ನವದೆಹಲಿ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿ ಹಾಗೂ ಮಲೆನಾಡಿನ ರೈಲು ಸಂಪರ್ಕವನ್ನು ಬಲಪಡಿಸುವ ನಿಟ್ಟಿನಲ್ಲಿ ಅತ್ಯಂತ ಮಹತ್ವಕಾಂಕ್ಷೆಯ ಯೋಜನೆಯಾದ ಕೋಟೆಗಂಗೂರು ಕೋಚಿಂಗ್ ಡಿಪೋ ಕಾಮಗಾರಿಯು ವೇಗವಾಗಿ ಪೂರ್ಣಗೊಳ್ಳುವತ್ತ ಸಾಗುತ್ತಿದೆ. ಪ್ರಸಕ್ತ ಅಧಿವೇಶೆನದಲ್ಲಿ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಯೋಜನೆಯ ಪ್ರಸ್ತುತ ಪ್ರಗತಿಯ ವಿವರಗಳನ್ನು ಒದಗಿಸಿದ್ದಾರೆ.
ಕೇಂದ್ರ ಸರ್ಕಾರ ಒಟ್ಟು 76.01 ಕೋಟಿ ಅಂದಾಜು ವೆಚ್ಚದಲ್ಲಿ ಮಂಜೂರು ಮಾಡಿರುವ ಈ ಯೋಜನೆಗೆ, ಸಂಸದ ರಾಘವೇಂದ್ರ ಅವರ ನಿರಂತರ ಪರಿಶ್ರಮದ ಫಲವಾಗಿ ಮಾರ್ಚ್ 31, 2026ರವರೆಗೆ 58.82 ಕೋಟಿ ರೂ.ಗಳಷ್ಟು ಕಾಮಗಾರಿಗಳನ್ನು ಮುಗಿಸಿ, ಶೇ. 77% ಕ್ಕಿಂತ ಹೆಚ್ಚು ಹಣಕಾಸು ಪ್ರಗತಿ ಸಾಧಿಸಲಾಗಿದೆ.
ಅಷ್ಟೇ ಅಲ್ಲದೆ, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಬಾಕಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಕೇಂದ್ರ ರೈಲ್ವೆ ಸಚಿವಾಲಯ, ಪ್ರಸಕ್ತ ಸಾಲಿನಲ್ಲಿ 9.5 ಕೋಟಿ ರೂಪಾಯಿಗಳ ಅನುದಾನ ಬಿಡುಗಡೆ ಮಾಡಿದೆ.
ಯೋಜನೆಯ ಪ್ರಮುಖ ಪ್ರಗತಿ ಮತ್ತು ಸೌಲಭ್ಯಗಳ ವಿವರ ಇಂತಿದೆ:
ಪೂರ್ಣಗೊಂಡಿರುವ ಕಾಮಗಾರಿಗಳು:
ಕೋಟೆಗಂಗೂರಿನ ರೈಲ್ವೆ ನಿಲ್ದಾಣದ ಕಟ್ಟಡ (Station Building) ಹಾಗೂ ಸೇವಾ ಕಟ್ಟಡ (Service Building) ನಿರ್ಮಾಣ ಕಾರ್ಯ; ರೈಲು ಬೋಗಿಗಳ ದುರಸ್ತಿ ಮತ್ತು ನಿರ್ವಹಣೆಗೆ ಅಗತ್ಯವಿರುವ ಸಿಕ್ ಲೈನ್ ಕವರ್ಡ್ ಶೆಡ್ನ ಪಾಯದ (Foundation) ಕಾಮಗಾರಿ ಪೂರ್ಣಗೊಂಡಿದೆ.
ಚಾಲನೆಯಲ್ಲಿರುವ ಕಾಮಗಾರಿಗಳು:
24 ಬೋಗಿಗಳ ಸುಸಜ್ಜಿತ ರೈಲುಗಳನ್ನು ತಪಾಸಣೆ ಮಾಡುವ 2 ಫಿಟ್ ಲೈನ್ಗಳು (Pit Lines), 2 ಸ್ಟೇಬ್ಲಿಂಗ್ ಲೈನ್ಗಳು (Stabling Lines), 1 ಲೂಪ್ ಲೈನ್ ಹಾಗೂ ಸಿಬ್ಬಂದಿ ವಸತಿ ಗೃಹಗಳ ನಿರ್ಮಾಣ ಕಾಮಗಾರಿ ಶರವೇಗದಲ್ಲಿ ನಡೆಯುತ್ತಿದೆ.
ಭೂಸ್ವಾಧೀನ ಪ್ರಕ್ರಿಯೆ:
ಯೋಜನೆಗೆ ಅಗತ್ಯವಿರುವ ಒಟ್ಟು 38 ಎಕರೆ ಭೂಮಿಯಲ್ಲಿ ಈಗಾಗಲೇ 31.3 ಎಕರೆ ಭೂಸ್ವಾಧೀನ ಪೂರ್ಣಗೊಂಡಿದೆ. ಶಂಟಿಂಗ್ ನೆಕ್ಗೆ ಅಗತ್ಯವಿರುವ ಬಾಕಿ 6.7 ಎಕರೆ ಭೂಮಿಯನ್ನು ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಶೀಘ್ರವೇ ಪಡೆದುಕೊಳ್ಳಲು ಕ್ರಮ ವಹಿಸಲಾಗಿದೆ.
