ಬೆಂಗಳೂರು ನಗರ ಪೊಲೀಸ್‌ ಆಯುಕ್ತಾಲಯವೂ ಇನ್ನು 5 ಭಾಗ : ಮಹಾನಗರಕ್ಕಿನ್ನು ಐವರು ಕಮಿಷನರ್‌, ಒಬ್ಬ ಮುಖ್ಯಸ್ಥ!

ಬೆಂಗಳೂರು

ಬೆಂಗಳೂರು, ಬಿಬಿಎಂಪಿಯನ್ನು ಐದು ಪಾಲಿಕೆಗಳನ್ನಾಗಿ ವಿಭಜಿಸಿದ ಬೆನ್ನಲ್ಲೇ ಬೆಂಗಳೂರು ನಗರ ಪೊಲೀಸ್‌ ಆಯುಕ್ತಾಲಯವನ್ನು ಐದು ಭಾಗಗಳನ್ನಾಗಿ ವಿಭಜಿಸುವ ಸಂಬಂಧ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ.

ಈ ಮೂಲಕ ಹಲವು ವರ್ಷಗಳಿಂದ ಕಮಿಷನರೇಟ್‌ಗಳನ್ನು ಮುಂಬಯಿ ಮಾದರಿಯಲ್ಲಿ ವಿಭಜಿಸುವ ಯೋಜನೆಗೆ ಚಾಲನೆ ಸಿಕ್ಕಂತಾಗಿದೆ.
ನಗರದಲ್ಲಿ ಮುಖ್ಯ ಪೊಲೀಸ್‌ ಆಯುಕ್ತರ ಅಧೀನದಲ್ಲಿ ಐದು ಕಮಿಷನರೇಟ್‌ ರಚಿಸುವಂತೆ ಕೋರಿ ನಗರ ಪೊಲೀಸ್‌ ಆಯುಕ್ತ ಸೀಮಂತ್‌ಕುಮಾರ್‌ ಸಿಂಗ್‌ ರಾಜ್ಯ ಪೊಲೀಸ್‌ ಮಹಾನಿರ್ದೇಶಕ (DGP) ಡಾ. ಎಂ.ಎ. ಸಲೀಂ ಅವರಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

ಜತೆಗೆ, ಅಗತ್ಯವಿರುವ 6,633 ಹೊಸ ಹುದ್ದೆಗಳ ಸೃಜನೆಗೂ ಮನವಿ ಮಾಡಲಾಗಿದೆ. ಜತೆಗೆ, ಬೆಂಗಳೂರು ದಕ್ಷಿಣ ಹಾಗೂ ಗ್ರಾಮಾಂತರ ಜಿಲ್ಲೆಗಳ ಎಂಟಕ್ಕೂ ಹೆಚ್ಚು ಪೊಲೀಸ್‌ ಠಾಣೆಗಳನ್ನು ನಗರ ವ್ಯಾಪ್ತಿಗೆ ಸೇರ್ಪಡೆ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ.

ಅಲ್ಲದೆ, ಹೊಸ ಸಂಚಾರ ಪೊಲೀಸ್‌ ಠಾಣೆಗಳ ಸ್ಥಾಪನೆಗೂ ಅವಕಾಶ ಕಲ್ಪಿಸುವಂತೆ ಪ್ರಸ್ತಾವನೆಯಲ್ಲಿ ಕೋರಲಾಗಿದೆ.

ಹೆಚ್ಚುತ್ತಿರುವ ನಗರದ ಭೌಗೋಳಿಕ ವ್ಯಾಪ್ತಿ, ಜನಸಂಖ್ಯೆ, ಕಾನೂನು ಸುವ್ಯವಸ್ಥೆ ಹಾಗೂ ಸಂಚಾರ ನಿರ್ವಹಣೆ ಸುಗಮಗೊಳಿಸುವ ಸಲುವಾಗಿ ಐದು ಪೊಲೀಸ್‌ ಕಮಿಷನರೇಟ್‌ ವಿಭಜಿಸುವ ಪ್ರಸ್ತಾಪ ಮಂಡಿಸಲಾಗಿದೆ. ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರು (ಎಡಿಜಿಪಿ) ಶ್ರೇಣಿಯ ಅಧಿಕಾರಿಯು ಮುಖ್ಯ ಪೊಲೀಸ್‌ ಮುಖ್ಯ ಆಯುಕ್ತರ ಹುದ್ದೆಗೆ ನಿಯೋಜನೆಯಾಗಲಿದ್ದು, ಐವರು ಪೊಲೀಸ್‌ ಕಮಿಷನರ್‌ಗಳು ಅವರ ಅಧೀನದಲ್ಲಿರಲಿದ್ದಾರೆ.

