ಪಶ್ಚಿಮ ಬಂಗಾಳ | ಮುಖ್ಯಮಂತ್ರಿಯಾಗಿ ಸುವೇಂದು ಅಧಿಕಾರಿ ಪ್ರಮಾಣ ವಚನ ಸ್ವೀಕಾರ : ಪ್ರಧಾನಿ ಸೇರಿ ಗಣ್ಯರು ಭಾಗಿ

ಪಶ್ಚಿಮ ಬಂಗಾಳ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಸರ್ಕಾರದ ಮೊದಲ ಮುಖ್ಯಮಂತ್ರಿಯಾಗಿ ಇಂದು ಸುವೇಂದು ಅಧಿಕಾರಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಈ ಮೂಲಕ ರಾಜ್ಯದಲ್ಲಿ ಸಿಎಂ ಗದ್ದುಗೆ ಏರಿದ ಮೊದಲ ಬಿಜೆಪಿ ನಾಯಕ ಎಂಬ ಹೆಗ್ಗಳಿಕೆಗೆ ಸುವೇಂದು ಪಾತ್ರರಾದರು.

ಕೋಲ್ಕತ್ತಾದ ಐತಿಹಾಸಿಕ ಬ್ರಿಗೇಡ್ ಪೆರೇಡ್ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲರಾದ ಆರ್‌.ಎನ್. ರವಿ ಅವರು ಪ್ರತಿಜ್ಞಾವಿಧಿ ಬೋಧಿಸಿದರು.

ಸುವೇಂದು ಅಧಿಕಾರಿ ಜೊತೆಗೆ ಐವರು ಶಾಸಕರು ಸಹ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.ಬಿಜೆಪಿ ಶಾಸಕರಾದ ದಿಲೀಪ್ ಘೋಷ್, ಅಗ್ನಿಮಿತ್ರ ಪಾಲ್, ಶೋಕ್ ಕೀರ್ತಾನಿಯಾ, ಕ್ಷುದಿರಾಮ್ ತುಡು, ನಿಶಿತ್ ಪ್ರಾಮಾಣಿಕ್ ನೂತನ ಸರ್ಕಾರದ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಪ್ರಮಾಣ ವಚನ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್​ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್​ ನಬಿನ್​, ಕೇಂದ್ರ ಸಚಿವರಾದ ನರಾಮ್​ ಮೋಹನ್​ ನಾಯ್ಡು, ಧರ್ಮೇಂದ್ರ ಪ್ರಧಾನ್​, ಬಿಜೆಪಿ ಆಡಳಿತ ರಾಜ್ಯಗಳ ಸಿಎಂಗಳಾದ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ದೆಹಲಿ ಸಿಎಂ ರೇಖಾ ಗುಪ್ತಾ ಭಾಗಿಯಾಗಿದ್ದಾರೆ.

ಶುಕ್ರವಾರದಂದು ನಡೆದ ಬಿಜೆಪಿ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸುವೇಂದು ಅಧಿಕಾರಿಯನ್ನು ಪಶ್ಚಿಮ ಬಂಗಾಳದ ಮುಂದಿನ ಮುಖ್ಯಮಂತ್ರಿಯಾಗಿ ಅಧಿಕೃತವಾಗಿ ಘೋಷಿಸಿದ್ದರು.

ರಾಜ್ಯದಲ್ಲಿ ಮೊದಲ ಬಿಜೆಪಿ ಸರ್ಕಾರದ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಸಾಕ್ಷಿಯಾಗಲು ಉತ್ತರ ಬಂಗಾಳ ಮತ್ತು ಜಾರ್ಖಂಡ್‌ನಂತಹ ನೆರೆಯ ರಾಜ್ಯಗಳು ಸೇರಿದಂತೆ ಸಾವಿರಾರು ಬಿಜೆಪಿ ಬೆಂಬಲಿಗರು ಆಗಮಿಸಿದ್ದಾರೆ.

ಪ್ರಮಾಣ ವಚನ ಹಿನ್ನೆಲೆ ನಗರದ ವಿವಿಧೆಡೆ ಬಿಜೆಪಿ ಧ್ವಜಗಳು ಮತ್ತು ಕೇಸರಿ ಬ್ಯಾನರ್‌ಗಳನ್ನು ಹಿಡಿದ ಬೆಂಬಲಿಗರ ಗುಂಪುಗಳು ಕಾರ್ಯಕ್ರಮದ ಸ್ಥಳಕ್ಕೆ ಬಂದು, ಜೈ ಶ್ರೀ ರಾಮ್ ಘೋಷಣೆಗಳು ಮತ್ತು ಬಿಜೆಪಿ ನಾಯಕರ ಪರ ಘೋಷಣೆಗಳು ಕೇಳಿ ಬಂದವು.

ಟ್ಯಾಗೋರ್​ಗೆ ಪ್ರಧಾನಿ ನಮನ:

ಕಾರ್ಯಕ್ರಮದ ವೇದಿಯಲ್ಲಿ ಪ್ರಧಾನಿ ಮೋದಿ ಅವರು ನೊಬೆಲ್​ ಪ್ರಶಸ್ತಿ ಪುರಸ್ಕೃತ ರವೀಂದ್ರನಾಥ್​ ಟ್ಯಾಗೋರ್​ ಅವರ 165ನೇ ಜಯಂತಿ ಹಿನ್ನೆಲೆ ಅವರ ಫೋಟೋಗೆ ನಮಿಸಿದರು.

ಜೊತೆಗೆ ರಾಜ್ಯದ ಹಿರಿಯ ಬಿಜೆಪಿ ಕಾರ್ಯಕರ್ತ ಮಖನ್ಲಾಲ್ ಸರ್ಕಾರ್ ಅವರ ಆಶೀರ್ವಾದ ಪಡೆದರು.ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ಪ್ರಕಟವಾದ ವಿಧಾನಸಭೆ ಫಲಿತಾಂಶದಲ್ಲಿ ಬಿಜೆಪಿ 207 ಸ್ಥಾನಗಳೊಂದಿಗೆ ಭಾರೀ ಬಹುಮತದೊಂದಿಗೆ ಜಯಭೇರಿ ಬಾರಿಸಿದೆ.

Author