತಪಟ್ಟಿರುವ ಘಟನೆ ನಡೆದಿದೆ.ಕಾರ್ಮಿಕನ ಸಾವಿಗೆ ಕಾರ್ಖಾನೆ ಆಡಳಿತದ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಕುಟುಂಬಸ್ಥರು, ಸಂಬಂಧಿಕರು ಹಾಗೂ ಗ್ರಾಮಸ್ಥರು ಕಾರ್ಖಾನೆ ಎದುರು ಪ್ರತಿಭಟನೆ ನಡೆಸಿದರು.
ಮೃತ ಕಾರ್ಮಿಕನನ್ನು ಮದ್ದೂರು ತಾಲೂಕಿನ ಕೆ. ಶೆಟ್ಟಿಹಳ್ಳಿ ಗ್ರಾಮದ ಚರಣ್ ಎಂದು ಗುರುತಿಸಲಾಗಿದೆ. ಖಾಸಗಿ ಏಜೆನ್ಸಿಯೊಂದರ ಮೂಲಕ ಕಳೆದ ಒಂದೂವರೆ ವರ್ಷದಿಂದ ಅವರು ಗುತ್ತಿಗೆ ಆಧಾರದ ಮೇಲೆ ಮೈಶುಗರ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು.
ಮೂಲಗಳ ಪ್ರಕಾರ, ಸೆಪ್ಟೆಂಬರ್ 3ರಂದು ಕಾರ್ಖಾನೆಯೊಳಗಿನ ಬಿಸಿ ನೀರಿನ ಹೊಂಡಕ್ಕೆ ಚರಣ್ ಬಿದ್ದಿದ್ದರು. ಗಂಭೀರವಾಗಿ ಗಾಯಗೊಂಡ ಅವರನ್ನು ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ, ಹಲವು ದಿನಗಳ ಕಾಲ ಚಿಕಿತ್ಸೆ ಪಡೆದರೂ ಚರಣ್ ಅವರ ಸ್ಥಿತಿ ಸುಧಾರಿಸದೆ, ಮಂಗಳವಾರ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಚರಣ್ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕೆ. ಶೆಟ್ಟಿಹಳ್ಳಿ ಗ್ರಾಮದ ಕುಟುಂಬಸ್ಥರು, ಸಂಬಂಧಿಕರು ಹಾಗೂ ಗ್ರಾಮಸ್ಥರು ಮೈಸುಗರ್ ಕಾರ್ಖಾನೆ ಎದುರು ಜಮಾಯಿಸಿ ಧರಣಿ ನಡೆಸಿದರು.





