ವಿಜಯಪುರ, ಸಚಿವ ಸ್ಥಾನ ಲಭಿಸದ ಕಾರಣಕ್ಕೆ ಅಸಮಾಧಾನಗೊಂಡು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಇಂಡಿ ವಿಧಾನಸಭಾ ಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ ಬುಧವಾರ ತಮ್ಮ ರಾಜೀನಾಮೆಯನ್ನು ಹಿಂಪಡೆದಿದ್ದಾರೆ. ಇಂಡಿ ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ನಡೆದ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳ ಸಭೆಯಲ್ಲಿ ಮಾತನಾಡಿದ ಅವರು, ‘ಯಾರ ಬಗ್ಗೆಯೂ ನನಗೆ ದ್ವೇಷ, ಅಸೂಯೆ ಇಲ್ಲ. ಆದರೆ, ಹೈಕಮಾಂಡ್‌ನವರು ಸಚಿವ ಸ್ಥಾನದ ಮಾತು ಕೊಟ್ಟು, ತಪ್ಪಿದ್ದಕ್ಕೆ ಬೇಸರವಾಗಿ ರಾಜೀನಾಮೆ ನೀಡಿದ್ದೆ. ಈಗ ಅವರೇ ಮರು ಪರಿಶೀಲನೆ ಮಾಡಿ ಎಂದು ವಿನಂತಿ ಮಾಡಿರುವುದರಿಂದ ರಾಜೀನಾಮೆ ವಾಪಸ್ ಪಡೆದಿದ್ದೇನೆ’ ಎಂದರು.
ನನಗೆ ಸಚಿವ ಸ್ಥಾನಕ್ಕಿಂತ ಕ್ಷೇತ್ರದ ಜನತೆಯ ಪ್ರೀತಿ ವಿಶ್ವಾಸವೇ ಮುಖ್ಯ, ಅದಕ್ಕೆ ತಲೆಬಾಗುತ್ತೇನೆ. ಇನ್ನು ಮುಂದೆ ನಾನು ಎಂದೆಂದೂ ಸಚಿವ ಸ್ಥಾನಕ್ಕಾಗಿ ಯಾರ ಬಳಿಯೂ ಹೋಗುವುದಿಲ್ಲ. ನನ್ನ ಮತಕ್ಷೇತ್ರದ ಅಭಿವೃದ್ಧಿಯೇ ನನಗೆ ಮುಖ್ಯವಾಗಿದ್ದು, ತಮ್ಮೇಲ್ಲರ ಮಧ್ಯದಲ್ಲಿದ್ದುಕೊಂಡು ಕೆಲಸ ಮಾಡುತ್ತೇನೆ’ ಎಂದು ಹೇಳಿದರು.
‘ಸದ್ಯದ ರಾಜಕಾರಣ ಹೇಗಿದೆ ಎಂದರೆ ನಾವು ಎಷ್ಟು ಬೆಳೆಯುತ್ತೇವೆಯೋ ಅಷ್ಟು ವೈರಿಗಳು ಹೆಚ್ಚಾಗುತ್ತಾರೆ. ನೀವೆಲ್ಲ ನನ್ನ ಜೊತೆ ಇದ್ದೀರಿ ಎಂಬ ಕಾರಣಕ್ಕೆ ನನ್ನ ವಿರುದ್ಧ ವೈರಿಗಳು ಹೆಚ್ಚಾಗಿದ್ದಾರೆ. ಅವರು ವಿರೋಧ ಮಾಡುತ್ತಿರುವುದು ನನ್ನನ್ನಲ್ಲ, ನಿಮ್ಮನ್ನ’ ಎಂದರು.
‘ಇಂಡಿಗೆ ಮುಖ್ಯಮಂತ್ರಿ ಬಂದರೆ ಲಕ್ಷ, ಲಕ್ಷ ಜನ ಸೇರುತ್ತಿರುವನ್ನು ನನ್ನ ರಾಜಕೀಯ ವೈರಿಗಳಿಗೆ ಸಹಿಸಲಾಗಲಿಲ್ಲ. ಶಾಸಕನಾಗಿಯೇ ಇಷ್ಟೊಂದು ಜನರ ಪ್ರೀತಿ, ವಿಶ್ವಾಸ ಗಳಿಸಿರುವಾಗ ಇನ್ನು ಮಂತ್ರಿಯಾದರೆ ವಿಜಯಪುರ ರಾಜಕಾರಣದ ‘ಶಕ್ತಿ ಕೇಂದ್ರ’ ಆಗುತ್ತಾನೆ ಎಂಬ ಕಾರಣಕ್ಕೆ ಆತಂಕಗೊಂಡು ಹಗಲು, ರಾತ್ರಿ ಮಲಗದೇ ಪ್ರಯತ್ನ ಮಾಡಿ ಕೊನೆಗೂ ಸಚಿವ ಸ್ಥಾನ ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ, ಅವರಿಗೆ ಒಳ್ಳೆಯದಾಗಲಿ’ ಎಂದು ಹೇಳಿದರು.





