ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಪ್ರಮುಖ ವಾಣಿಜ್ಯ ಕೇಂದ್ರವಾದ ಬೀರೂರಿಗೆ ಸಚಿವರಾದ ಎಸ್. ಮಧು ಬಂಗಾರಪ್ಪ ಅವರು ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ಅವರು ತಮ್ಮ ತಂದೆಯವರಾದ ಮಾಜಿ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಎಸ್. ಬಂಗಾರಪ್ಪನವರ ನೆಚ್ಚಿನ “ಪ್ರೀತಿ ಕ್ಯಾಂಟೀನ್” ಗೆ ತೆರಳಿ ಉಪಹಾರ ಸವಿದಿದ್ದಾರೆ.

ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರು ಈ ಭಾಗಕ್ಕೆ ಭೇಟಿ ನೀಡಿದಾಗಲೆಲ್ಲಾ ತಪ್ಪದೇ ಭೇಟಿ ನೀಡುತ್ತಿದ್ದ ಬೀರೂರಿನ ಪ್ರಸಿದ್ಧ “ಪ್ರೀತಿ ಕ್ಯಾಂಟೀನ್”ಗೆ ಸಚಿವ ಮಧು ಬಂಗಾರಪ್ಪ ಅವರು ಭೇಟಿ ನೀಡಿ, ಅಂದಿನ ನೆನಪುಗಳನ್ನು ಹಾಗೂ ತಮ್ಮ ತಂದೆಯವರ ಒಡನಾಟವನ್ನು ಸ್ಮರಿಸಿಕೊಂಡರು.
ಸ್ಥಳೀಯ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಕ್ಯಾಂಟೀನ್ನಲ್ಲಿ ಸೌಹಾರ್ದಯುತವಾಗಿ ಉಪಹಾರ ಸವಿದು, ಕೆಲಕಾಲ ರಾಜಕೀಯ ಹಾಗೂ ಕ್ಷೇತ್ರದ ಪ್ರಾದೇಶಿಕ ಅಭಿವೃದ್ಧಿ ವಿಷಯಗಳ ಕುರಿತು ಚರ್ಚೆ ನಡೆಸಿದರು.

ಬಳಿಕ ಕ್ಯಾಂಟೀನ್ ನಲ್ಲಿ ಕೆಲಸ ಮಾಡುವ ಸಿಬ್ಬಂದಿ ಮತ್ತು ಮಾಲೀಕರೊಂದಿಗೆ ಸಚಿವರು ಆತ್ಮೀಯವಾಗಿ ಮಾತುಕತೆ ನಡೆಸಿ, ಅವರ ಯೋಗಕ್ಷೇಮವನ್ನು ವಿಚಾರಿಸಿದರು. ಹಲವು ದಶಕಗಳಿಂದ ಉತ್ತಮ ಗುಣಮಟ್ಟದ ತಿಂಡಿ-ತಿನಿಸುಗಳನ್ನು ಗ್ರಾಹಕರಿಗೆ ನೀಡುತ್ತಾ ಬಂದಿರುವ ಕ್ಯಾಂಟೀನ್ನ ಸೇವೆಯನ್ನು ಈ ವೇಳೆ ಪ್ರಶಂಸಿಸಿದರು.

ಈ ಭೇಟಿಯು ಸ್ಥಳೀಯ ಸಾರ್ವಜನಿಕರು ಮತ್ತು ಅಭಿಮಾನಿಗಳಲ್ಲಿ ಹರ್ಷ ತಂದಿದ್ದು, ಹಿರಿಯ ನಾಯಕ ಮಾಜಿ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಎಸ್. ಬಂಗಾರಪ್ಪ ಅವರೊಂದಿಗಿನ ಹಳೆಯ ಒಡನಾಟವನ್ನು ಮತ್ತೊಮ್ಮೆ ಸ್ಮರಿಸಿಕೊಳ್ಳುವಂತೆ ಮಾಡಿದೆ ಎಂದು ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿದರು.