ಐಜಿಪಿ ಅಥವಾ ಡಿಐಜಿಪಿ ರಾರ‍ಯಂಕ್‌ನ ಅಧಿಕಾರಿಗಳು ಕಮಿಷನರ್‌ಗಳಾಗಲಿದ್ದು, ಅವರ ಅಧೀನದಲ್ಲಿಡಿಸಿಪಿ, ಸಂಚಾರ ಡಿಸಿಪಿಗಳಿರಲಿದ್ದಾರೆ.

1 ಕೇಂದ್ರ ಪೊಲೀಸ್‌ ಕಮಿಷನರ್‌
ಕಮಿಷನರ್‌, ಮೂವರು ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿಗಳು, ಒಬ್ಬರು ಸಂಚಾರ ಡಿಸಿಪಿ, ಡಿಸಿಪಿ ಕೇಂದ್ರ ಕಚೇರಿ, ಸಶಸ್ತ್ರ ಮೀಸಲು ಪಡೆ ಕೇಂದ್ರ ಡಿಸಿಪಿ ಇರಲಿದ್ದಾರೆ. ಹಾಲಿ ಇರುವ ಕೇಂದ್ರ ವಿಭಾಗದ ಡಿಸಿಪಿ ಜತೆಗೆ, ಗಾಂಧಿನಗರ, ಇಂದಿರಾನಗರ ಕಾನೂನು ಸುವ್ಯವಸ್ಥೆ ಡಿಸಿಪಿ ವಿಭಾಗ ರಚನೆಯಾಗಲಿದೆ. ಜತೆಗೆ, ಕೇಂದ್ರ ಸಂಂಚಾರ ವಿಭಾಗ ಅಸ್ತಿತ್ವಕ್ಕೆ ಬರಲಿದೆ.

ವಿಧಾನಸೌಧ ಮತ್ತು ವಿಕಾಸಸೌಧ ಆವರಣಗಳು, ಲೋಕಭವನ, ಹೈಕೋರ್ಟ್‌ ಹತ್ತಿರದ ನ್ಯಾಯಾಂಗ ಸಮುಚ್ಚಯಗಳು, ಪ್ರಮುಖ ಕ್ರೀಡಾಂಗಣಗಳು ಮತ್ತು ಕಾರ್ಯಕ್ರಮ ಸ್ಥಳಗಳು, ಪ್ರತಿಭಟನೆ ಮತ್ತು ಸಭೆ ಸ್ಥಳಗಳು ಮೆಟ್ರೊ ನಿಲ್ದಾಣಗಳು ಮತ್ತು ಬೈಯಪ್ಪನಹಳ್ಳಿ ಮೆಟ್ರೊ ಡಿಪೊ, ಕೆಎಸ್‌ಆರ್‌ಟಿಸಿ ರೈಲ್ವೆ ನಿಲ್ದಾಣ, ವಲಯ ಕಚೇರಿ ಮತ್ತು ಮೆಜೆಸ್ಟಿಕ್‌ ಬಸ್‌ ನಿಲ್ದಾಣ, ಕೇಂದ್ರ ಬೆಂಗಳೂರಿನಲ್ಲಿರುವ ಪ್ರಮುಖ ವಾಣಿಜ್ಯ (ಸಿಬಿಡಿ) ಮತ್ತು ಆಡಳಿತ ಕಾರಿಡಾರ್‌ಗಳು, ಪ್ರಮುಖ ಸರಕಾರಿ ಆಸ್ಪತ್ರೆಗಳಾದ ವಿಕ್ಟೋರಿಯಾ ಆಸ್ಪತ್ರೆ, ಬೌರಿಂಗ್‌ ಆಸ್ಪತ್ರೆ, ಮೆಡಿಕಲ್‌ ಕಾಲೇಜು ಪ್ರದೇಶವು ವ್ಯಾಪ್ತಿಗೆ ಸೇರಲಿದೆ.