ಶಿವಮೊಗ್ಗ ಚೇಂಬರ್ ಆಫ್ ಕಾಮರ್ಸ್ ನಿಯೋಗದೊಂದಿಗೆ ಕೇಂದ್ರ ಸಚಿವ ವಿ.ಸೋಮಣ್ಣ ಭೇಟಿ ಮಾಡಿದ ಸಂಸದ ಬಿ.ವೈ.ರಾಘವೇಂದ್ರ;
ಶಿವಮೊಗ್ಗ ಜಿಲ್ಲೆ ಹಾಗೂ ಬೈಂದೂರಿನ ಬಾಕಿ ರೈಲ್ವೇ ಯೋಜನೆಗಳ ತ್ವರಿತ ಜಾರಿಗೆ ಮನವಿ:* ಕ್ಷೇತ್ರದ ಅಭಿವೃದ್ಧಿ ಹಾಗೂ ವ್ಯಾಪಾರ ವಹಿವಾಟಿಗೆ ವೇಗ ನೀಡುವ ನಿಟ್ಟಿನಲ್ಲಿ, ಸಂಸದ ಬಿ.ವೈ.ರಾಘವೇಂದ್ರ ಅವರ ನೇತೃತ್ವದಲ್ಲಿ ಇಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ (Chamber of Commerce) ಪ್ರಮುಖ ಪ್ರತಿನಿಧಿಗಳ ನಿಯೋಗ ಕೇಂದ್ರ ರೈಲ್ವೇ ರಾಜ್ಯ ಸಚಿವರಾದ ವಿ.ಸೋಮಣ್ಣನವರನ್ನು ಭೇಟಿ ಮಾಡಿದರು.
ಈ ವೇಳೆ, ಬೈಂದೂರು ಸೇರಿದಂತೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಾದ್ಯಂತ ಬಾಕಿಯಿರುವ ಎಲ್ಲಾ ಪ್ರಮುಖ ರೈಲ್ವೇ ಯೋಜನೆಗಳು ಮತ್ತು ಮೂಲಸೌಕರ್ಯ ಕಾಮಗಾರಿಗಳನ್ನು ತುರ್ತಾಗಿ ಪೂರ್ಣಗೊಳಿಸುವಂತೆ ಸಂಸದರು ಸಚಿವರಿಗೆ ಮನವಿ ಮಾಡಿದರು. ಪ್ರದೇಶದ ಕೈಗಾರಿಕಾ ಹಾಗೂ ಸಾರಿಗೆ ಪ್ರಗತಿಗೆ ಈ ಯೋಜನೆಗಳು ಅತ್ಯಗತ್ಯವಾಗಿದ್ದು, ತ್ವರಿತವಾಗಿ ಎಲ್ಲ ಅನುಮೋದಿತ ಯೋಜನೆಗಳನ್ನು ಪೂರೈಸುವಂತೆ ನಿಯೋಗದ ಪರವಾಗಿ ಸಂಸದ ರಾಘವೇಂದ್ರ ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಿದರು.
ಯೋಜನೆ ಕುರಿತಂತೆ ಪ್ರತಿಕ್ರಿಯಿಸಿರುವ ಸಂಸದ ಬಿ.ವೈ.ರಾಘವೇಂದ್ರ :
“ಕೋಟೆಗಂಗೂರು ಕೋಚಿಂಗ್ ಡಿಪೋ ಶಿವಮೊಗ್ಗ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಜನರ ದಶಕಗಳ ಕನಸಾಗಿದೆ. ಈ ಡಿಪೋ ನಿರ್ಮಾಣಗೊಂಡ ನಂತರ ಶಿವಮೊಗ್ಗ ಸ್ವತಂತ್ರ ರೈಲ್ವೆ ಹಬ್ ಆಗಿ ಹೊರಹೊಮ್ಮಲಿದೆ. 24 ಬೋಗಿಗಳ ರೈಲುಗಳ ನಿರ್ವಹಣೆ ಇಲ್ಲೇ ಸಾಧ್ಯವಾಗುವುದರಿಂದ, ಬೆಂಗಳೂರು ಅಥವಾ ಮೈಸೂರು ನಗರಗಳನ್ನು ನೆಚ್ಚಿಕೊಳ್ಳದೇ ಶಿವಮೊಗ್ಗದಿಂದಲೇ ದೇಶದ ವಿವಿಧ ಪ್ರಮುಖ ನಗರಗಳಿಗೆ ಹೊಸ ಎಕ್ಸ್ಪ್ರೆಸ್ ಹಾಗೂ ವಂದೇ ಭಾರತ್ ರೈಲುಗಳನ್ನು ಆರಂಭಿಸಲು ಹಾದಿ ಸುಗಮವಾಗಲಿದೆ. ಶಿವಮೊಗ್ಗದ ಮೂಲಸೌಕರ್ಯಕ್ಕೆ ಸದಾ ಬೆನ್ನೆಲುಬಾಗಿ ನಿಂತಿರುವ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜಿ ಹಾಗೂ ರೈಲ್ವೆ ಸಚಿವ ಶ್ರೀ ಅಶ್ವಿನಿ ವೈಷ್ಣವ್ ಜಿ ಅವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು”_ ಎಂದಿದ್ದಾರೆ.
ಶಿವಮೊಗ್ಗ ಕ್ಷೇತ್ರದ ಜನತೆಗೆ ನೀಡಿರುವ ಭರವಸೆಯಂತೆ, ಕೋಟೆಗಂಗೂರು ರೈಲ್ವೆ ಡಿಪೋವನ್ನು ಶೀಘ್ರದಲ್ಲೇ ಲೋಕಾರ್ಪಣೆಗೊಳಿಸಿ ಮಲೆನಾಡಿನ ಸಾರಿಗೆ ಕ್ಷೇತ್ರದ ಅಭಿವೃದ್ಧಿಯ ಮತ್ತೊಂದು ಪರ್ವವನ್ನು ಆರಂಭಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತಿರುವುದಾಗಿ ಸಂಸದ ರಾಘವೇಂದ್ರ ತಿಳಿಸಿದ್ದಾರೆ.







