ನವದೆಹಲಿ,ವಿಧಾನಪರಿಷತ್ ಚುನಾವಣೆಯಲ್ಲಿ ರಾಜ್ಯ ಬಿಜೆಪಿಯಲ್ಲಿ ಅಡ್ಡಮತದಾನ ರಾಜಕೀಯಕ್ಕೆ ಪವಿತ್ರ ಕ್ಷೇತ್ರ ಧರ್ಮಸ್ಥಳವನ್ನು ತರಬೇಡಿ, ಪಕ್ಷದೊಳಗೇ ಸಮಿತಿಯ ವೇದಿಕೆಯಿಂದ ಪತ್ತೆಹಚ್ಚಿ, ಇದರಿಂದ ಪಕ್ಷಕ್ಕೆ ಮುಜುಗರ ಎಂದು ಹೈಕಮಾಂಡ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ವಿಧಾನಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡ ಮತದಾನದ ಕುರಿತು ಆಣೆ ಪ್ರಮಾಣ ಮಾಡಿಸಲು ಧರ್ಮಸ್ಥಳದಲ್ಲಿ ಬಿಜೆಪಿ ಶಾಸಕಾಂಗ ಸಭೆ ನಡೆಸುವುದಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತಿಳಿಸಿದ್ದಾರೆ.
ಪಕ್ಷದ ಹಿರಿಯ ಶಾಸಕರು ಹಾಗೂ ನಾಯಕರಿಂದ ವ್ಯಕ್ತವಾದ ತೀವ್ರ ವಿರೋಧದ ಬೆನ್ನಲ್ಲೇ ಆಣೆ ಪ್ರಮಾಣಕ್ಕೆ ಬ್ರೇಕ್ ಬಿದ್ದಿದ್ದು ಧರ್ಮಸ್ಥಳದಲ್ಲಿ ನಡೆಸಲು ಉದ್ದೇಶಿಸಿದ್ದ ಶಾಸಕಾಂಗ ಪಕ್ಷದ ಸಭೆಯನ್ನೂ ರದ್ದುಗೊಳಿಸಲಾಗಿದೆ.
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ:
ಧರ್ಮಸ್ಥಳದಲ್ಲಿ ಆಣೆ-ಪ್ರಮಾಣಕ್ಕೆ ಬಿಜೆಪಿ ನಿರ್ಧಾರ; ಶೀಘ್ರ ಶಾಸಕಾಂಗ ಪಕ್ಷ ಸಭೆ;
ಧರ್ಮಸ್ಥಳವನ್ನು ರಾಜಕೀಯ ಅಪಚಾರಕ್ಕೆ ಬಳಸುವುದು ಬೇಡ ಎಂದು ನಮ್ಮ ಪಕ್ಷದ ಹಿರಿಯರಿಂದಲೇ ಸಲಹೆ ಬಂದ ಹಿನ್ನೆಲೆಯಲ್ಲಿ ನಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದೇವೆ. ಪಕ್ಷದ ಆಂತರಿಕ ವಿಚಾರಗಳನ್ನು ಪಕ್ಷದ ವೇದಿಕೆಯಲ್ಲಿಯೇ ಚರ್ಚಿಸಲಾಗುವುದು ಎಂದು ತಿಳಿಸಿದರು. ಹೈಕಮಾಂಡ್ ನಿಂದ ಬುಲಾವ್ ಬಂದ ಹಿನ್ನೆಲೆಯಲ್ಲಿ ದೆಹಲಿಗೆ ಬಂದಿದ್ದ ಆರ್ ಅಶೋಕ್ ಮತ್ತು ಬಿ ವೈ ವಿಜಯೇಂದ್ರ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದರು.*ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ*ಅಡ್ಡ ಮತದಾನದ ಮೂಲಕ ಪಕ್ಷಕ್ಕೆ ಮೋಸ ಮಾಡಿದವರನ್ನು ಸುಮ್ಮನೆ ಬಿಡುವುದಿಲ್ಲ, ತಕ್ಕ ಶಿಕ್ಷೆ ಕೊಟ್ಟೇ ಕೊಡುತ್ತೇವೆ. ಅದು ಸೆರಗಲ್ಲಿ ಕೆಂಡ ಮುಚ್ಚಿಟ್ಟಂತೆ. ಯಾರು ಅಡ್ಡಮತದಾನ ಮಾಡಿದ್ದಾರೆ ಎಂದು ಒಂದಲ್ಲ ಒಂದು ದಿನ ಆಚೆ ಬಂದೇ ಬರುತ್ತದೆ ಎಂದರು.ಯಾರು ಪಕ್ಷಕ್ಕೆ ದ್ರೋಹ ಬಗೆದಿದ್ದಾರೋ ಅವರಿಗೆ ತಕ್ಕ ಬುದ್ಧಿ ಕಲಿಸುತ್ತೇವೆ. ಇಂತಹ ದುಷ್ಕೃತ್ಯ ಮತ್ತೆ ಮಾಡಬಾರದು ಎಂದರು.