2
ಉತ್ತರ ವಿಭಾಗದ ಪೊಲೀಸ್‌ ಕಮಿಷನರ್‌:
ಹಾಲಿ ಇರುವ ಉತ್ತರ ವಿಭಾಗ ಡಿಸಿಪಿ ವಿಭಾಗದ ಜತೆಗೆ, ಹೊಸದಾಗಿ ಈಶಾನ್ಯ, ಯಶವಂತಪುರ, ಉತ್ತರ ಸಂಚಾರ, ಸಿಎಎಆರ್‌ ಉತ್ತರ ಡಿಸಿಪಿ ವಿಭಾಗಗಳು ರಚನೆಯಾಗಲಿವೆ.

ಯಲಹಂಕ, ಅಮೃತಹಳ್ಳಿ, ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ, ಹೆಬ್ಬಾಳ ಪ್ರದೇಶಗಳು ಈ ಕಮಿಷನರೇಟ್‌ ವ್ಯಾಪ್ತಿಗೆ ಬರಲಿವೆ.

  1. ಪೂರ್ವ ಪೊಲೀಸ್‌ ಕಮಿಷನರ್‌
    ವೈಟ್‌ಫೀಲ್ಡ್‌, ಪೂರ್ವ ವಿಭಾಗದ ಕಾನೂನು ಸುವ್ಯವಸ್ಥೆ ಡಿಸಿಪಿ, ಒಂದು ಸಂಚಾರ ಡಿಸಿಪಿ ವಿಭಾಗ ಹಾಗೂ ಸಶಸ್ತ್ರ ಮೀಸಲು ಪಡೆಯ ವಿಭಾಗದ ಡಿಸಿಗಳು ಇರಲಿದ್ದಾರೆ.
  2. ದಕ್ಷಿಣ ಪೊಲೀಸ್‌ ಕಮಿಷನರೇಟ್‌
    ದಕ್ಷಿಣ, ಆಗ್ನೇಯ, ಎಲೆಕ್ಟ್ರಾನಿಕ್‌ ಸಿಟಿ, ದಕ್ಷಿಣ ಸಂಚಾರ ಹಾಗೂ ಸಿಎಆರ್‌ ಡಿಸಿಪಿ ವಿಭಾಗಗಳು ರಚನೆಯಾಗಲಿವೆ.

ಹೊಸದಾಗಿ ಬೆಂಗಳೂರು ಗ್ರಾಮಾಂತರದಲ್ಲಿರುವ ಆನೇಕಲ್‌ ಉಪವಿಭಾಗ ಸೇರ್ಪಡೆಯಾಗಲಿದ್ದು, ಕಗ್ಗಲೀಪುರ, ಸರ್ಜಾಪುರ, ಸೂರ್ಯನಗರ, ಅತ್ತಿಬೆಲೆ, ಬನ್ನೇರುಘಟ್ಟ, ಆನೇಕಲ್‌, ಜಿಗಣಿ ಠಾಣೆಗಳು ದಕ್ಷಿಣ ಕಮಿಷನರೇಟ್‌ ವ್ಯಾಪ್ತಿಗೆ ಸೇರಿಸಲು ಪ್ರಸ್ತಾವನೆ ಮಂಡಿಸಲಾಗಿದೆ.

  1. ಪಶ್ಚಿಮ ಪೊಲೀಸ್‌ ಕಮಿಷನರೇಟ್‌
    ಡಿಸಿಪಿ ಪಶ್ಚಿಮ, ಕೆಂಗೇರಿ, ಪೀಣ್ಯ ಹಾಗೂ ಸಂಚಾರ, ಸಿಎಆರ್‌ ಡಿಸಿಪಿಗಳ ಹುದ್ದೆಗಳು ಇರಲಿವೆ.

ಹೊಸದಾಗಿ ಬೆಂಗಳೂರು ದಕ್ಷಿಣದ ತಾವರೇಕೆರೆ, ಅಂದ್ರಹಳ್ಳಿ, ಕಡಬಗೆರೆ ಠಾಣೆಗಳನ್ನು ಸೇರಿಸಿಕೊಳ್ಳಲು ಪ್ರಸ್ತಾವನೆಯಲ್ಲಿಶಿಫಾರಸು ಮಾಡಲಾಗಿದೆ.

ಸಿಸಿಬಿ ಸ್ಥಿತಿ ಯಥಾವತ್‌
ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಎಂದಿನಂತೆ ಹೆಚ್ಚುವರಿ ಪೊಲೀಸ್‌ ಆಯುಕ್ತರು/ಜಂಟಿ ಪೊಲೀಸ್‌ ಆಯುಕ್ತರ ಅಧೀನದಲ್ಲಿಕಾರ್ಯನಿರ್ವಹಿಸಲಿದೆ. ಇಬ್ಬರು ಡಿಸಿಪಿಗಳ ಅಧೀನದಲ್ಲಿಸಂಘಟಿತ ಅಪರಾಧ ದಳ, ಮಹಿಳಾ ಸಂರಕ್ಷಣೆ, ಮಾದಕ ವಸ್ತು ನಿಗ್ರಹ ದಳ, ವಿಶೇಷ ವಿಚಾರಣೆ, ಆರ್ಥಿಕ ಅಪರಾಧ ದಳಗಳು ಕಾರ್ಯನಿರ್ವಹಿಸಲಿವೆ.

ಸಂಚಾರ ವಿಭಾಗಕ್ಕೆ ಪ್ರತ್ಯೇಕ ಕಮಿಷನರ್‌
ನಗರದ ಸಂಚಾರ ಪೊಲೀಸ್‌ ವಿಭಾಗವು ಎಂದಿನಂತೆ ಪ್ರತ್ಯೇಕ ಪೊಲೀಸ್‌ ಆಯುಕ್ತರನ್ನು ಹೊಂದಿರಲಿದ್ದು, ಇವರು ಕೂಡ ಮುಖ್ಯ ಪೊಲೀಸ್‌ ಆಯುಕ್ತರ ಅಧೀನದಲ್ಲಿದ್ದಾರೆ. ಆದರೆ, ಹೊಸ ಪ್ರಸ್ತಾವನೆಯಲ್ಲಿಕಮಿಷನರ್‌ ವ್ಯಾಪ್ತಿಗೆ ಸಂಚಾರ ನಿರ್ವಹಣಾ ಕೇಂದ್ರ, ಸಂಚಾರ ತರಬೇತಿ ಹಾಗೂ ರಸ್ತೆ, ಸುರಕ್ಷತೆ ಸಂಸ್ಥೆಯ ಜವಾಬ್ದಾರಿ ನೀಡಲಾಗಿದೆ.

7,648 ಕೋಟಿ ರೂಪಾಯಿ ಬೇಕು
ಉದ್ದೇಶಿತ ಐದು ಪೊಲೀಸ್‌ ಕಮಿಷನರೇಟ್‌ಗಳ ಸ್ಥಾಪನೆ, ಐಜಿಪಿಯಿಂದ ಕಾನ್ಸ್‌ಟೆಬಲ್‌ ಹಾಗೂ ಲಿಪಿಕಿ ಸಿಬ್ಬಂದಿ ಸೇರಿದಂತೆ ಒಟ್ಟು 6,633 ಹೊಸ ಹುದ್ದೆಗಳು ಸೃಜನೆಯಾಗಬೇಕಿದೆ. ಹುದ್ದೆಗಳ ಸೃಜನೆ, ವೇತನ ಹಾಗೂ ಸಿಸಿಟಿವಿ ಸೇರಿದಂತೆ ಮೂಲಸೌಕರ್ಯ ಕಲ್ಪಿಸುವುದೂ ಸೇರಿದಂತೆ ಇತರೆ ಸೇರಿ ಒಟ್ಟು 7,648 ಕೋಟಿ ರೂ.ಅಗತ್ಯವಿದೆ ಎಂದು ಮೂಲಗಳು ಹೇಳಿವೆ.

Author